ಬೆಂಗಳೂರು,ಜು.13– ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳ ನೇಮಕಾತಿಗೆ ಸಂಬಂಧಪಟ್ಟಂತೆ ಡಿ.ಕೆ. ಶಿವಕುಮಾರ್ ಅಡ್ಡಲಾಗಿದ್ದು, ಇದೇ 16ರಂದು ನಡೆಯಲಿರುವ ಸಭೆಯಲ್ಲಿ ಸಂಧಾನ ಮಾತುಕತೆಗಳಾಗುವ ಸಾಧ್ಯತೆಯಿದೆ.
ವಿಧಾನ ಪರಿಷತ್ತಿನ ಸದಸ್ಯ ರನ್ನಾಗಿ ನೇಮಿಸಲು ಕೆಪಿಸಿಸಿಯ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು, ದಲಿತ ಸಂಘರ್ಷ ಸಮಿತಿಯ ಮುಖಂಡ ಡಿ.ಜಿ. ಸಾಗರ್, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಅನಿವಾಸಿ ಭಾರತೀಯರ ಘಟಕದ ಉಪಾಧ್ಯಕ್ಷೆ ಆರತಿ ಕೃಷ್ಣ ಅವರ ಹೆಸರುಗಳು ಕೇಳಿ ಬಂದಿವೆ. ಇನ್ನೇನು ರಾಜ್ಯಭವನಕ್ಕೆ ಪಟ್ಟಿ ರವಾನೆಯಾಗಬೇಕು ಎಂಬ ಹಂತದಲ್ಲಿ ತಡೆ ಹಿಡಿಯಲ್ಪಟ್ಟಿದೆ.
ನೇಮಕಾತಿಯಲ್ಲಿ ತಾವು ಸೂಚಿಸಿದವರಿಗೆ ಅವಕಾಶ ಸಿಕ್ಕಿಲ್ಲ ಎಂಬ ಕಾರಣಕ್ಕೆ ಡಿ.ಕೆ. ಶಿವಕುಮಾರ್ ತಗಾದೆ ತೆಗೆದಿದ್ದು, ಇಡೀ ಪಟ್ಟಿಯನ್ನು ತಡೆ ಹಿಡಿಯುವಂತೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಾಮಾಣಿಕ ನಡೆವಳಿಕೆ ಭಾರೀ ಪ್ರಮಾಣದ ಬೆಲೆ ತೆರುವಂತೆ ಮಾಡಿದೆ.
ಸಂಭವನೀಯ ನಾಲ್ವರ ಹೆಸರುಗಳ ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ರಮವಾಗಿ ಸಹಿ ಹಾಕಿದ್ದರು.
ಪಟ್ಟಿ ಇನ್ನೇನು ರಾಜ್ಯಭವನಕ್ಕೆ ರವಾನೆಯಾಗಬೇಕು ಎಂಬ ಹಂತದಲ್ಲಿ ಅದು ಸೋರಿಕೆಯಾಗಿತ್ತು. ವಿಷಯ ತಿಳಿದ ರಮೇಶ್‌ಬಾಬು, ಆರತಿಕೃಷ್ಣ ಮುಖ್ಯಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರತಿಕೃಷ್ಣ ಅವರನ್ನು ಕುರಿತು ನೀವು ಈಗಾಗಲೇ ಅನಿವಾಸಿ ಭಾರತೀಯರ ಘಟಕದಲ್ಲಿ ಕೆಲಸ ಮಾಡುತ್ತಿದ್ದೀರಾ. ವಿಧಾನ ಪರಿಷತ್ತಿನ ಒಂದು ವರ್ಷದ ಸದಸ್ಯತ್ವಕ್ಕೆ ನಿಮನ್ನು ನೇಮಕ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತಮ ಅವಧಿ ಕೇವಲ ಒಂದು ವರ್ಷ ಎಂದು ತಿಳಿದ ಆರತಿಕೃಷ್ಣ ಬೇಸರಗೊಂಡಿದ್ದಾರೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಅವರು ತಕ್ಷಣವೇ ದೆಹಲಿಯ ನಾಯಕರನ್ನು ಸಂಪರ್ಕಿಸಿ ತಮ ಅಳಲು ಹೇಳಿಕೊಂಡಿದ್ದಾರೆ. ಹೀಗಾಗಿ ರಾಜ್ಯ ಭವನ ತಲುಪಬೇಕಾಗಿದ್ದ ಪಟ್ಟಿ ತಡೆ ಹಿಡಿಯಲ್ಪಟ್ಟಿದೆ.
ಈ ಗ್ಯಾಪ್‌ನಲ್ಲಿ ನಾನಾ ರೀತಿಯ ಅಸಮಾಧಾನಗಳು, ಚರ್ಚೆಗಳು ತಲೆ ಎತ್ತಿವೆ. ಡಿ.ಕೆ. ಶಿವಕುಮಾರ್ ಅವರು ಬಿ.ಎಲ್. ಶಂಕರ್ ಮತ್ತು ವಿನಯ್ ಕಾರ್ತಿಕ್ ಅವರ ಹೆರುಗಳನ್ನು ವಿಧಾನ ಪರಿಷತ್ತಿಗೆ ಶಿಫಾರಸು ಮಾಡಲು ಸೂಚಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆಯಿಂದ ದಿನೇಶ್ ಅಮೀನ್‌ಮಟ್ಟು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಕಡೆಯಿಂದ ಡಿ.ಜಿ. ಸಾಗರ್ ಅವರ ಹೆಸರುಗಳು ಅಖೈರುಗೊಂಡಿದ್ದವು.
ಡಿಕೆ ಶಿವಕುಮಾರ್ ಶಿಫಾರಸು ಮಾಡಿದ್ದ ಹೆಸರುಗಳ ಬದಲಾಗಿ ಹೈಕಮಾಂಡ್‌ನಿಂದ ಆರತಿ ಕೃಷ್ಣ ಅವರ ಹೆಸರು ಸೇರ್ಪಡೆಯಾಗಿತ್ತು. ನಾಲ್ಕನೇ ಸ್ಥಾನಕ್ಕೆ ಪ್ರತಿಯೊಬ್ಬ ನಾಯಕರು ಮೂರರಿಂದ ನಾಲ್ಕು ಮಂದಿ ಹೆಸರುಗಳನ್ನು ಸಲಹೆ ಮಾಡಿದ್ದರು.ಅವರಲ್ಲಿ ರಮೇಶ್‌ಬಾಬು ಹೆಸರಿಗೆ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ್ ಖರ್ಗೆ ಎರಡೂ ಕಡೆಯಿಂದಲೂ ಶಿಫಾರಸ್ಸಾಗಿತ್ತು. ಹೀಗಾಗಿ ನಾಲ್ಕನೇ ಸ್ಥಾನಕ್ಕೆ ರಮೇಶ್‌ಬಾಬು ಅವರ ಹೆಸರು ಸರ್ವಾನುಮತದಿಂದ ಆಯ್ಕೆಯಾಗಿತ್ತು. ಇದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಒತ್ತಾಸೆಯೂ ಇತ್ತು.
ಆರತಿ ಕೃಷ್ಣ ಅವರ ತಕರಾರಿನಿಂದಾಗಿ ಪಟ್ಟಿ ರಾಜ್ಯಭವನ ತಲುಪುವುದು ವಿಳಂಬವಾಗುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಅಲರ್ಟ್ ಆಗಿದ್ದಾರೆ.ಪಕ್ಷದ ನಿರ್ಧಾರ ಎಂಬ ಕಾರಣಕ್ಕಾಗಿ ತಾವು ಸಲಹೆ ಮಾಡಿದವರ ಹೆಸರುಗಳು ಪಟ್ಟಿಯಲ್ಲಿ ಇಲ್ಲದೇ ಇದ್ದರೂ, ಮರು ಮಾತನಾಡದೇ ಸಹಿ ಹಾಕಿದ ಡಿ.ಕೆ. ಶಿವಕುಮಾರ್ ತಮ ಬೆಂಬಲಿಗರಿಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಲಾರಂಭಿಸಿದ್ದಾರೆ.
ಈ ನಡುವೆ ರಮೇಶ್‌ಬಾಬು ಜೆಡಿಎಸ್‌ನಿಂದ ಬಂದು ಅಲ್ಪಾವಧಿಯಾಗಿದೆ, ಪರಿಷತ್ತಿನ ಸದಸ್ಯತ್ವ ಸ್ಥಾನ ನೀಡುವ ಅಗತ್ಯವೇನು? ನಾವು ಹಲವಾರು ವರ್ಷಗಳಿಂದ ಪಕ್ಷ ನಿಷ್ಠರಾಗಿ ಕೆಲಸ ಮಾಡುತ್ತಿದ್ದೇವೆ. ನಮನ್ನು ಕಡೆಗಣಿಸಲಾಗುತ್ತಿದೆ ಎಂದು ಬಹಳಷ್ಟು ಮಂದಿ ನಿಷ್ಠಾವಂತರು ಅದರಲ್ಲೂ ಸಾಮಾಜಿಕ ಜಾಲತಾಣ ಮಾಧ್ಯಮ ಘಟಕದಲ್ಲಿ ಕೆಲಸ ಮಾಡಿದವರು ತಿರುಗಿ ಬಿದ್ದಿದ್ದಾರೆ.
ಇದನ್ನು ತಮ ಅನುಕೂಲಕ್ಕೆ ಬಳಸಿಕೊಂಡ ಡಿ.ಕೆ. ಶಿವಕುಮಾರ್ ಒಟ್ಟಾರೆ ಪಟ್ಟಿಗೆ ತಡೆಯಾಗುವಂತೆ ಮಾಡಿದ್ದಾರೆ. ಹೀಗಾಗಿ ಮೂರು ತಿಂಗಳಾದರೂ ವಿಧಾನಪರಿಷತ್ತಿನ ಆಯ್ಕೆ ಇತ್ಯರ್ಥವಾಗದೆ ಗಜ ಪ್ರಸವದಂತಾಗಿದೆ.
- ಪೊಲೀಸ್ ಕಸ್ಟಡಿ ಸಾವು ವಿರೋಧಿಸಿ ಬೀದಿಗಿಳಿದ ವಿಜಯ್
- ಸಾಲಬಾಧೆ ತಾಳಲಾರದೆ ಒಂದೇ ಗ್ರಾಮದ ಇಬ್ಬರು ರೈತರ ಆತ್ಮಹತ್ಯೆ
- ಬೆಳಗಾವಿ : ನಡು ರಸ್ತೆಯಲ್ಲೇ ಯುವ ಗಾಯಕನ ಬರ್ಬರ ಹತ್ಯೆ
- ಕಿರು ತೆರೆ ನಟಿ ಶ್ರುತಿ ಮೇಲಿನ ಹಲ್ಲೆಗೆ ನೈಜ ಕಾರಣ ಬಿಚ್ಚಿಟ್ಟ ಪತಿ
- ಬಿಹಾರ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆ..!