ಬೆಂಗಳೂರು,ಡಿ.2- ಒಕ್ಕಲಿಗರ ಮಹಾಸಂಸ್ಥಾನ ಮಠಾಧೀಶ ಶ್ರೀ ಚಂದ್ರಶೇಖರ ಸ್ವಾಮೀಜಿ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಇಲ್ಲಿಗೇ ಬಿಟ್ಟುಬಿಡುವಂತೆ ಮಾಜಿ ಸಂಸದ ಡಿ.ಕೆ.ಸುರೇಶ್ ಮನವಿ ಮಾಡಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಕೂಡ ದ್ವೇಷ ರಾಜಕಾರಣ ಮಾಡಬಾರದು, ಸ್ವಾಮೀಜಿ ವಿರುದ್ಧವೂ ಕೂಡ ಈ ರೀತಿಯ ದ್ವೇಷ ಒಳ್ಳೆಯದಲ್ಲ ಎಂದಿದ್ದಾರೆ.
ಸ್ವಾಮೀಜಿ ತಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಸಂವಿಧಾನದಲ್ಲಿ ಎಲ್ಲಾ ಹಕ್ಕುಗಳನ್ನೂ ಕೊಡಲಾಗಿದೆ. ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ ನಂತರ ದೂರು ದಾಖಲಿಸುವುದು ಸೂಕ್ತ ಅಲ್ಲ. ಅದನ್ನು ಅಲ್ಲಿಗೇ ಬಿಟ್ಟುಬಿಡುವುದು ಒಳ್ಳೆಯದು ಎಂದರು.ಬಿಜೆಪಿಯವರು ಯಾವ ರೀತಿಯ ಹೋರಾಟವನ್ನಾದರೂ ಮಾಡಲಿ, ನಾವು ಅಭಿವೃದ್ಧಿ ದೃಷ್ಟಿಯಿಂದ ನಮ ಕೆಲಸ ಮಾಡುತ್ತೇವೆ. ವಿಪಕ್ಷಗಳು ಅಭಿವೃದ್ಧಿಗೆ ಸಕಾರಾತಕವಾಗಿ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ರಾಮನಗರದಲ್ಲಿ ಎಲ್ಲಾ ಸ್ಥಾನಗಳನ್ನೂ ಗೆಲ್ಲುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡುವುದಾಗಿ ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್, ಸಂತೋಷ ಅವರ ಆಶಾಭಾವನೆಗೆ ಸ್ವಾಗತಾರ್ಹ ಎಂದರು.
ವಿಜಯೇಂದ್ರ ಅವರು ಡಿ.ಕೆ.ಶಿವಕುಮಾರ್ರವರ ಜೊತೆ ಆತೀಯರಾಗಿದ್ದಾರೆ ಎಂದು ಯತ್ನಾಳ್ ಹೇಳಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್, ಯತ್ನಾಳ್ ಕೂಡ ಡಿ.ಕೆ.ಶಿವಕುಮಾರ್ರವರೊಂದಿಗೆ ಆತೀಯರಾಗಿದ್ದಾರೆ. ಕೆಲವು ಕಾಗದ ಪತ್ರಗಳಿಗೆ ಸಹಿ ಮಾಡಿಸಿಕೊಳ್ಳಲು ಆಗಾಗ್ಗೆ ಬರುತ್ತಿರುತ್ತಾರೆ ಎಂದು ಹೇಳಿದರು.
ಹಾಸನದಲ್ಲಿ ಎಲ್ಲರೂ ಸೇರಿಯೇ ಕಾಂಗ್ರೆಸ್ ಸಮಾವೇಶ ಮಾಡುತ್ತಿದ್ದೇವೆ. ಪಕ್ಷ ಮೊದಲು ಎಂದು ಅವರಿಗೆ ಅರ್ಥವಾಗಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಬಣಕ್ಕೆ ಟಾಂಗ್ ನೀಡಿದರು.ಕೆಪಿಸಿಸಿ ಅಧ್ಯಕ್ಷರ ಹುದ್ದೆ ಖಾಲಿ ಇಲ್ಲ. ಹೀಗಾಗಿ ಅದರ ಬಗ್ಗೆ ಚರ್ಚೆ ಅಪ್ರಸ್ತುತ. ನಾನು ಯಾವುದಕ್ಕೂ ಆಸೆ ಪಡುವುದಿಲ್ಲ. ವಿಶ್ರಾಂತಿಯಲ್ಲಿದ್ದೇನೆ. ಹಾಗಾಗಿ ಅಧ್ಯಕ್ಷರ ಆಕಾಂಕ್ಷಿ ಅಲ್ಲ ಎಂದರು.
ಯಾವುದೂ ನಮ ಸ್ವಂತ ಅಲ್ಲ. ಅಧ್ಯಕ್ಷ ಸ್ಥಾನ ಕೊಟ್ಟರೆ ಸಚಿವ ಸ್ಥಾನ ತ್ಯಾಗ ಮಾಡುವುದಾಗಿ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಅವರು ಸರ್ವಪಕ್ಷದ ನಾಯಕರಿಗಿಂತಲೂ ಹೆಚ್ಚಿನ ಶಕ್ತಿ ಇದೆ, ದಳ ಬಿಜೆಪಿ ಜೊತೆಗೂ ಸಖ್ಯ ಇದೆ. ಅಧ್ಯಕ್ಷ ಸ್ಥಾನವನ್ನು ಅವರಿಗೆ ಧಾರಾಳವಾಗಿ ಕೊಡಲಿ. ನಾವೆಲ್ಲಾ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಡಿ.14 ರಂದು ಕೃತಜ್ಞತಾ ಸಮಾವೇಶ ಮಾಡಲು ನಿರ್ಧರಿಸಲಾಗಿದ್ದು, ಶಾಸಕರು ವಿಧಾನಮಂಡಲದ ಅಧಿವೇಶನ ನಡೆಯುವುದರಿಂದ ಸಮಯ ಸಿಗುವುದಿಲ್ಲ ಎಂದಿದ್ದಾರೆ. ಬದಲಿ ದಿನಾಂಕವನ್ನು ತಿಳಿಸುವುದಾಗಿ ಹೇಳಿದರು. ಶಾಸಕ ಮುನಿರತ್ನ ವಿರುದ್ಧ ನಾರಾಯಣಸ್ವಾಮಿ ಮಾಡಿರುವ ಆರೋಪದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು.