Wednesday, March 26, 2025
Homeರಾಷ್ಟ್ರೀಯ | Nationalವಿವಾದದ ಕಿಡಿ ಹೊತ್ತಿಸಿದ ಡಿಕೆಶಿ ಸಂವಿಧಾನ ಬದಲಿಸುವ ಹೇಳಿಕೆ, ಬಿಜೆಪಿ ಆಕ್ರೋಶ

ವಿವಾದದ ಕಿಡಿ ಹೊತ್ತಿಸಿದ ಡಿಕೆಶಿ ಸಂವಿಧಾನ ಬದಲಿಸುವ ಹೇಳಿಕೆ, ಬಿಜೆಪಿ ಆಕ್ರೋಶ

DK Shivakumar's statement on changing the constitution sparks controversy, BJP outrage

ನವದೆಹಲಿ,ಮಾ.24- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂವಿಧಾನ ಬದಲಾವಣೆ ಮಾಡಲಾಗುವುದು ಎಂಬ ಹೇಳಿಕೆಯು ವಿವಾದದ ಕಿಡಿ ಹೊತ್ತಿಸಿದ್ದು, ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಗುತ್ತಿಗೆಗಳಲ್ಲಿ ಮುಸಲ್ಮಾನರಿಗೆ ಶೇ.4ರಷ್ಟು ಮೀಸಲಾತಿ ವಿಚಾರವಾಗಿ ಮಾತನಾಡುತ್ತಾ, ಅಲ್ಪಸಂಖ್ಯಾತರಿಗೆ ಕೋಟಾ ನೀಡಲು ಬದಲಾವಣೆಗಳನ್ನು ಮಾಡಲಾಗುವುದು ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಈ ಕುರಿತು ಬಿಜೆಪಿಯ ಅಮಿತ್ ಮಾಲವೀಯ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕದ ಉಪಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಿವಕುಮಾ‌ರ್ ಅವರು ಮುಸ್ಲಿಮರಿಗೆ ಮೀಸಲಾತಿ ನೀಡಲು ಕಾಂಗ್ರೆಸ್ ಸಂವಿಧಾನವನ್ನು ತಿದ್ದುಪಡಿ ಮಾಡಲಿದೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.

ಸಂವಿಧಾನದ ಸ್ವಯಂ ಘೋಷಿತ ರಕ್ಷಕ ರಾಹುಲ್ ಗಾಂಧಿ ಈಗ ಎಲ್ಲಿದ್ದಾರೆ? ಕಾಂಗ್ರೆಸ್ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗಿಂತ, ಸ್ವಯಂ ಹಿತಾಸಕ್ತಿಗೆ ಆದ್ಯತೆ ನೀಡಿದೆ. ಅವರು ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು ಹಿಂದೆಮುಂದೆ ನೋಡಲಿಲ್ಲ. ಆದಾಗ್ಯೂ ಮುಸ್ಲಿಮರು ಹಿಂದೆ ಉಳಿಯುವಂತೆ ನೋಡಿಕೊಂಡರು. ಇದಕ್ಕಿಂತ ದೊಡ್ಡ ದ್ರೋಹ ಇನ್ನೊಂದಿಲ್ಲ. ಕಾಂಗ್ರೆಸ್ ಎಂದಿಗೂ ಹಿಂದೂಗಳಿಗೆ ನ್ಯಾಯಯುತವಾಗಿ ವರ್ತಿಸಿಲ್ಲ ಮತ್ತು ಎಂದಿಗೂ ಆಗುವುದಿಲ್ಲ ಎಂದಿದ್ದಾರೆ.

ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದು, ಬೆಕ್ಕು ಚೀಲದಿಂದ ಹೊರಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ. ಆಕ್ರಮ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸಲು ಬಯಸುವುದಾಗಿ ಕಾಂಗ್ರೆಸ್ ಪಕ್ಷ ಒಪ್ಪಿಕೊಂಡಿದೆ ಎಂದು ಟೀಕೆ ಮಾಡಿದ್ದಾರೆ.

ಕಾಂಗ್ರೆಸ್ ಸಂವಿಧಾನ ವಿರೋಧಿ, ಮೀಸಲಾತಿ ವಿರೋಧಿ ಮತ್ತು ಅಂಬೇಡ್ಕರ್ ವಿರೋಧಿ ಎಂಬುದು ಸ್ಪಷ್ಟವಾಗಿದೆ. ಮುಸಲ್ಮಾನರಿಗೆ ಗುತ್ತಿಗೆಗಳಲ್ಲಿ ಶೇ. 4ರಷ್ಟು ಮೀಸಲಾತಿ ನೀಡುತ್ತಿರುವುದು ಸಂವಿಧಾನ ಬಾಹಿರ ಎಂದು ಡಿಕೆ ಶಿವಕುಮಾರ್ ಅವರೇ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಸಂವಿಧಾನವನ್ನೇ ಬದಲಾಯಿಸುವುದಾಗಿ ಹೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಡಿಕೆಶಿ ಹೇಳಿದ್ದೇನು?:
ಖಾಸಗಿ ವಾಹಿನಿಯೊಂದರ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡುತ್ತಾ, ಮುಸಲ್ಮಾನರಿಗೆ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿ ನೀಡುವ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮುಸಲ್ಮಾನರು ಬೈಕ್, ಗಾಡಿಗಳಿಗೆ ಪಂಕ್ಚರ್ ಹಾಕುತ್ತಾರೆ ಎಂದು ಟೀಕಿಸುತ್ತಾರೆ. ಸಮಾಜದ ಪ್ರತಿಯೊಂದು ವರ್ಗವನ್ನು ಮೇಲಕ್ಕೆ ಎತ್ತುವುದು ಸರ್ಕಾರವಾಗಿ ನಮ್ಮ ಜವಾಬ್ದಾರಿ.

ಸಮಾಜದಲ್ಲಿ ಮುಂದಕ್ಕೆ ಬರಲು, ಅಭಿವೃದ್ಧಿಯಲ್ಲಿ ಭಾಗಿಯಾಗಲು ನಾವು ಅವರಿಗೆ ಅವಕಾಶ ಮಾಡಿಕೊಡಬೇಕು. ಹಾಗಾಗಿ ಅದಕ್ಕೆ ಪೂರಕವಾದ ಒಂದಷ್ಟು ಕೆಲಸಗಳನ್ನು ಮಾಡುತ್ತಿದ್ದೇವೆ. ನಮ್ಮ ನಿಲುವನ್ನು ಪ್ರಶ್ನಿಸಿ ಸಾಕಷ್ಟು ಮಂದಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ ಎಂದು ನಮಗೆ ತಿಳಿದಿದೆ. ಈ ಹಿಂದೆ ನ್ಯಾಯಾಧೀಶರು ಸಹ ಸಂವಿಧಾನವನ್ನು ತಿದ್ದುಪಡಿ ಮಾಡಿದ್ದಾರೆ ಎಂದಿದ್ದರು.

ಇನ್ನು ಮುಂದುವರೆದು ಮಾತನಾಡುತ್ತಾ, ವಿರೋಧ ಪಕ್ಷವು ಈ ವಿಷಯದ ಬಗ್ಗೆ ನ್ಯಾಯಾಲಯದ ಮೊರೆ ಹೋಗಬಹುದು. ಸಂವಿಧಾನವನ್ನು ಬದಲಾಯಿಸಿದ ತೀರ್ಪುಗಳು ಈ ಹಿಂದೆಯೂ ಬಂದಿವೆ ಮತ್ತು ಅಂತಹ ಒಂದು ದಿನಕ್ಕಾಗಿ ಕಾಯಬೇಕು ಎಂದು ಹೇಳಿದ್ದರು.
ನ್ಯಾಯಾಲಯ ಏನು ಹೇಳುತ್ತದೆಂದು ಕಾದು ನೋಡೋಣ. ನಾವು ಮುನ್ನುಡಿ ಹಾಡಿದ್ದೇವೆ. ಒಳ್ಳೆಯ ದಿನ ಬಂದೇ ಬರುತ್ತದೆ. ಹಲವು ಬದಲಾವಣೆಗಳಾಗಿವೆ. ಸಂವಿಧಾನ ಬದಲಾಗಲಿದೆ. ಸಂವಿಧಾನವನ್ನೂ ಬದಲಾಯಿಸುವ ತೀರ್ಪುಗಳಿವೆ ಎಂದಿದ್ದರು.

RELATED ARTICLES

Latest News