ಬೆಂಗಳೂರು,ಮೇ18– ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಮಾಡಿರುವ 100 ಕೋಟಿ ಆಫರ್ ಆರೋಪ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದು, ಕಾಂಗ್ರೆಸ್ ನಾಯಕರೂ ವಿಚಲಿರಾಗಿದ್ದಾರೆ. ದೇವರಾಜೇಗೌಡ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತ್ರವಲ್ಲದೆ, ಸಚಿವರಾದ ಚೆಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಹೆಸರನ್ನೂ ಉಲ್ಲೇಖ ಮಾಡಿರುವುದು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಪ್ರಜ್ವಲ್ ಅವರ ಕಾರು ಚಾಲಕ ಕಾರ್ತಿಕ್ ಗೌಡನ ಹತ್ತಿರ ಪೆನ್‌ಡ್ರೈವ್ ತರಿಸಿಕೊಂಡು ಎಲ್ಲಾ ರೆಡಿ ಮಾಡಿದ ಡಿ.ಕೆ ಶಿವಕುಮಾರ್ ನಾಲ್ಕು ಸಚಿವರ ಕಮಿಟಿ ಮಾಡಿ ಇದನ್ನೆಲ್ಲಾ ಹ್ಯಾಂಡಲ್ ಮಾಡಬೇಕು ಎಂದು ಬಿಟ್ಟಿದ್ದಾರೆ ಎಂದು ದೇವರಾಜೇಗೌಡ ಆರೋಪ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಚನ್ನರಾಯಪಟ್ಟಣದ ಗೋಪಾಲಸ್ವಾಮಿ ಬಳಿ 5 ಕೋಟಿ ಹಣ ಕೊಟ್ಟು ಸಂಧಾನಕ್ಕೆ ಕಳಿಸಿದ್ದರು. ಈ ಸಂದರ್ಭದಲ್ಲಿ ಶಿವಕುಮಾರ್ ಅವರು 100 ಕೋಟಿ ಆಫರ್ ಮಾಡಿದರು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ.
ಆರಂಭದಲ್ಲೇ ಡಿ.ಕೆ.ಶಿವಕುಮಾರ್, ಚೆಲುವರಾಯಸ್ವಾಮಿ, ಕೃಷ್ಣ ಬೈರೇಗೌಡ ಅವರು ಈ ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡುತ್ತಾ ಬಂದಿದ್ದರು. ಇದಕ್ಕೆ ಪ್ರಿಯಾಂಕ್ ಖರ್ಗೆ ಕೂಡ ಧ್ವನಿಗೂಡಿಸಿದ್ದರು. ಆದರೆ ಇದೀಗ ದೇವರಾಜೇಗೌಡ ಈ ನಾಲ್ವರನ್ನು ಉಲ್ಲೇಖಿಸಿ ಆರೋಪಿಸಿರುವುದು ಸಹಜವಾಗಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ದೇವರಾಜೇಗೌಡ ಈ ಹಿಂದೆಯೂ ಡಿ.ಕೆ. ಶಿವಕುಮಾರ್ ಗೆ ಸಂಬಂಧಿಸಿದ ಆಡಿಯೋ ಬಿಡುಗಡೆ ಮಾಡಿದ್ದರು. ಎಲ್.ಆರ್.ಶಿವರಾಮೇಗೌಡ ಜೊತೆಗೆ ನಡೆಸಿದ ಮಾತುಕತೆ ಹಾಗೂ ಇದೇ ಸಂದರ್ಭದಲ್ಲಿ ಡಿಕೆಶಿ ಜೊತೆಗೂ ನಡೆಸಿದ ಮಾತುಕತೆಯ ಆಡಿಯೋ ಬಿಡುಗಡೆ ಮಾಡಿದ್ದರು. ಆದರೆ ಇದರ ಪೂರ್ತಿ ವಿವರವನ್ನು ಅವರು ಬಹಿರಂಗಪಡಿಸಿರಲಿಲ್ಲ.
ಈ ಆಡಿಯೋ ಬಿಡುಗಡೆಯ ಬೆನ್ನಲ್ಲೇ ದೇವರಾಜೇಗೌಡ ಅವರನ್ನು ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧನ ಮಾಡಲಾಗಿದೆ. ಇದೀಗ ಅವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ನಡುವೆ ಅವರು ರಾಜ್ಯದ ನಾಲ್ವರು ಸಚಿವರ ವಿರುದ್ಧ ಗಂಭೀರ ಸ್ವರೂಪದ ಆರೋಪವನ್ನು ಮಾಡಿದ್ದಾರೆ.ಇನ್ನು ಬಿಜೆಪಿ ಈ ಆರೋಪವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.