ಬೆಂಗಳೂರು, ಏ.15- ಶಿಲ್ಪಿ ರೂಪಿಸಿದ ಮೂರ್ತಿ ಹೇಗೆ ಪೂಜೆಗೆ ಅರ್ಹವೋ ಹಾಗೆ ವ್ಯಕ್ತಿಯೂ ಕೂಡ ಪೂಜೆ, ಅಧಿಕಾರ ಸೇರಿದಂತೆ ಎಲ್ಲಾ ರೀತಿಯಲ್ಲೂ ಅರ್ಹರಾಗುತ್ತಾರೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ತಿಳಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮಹಾಲಕ್ಷ್ಮಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಅಭಯ ಆಂಜನೇಯ ಸ್ವಾಮಿ, ಪ್ರಸನ್ನ ಮಹಾಗಣಪತಿ ಹಾಗೂ ಮಾತಾ ಲಲಿತಾಂಬಿಕಾ ದೇವಾಲಯದ ಕುಂಭಾಭಿಷೇಕ, ಮಹೋತ್ಸವ ಮತ್ತು ಲೋಕಾರ್ಪಣಾ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ಮಾತಾ, ಲಲಿತ, ಸಹಸ್ರನಾಮ, ಪಾರಾಯಣ ಮತ್ತು ಸತ್ಸಂಗ ಪ್ರವಚನ ಹಾಗೂ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇವಲ ಉಪಮುಖ್ಯಮಂತ್ರಿ ಮಾತ್ರವಲ್ಲ, ತಮ್ಮನ್ನು ತಾವು ಸಮರ್ಪಿಸಿಕೊಂಡ ವ್ಯಕ್ತಿ. ವಿಗ್ರಹ ಕೆತ್ತುವ ಮುನ್ನ ಯಾವ ರೀತಿ ಇರುತ್ತದೆ ಎಂದು ನೋಡಿದ್ದೀರ. ಹಲವು ಏಟುಗಳನ್ನು ತಿಂದು ಸಹಿಸಿಕೊಂಡ ಕಲ್ಲುಮೂರ್ತಿಯಾದ ಮೇಲೆ ಪೂಜೆಗೆ ಅರ್ಹವಾಗಿ ಕೈ ಮುಗಿಸಿಕೊಳ್ಳುತ್ತದೆ. ಹಾಗೆಯೇ ಬದುಕಿನಲ್ಲಿ ಬರುವಂತಹ ಬವಣೆ, ನೋವು, ಕಷ್ಟ, ತಿರಸ್ಕಾರ, ಹಿಂಸೆಯನ್ನು ಸಹಿಸಿಕೊಂಡು ವಿಗ್ರಹವಾಗುವಂತೆ ವ್ಯಕ್ತಿಯೂ ಕೂಡ ಪೂಜೆಗೆ, ಅಧಿಕಾರಕ್ಕೆ ಸೇರಿ ಎಲ್ಲಾ ರೀತಿಯಲ್ಲಿ ಅರ್ಹನಾಗುತ್ತಾನೆ. ಅಂತಹುದಕ್ಕೆ ಸೇರಿದವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಮಾರ್ಮಿಕವಾಗಿ ನುಡಿದರು.
ಹಲವಾರು ನೋವು, ಕಷ್ಟ ಸಹಿಸಿಕೊಂಡು ಮೂರ್ತಿಯಾಗಿ, ಶಿಲೆಯಾಗಿ, ವ್ಯಕ್ತಿಯಾಗಿ ನಿಂತಿದ್ದಾರೆ. ಅವರು ಇಲ್ಲಿ ಬಂದು ಮಾತನ್ನಾಡಿದ್ದು ಬಹಳ ಸಂತೋಷವಾಗಿದೆ ಎಂದು ಹೇಳಿದರು.