Wednesday, March 26, 2025
Homeರಾಷ್ಟ್ರೀಯ | Nationalಸಂಸತ್‌ನಲ್ಲಿ ಕೋಲಾಹಲ ಸೃಷ್ಟಿಸಿದ ಸಂವಿಧಾನ ಬದಲಿಸುವ ಡಿಕೆಶಿ ವಿವಾದಾತ್ಮಕ ಹೇಳಿಕೆ

ಸಂಸತ್‌ನಲ್ಲಿ ಕೋಲಾಹಲ ಸೃಷ್ಟಿಸಿದ ಸಂವಿಧಾನ ಬದಲಿಸುವ ಡಿಕೆಶಿ ವಿವಾದಾತ್ಮಕ ಹೇಳಿಕೆ

DK Shivakumars Remark Causes Uproar In Parliament

ನವದೆಹಲಿ,ಮಾ.24-ಸಿವಿಲ್‌ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಲು ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎಂಬ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್‌ ಅವರ ವಿವಾದಾತಕ ಹೇಳಿಕೆ ಸಂಸತ್‌ನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ಕಲಾಪವನ್ನು ಮುಂದೂಡಿದ ಪ್ರಸಂಗ ಜರುಗಿದೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲೂ ಈ ವಿಷಯ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಗದ್ದಲ, ಕೋಲಾಹಲ, ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಉಭಯ ಸದನಗಳ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.

ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿರುವ ಡಿ.ಕೆ.ಶಿವಕುಮಾರ್‌ ಅವರು ತಮ ಹೇಳಿಕೆ ಕುರಿತು ದೇಶದ ಜನತೆಯ ಕ್ಷಮೆ ಕೇಳಬೇಕು. ಅಲ್ಲದೆ ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಸ್ಪಷ್ಟನೆ ನೀಡಬೇಕೆಂದು ಎರಡೂ ಸದನಗಳಲ್ಲಿ ಆಡಳಿತಾರೂಢ ಬಿಜೆಪಿ ಸದಸ್ಯರು ಕಾಂಗ್ರೆಸ್‌‍ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ರಾಜ್ಯಸಭೆಯಲ್ಲಿ ಸಭಾಪತಿ ಜಗದೀಶ್‌ ಧನ್ಕರ್‌ ದಿನದ ಕಲಾಪವನ್ನು ಪ್ರಾರಂಭಿಸಲು ಮುಂದಾದರು. ಈ ವೇಳೆ ಕೇಂದ್ರ ಸಚಿವರೂ ಆದ ಜೆ.ಪಿ.ನಡ್ಡಾ ಮತ್ತು ಕಿರಣ್‌ ರಿಜಿಜು ಅವರು ವಿಷಯ ಪ್ರಸ್ತಾಪಿಸಲು ಸಭಾಪತಿ ಅನುಮತಿ ನೀಡಬೇಕೆಂದು ಕೋರಿದರು. ಇದಕ್ಕೆ ಬಿಜೆಪಿಯ ಕೆಲವು ಸಚಿವರು, ಸದಸ್ಯರು ದನಿಗೂಡಿಸಿ ವಿಷಯ ಪ್ರಸ್ತಾಪಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.

ಆಗ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌‍ ಸದಸ್ಯರು ಬಿಜೆಪಿ ವಿರುದ್ಧ ಮುಗಿಬಿದ್ದರು. ಗದ್ದಲದ ಮಧ್ಯೆಯೇ ವಿಷಯ ಪ್ರಸ್ತಾಪಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮುಸ್ಲಿಮರಿಗೆ ಸಿವಿಲ್‌ ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿ ನೀಡಲು ಸಾಧ್ಯವಾದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ಸಂವಿಧಾನದ ಮೇಲೆ ಮಾಡಿದ ದಾಳಿ. ಯಾರೋ ಒಬ್ಬ ಸಾಮಾನ್ಯ ವ್ಯಕ್ತಿ ಹೇಳಿದ್ದರೆ ಹೆಚ್ಚಿನ ಮಹತ್ವ ಇರುತ್ತಿರಲಿಲ್ಲ. ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ಅದರಲ್ಲೂ ಎಐಸಿಸಿಗೆ ತುಂಬ ಆತೀಯರಾಗಿರುವ ವ್ಯಕ್ತಿಯೊಬ್ಬರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದರೆ ಇದು ಪಕ್ಷದ ಹೇಳಿಕೆಯಾಗುತ್ತದೆ. ಇದಕ್ಕೆ ನಿಮ ಸ್ಪಷ್ಟನೆ ಏನು ಎಂದು ಖರ್ಗೆಯವರನ್ನು ಪ್ರಶ್ನೆ ಮಾಡಿದರು.

ಸಂವಿಧಾನದ ಬಗ್ಗೆ ಪುಖಾಂನುಪುಖವಾಗಿ ಮಾತನಾಡುವ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್‌‍ ದೇಶದ ಜನತೆಗೆ ಸ್ಪಷ್ಟನೆ ಕೊಡಬೇಕು. ಸಂವಿಧಾನ ಬದಲಾವಣೆ ಎಂದರೆ ಅದು ನಿಮ ಪಕ್ಷದ ಹೇಳಿಕೆಯಾಗುತ್ತದೆ. ಇದರ ಬಗ್ಗೆ ನಿಲುವು ತಿಳಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ದನಿಗೂಡಿಸಿದ ನಡ್ಡಾ, ಸಂವಿಧಾನದ ಬಗ್ಗೆ ಕಾಂಗ್ರೆಸ್‌‍ ಯಾವಾಗಲೂ ಅಸಹ್ಯ ಇಟ್ಟುಕೊಂಡಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಬದಲಾವಣೆಯ ಮಾತನಾಡುತ್ತದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಅಪಪ್ರಚಾರ ಮಾಡಿತು. ಆದರೂ ದೇಶದ ಜನತೆ ನಮನ್ನು ಕೈಬಿಡಲಿಲ್ಲ. ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಕುರಿತು ಸದನದಲ್ಲಿ ಚರ್ಚೆಯಾಗಲೇಬೇಕೆಂದು ಪಟ್ಟು ಹಿಡಿದರು.

ಆಗ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರೀ ಗದ್ದಲ-ಕೋಲಾಹಲ ಉಂಟಾಯಿತು. ಗದ್ದಲದ ನಡುವೆಯೇ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಸಂವಿಧಾನದ ರಕ್ಷಣೆಯ ಬಗ್ಗೆ ನಾವು ಬಿಜೆಪಿಗರಿಂದ ಕಲಿಯಬೇಕಾಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳಿದವರು ಯಾರು? ನಿಮ ಪಕ್ಷದ ಸಂಸದರಲ್ಲವೇ. ಸಂವಿಧಾನದ ಬಗ್ಗೆ ನೀವು ಮಾತನಾಡುವುದೆಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಎಂದರು.

ಬಿ.ಆರ್‌.ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ಯಾವುದೇ ಶಕ್ತಿಯಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಆಗ ಬಿಜೆಪಿ ಸದಸ್ಯರು ಖರ್ಗೆ ವಿರುದ್ಧ ಮುಗಿಬಿದ್ದರು. ನೀವು ತೇಪೆ ಹಚ್ಚುವ ಕೆಲಸ ಮಾಡಬೇಡಿ. ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ನಿಮ ನಿಲುವೇನು? ಎಂಬುದರ ಬಗ್ಗೆ ಅಷ್ಟೇ ಮಾತನಾಡಿ. ಇಲ್ಲದಿದ್ದರೆ ಕಾಂಗ್ರೆಸ್‌‍ ನಿಜ ಬಣ್ಣ ಬಯಲಾಗುತ್ತದೆ ಎಂದು ಬಿಜೆಪಿ ಸದಸ್ಯರು ಆರೋಪಗಳ ಸುರಿಮಳೆಗೈದರು. ಸದನ ಸಹಜ ಸ್ಥಿತಿಗೆ ಬಾರದಿದ್ದಾಗ ಕಲಾಪವನ್ನು ಮುಂದೂಡಲಾಯಿತು.

ಇತ್ತ ಲೋಕಸಭೆಯಲ್ಲೂ ಇದೇ ವಿಷಯ ಪ್ರಸ್ತಾಪವಾಗಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಭಾರೀ ಮಾತಿನ ಚಕಮಕಿ ಗದ್ದಲ ಉಂಟಾಗಿ ಸದನವನ್ನು ಮುಂದೂಡಲಾಯಿತು.
ವಿಷಯ ಪ್ರಸ್ತಾಪಿಸಿದ ಸಚಿವ ರಿಜಿಜು, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿರುವ ಡಿ.ಕೆ.ಶಿವಕುಮಾರ್‌ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು. ಅವರು ಎಷ್ಟೇ ಪ್ರಭಾವಿಗಳಿರಲಿ ಯಾರಿಗೆ ಆತೀಯರೇ ಇರಲಿ ಅದು ಮುಖ್ಯವಲ್ಲ. ಕೂಡಲೇ ಸಂಪುಟದಿಂದ ಕಿತ್ತು ಹಾಕುವಂತೆ ಎಐಸಿಸಿ ನಾಯಕರು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಿರ್ದೇಶನ ನೀಡಲಿ ಎಂದು ಒತ್ತಾಯಿಸಿದರು.

ಇದು ಅತ್ಯಂತ ಗಂಭೀರವಾದ ವಿಷಯ. ಧರ್ಮಾಧಾರಿತ ಮೀಸಲಾತಿ ಕೊಡುವುದು ಸಾಂವಿಧಾನಿಕ ವಿರುದ್ಧವಾಗಿದೆ. ಅದರಲ್ಲೂ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದರೆ ನಾವು ಮೌನ ವಹಿಸಲು ಸಾಧ್ಯವೇ? ಡಿ.ಕೆ.ಶಿವಕುಮಾರ್‌ ಅವರನ್ನು ಸಂಪುಟದಿಂದ ಕಿತ್ತುಹಾಕುವ ಶಕ್ತಿ ಇಲ್ಲವೇ? ಕಾಂಗ್ರೆಸ್‌‍ ನಾಯಕರು ತಮ ಜೇಬಿನಲ್ಲಿ ಸಂವಿಧಾನದ ಪುಸ್ತಕವನ್ನು ಇಟ್ಟುಕೊಂಡು ತಿರುಗಾಡುತ್ತಾರೆ. ಈಗ ಅದೇ ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ನೀವು ಮುಸ್ಲಿಮರಿಗೆ ಮೀಸಲಾತಿ ಕೊಡಲು ಸಂವಿಧಾನವನ್ನು ಬದಲಾವಣೆ ಮಾಡಬೇಕೇ? ಎಂದು ಪ್ರಶ್ನಿಸಿದರು. ಈ ವೇಳೆ ಸದನದಲ್ಲಿ ದೊಡ್ಡ ಕೋಲಾಹಲವೇ ಉಂಟಾಯಿತು. ಯಾರು ಏನು ಹೇಳುತ್ತಿದ್ದಾರೆಂಬುದೇ ತಿಳಿಯಲಿಲ್ಲ.

RELATED ARTICLES

Latest News