ಬೆಂಗಳೂರು, ಅ.11- ಸುರಂಗ ರಸ್ತೆಯಿಂದಾಗಿ ಲಾಲ್‌ಬಾಗ್, ಕಬ್ಬನ್‌ಪಾರ್ಕ್ ಸೇರಿದಂತೆ ಪ್ರಮುಖ ಉದ್ಯಾನವನಗಳಿಗೆ ಹಾನಿಯಾಗಲಿದೆ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.
ಇಂದು ಬೆಳಗ್ಗೆಯೇ ಲಾಲ್‌ಬಾಗ್ ಉದ್ಯಾನವನಕ್ಕೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್, ಅಲ್ಲಿನ ಕೆರೆದಂಡನೆಯಲ್ಲಿ ವಾಯುವಿಹಾರ ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಡಿ.ಕೆ.ಶಿವಕುಮಾರ್ ಅವರ ಜೊತೆ ಉದ್ಯಾನವನ ನಡಿಗೆದಾರರು ಜೊತೆಯಾದರು. ಈ ಸಂದರ್ಭದಲ್ಲಿ ಹಲವಾರು ಮಂದಿಯ ಜೊತೆ ಉಪಮುಖ್ಯಮಂತ್ರಿ ಚರ್ಚೆ ನಡೆಸಿದ್ದಲ್ಲದೇ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಕೆಲವರು ಮನವಿ ಸಲ್ಲಿಸಿದರು. ಅವುಗಳನ್ನು ಪರಿಶೀಲಿಸುವಂತೆ ಉಪಮುಖ್ಯಮಂತ್ರಿ ಅಧಿಕಾರಿಗಳಿಗೆ ಹೇಳಿದರು.
ಕೆಲವು ಮಹಿಳೆಯರು ಈ ವೇಳೆ ಡಿ.ಕೆ.ಶಿವಕುಮಾರ್ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರಿಗೆ ನಿಮಿಂದ ಒಳ್ಳೆಯ ಕೆಲಸಗಳಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಯಶಸ್ವಿನಿ ಎಂಬ ಸಾಫ್‌್ಟವೇರ್ ಎಂಜಿನಿಯರ್ ತಮ ಅತ್ತೆ ಹಾಗೂ ಪತಿಯೊಂದಿಗೆ ಹಾಡುತ್ತಾ ವಾಯುವಿಹಾರದಲ್ಲಿ ತೊಡಗಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಅವರ ಜೊತೆಯೂ ಸಂವಾದ ನಡೆಸಿದರು.
ಮಾರುತ ಎಂಬುವರು ತಾವು ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಪ್ರತಿದಿನ ದಕ್ಷಿಣ ಬೆಂಗಳೂರಿನಿಂದ ಉತ್ತರ ಬೆಂಗಳೂರಿಗೆ ಸಂಚರಿಸುತ್ತಿದ್ದೇನೆ. ಪೀಕ್ ಅವರ್‌ನಲ್ಲಿ ಒಂದೊಂದು ಸಿಗ್ನಲ್‌ನಲ್ಲಿ 25 ರಿಂದ 30 ನಿಮಿಷಗಳ ಕಾಲ ಸಮಯ ವ್ಯರ್ಥವಾಗುತ್ತಿದೆ. ಅದನ್ನು ಸರಿಪಡಿಸಿ. ಬಸ್, ಮೆಟ್ರೋಗಳಂತಹ ಸಮೂಹ ಸಾರಿಗೆಗಳ ವ್ಯವಸ್ಥೆಯನ್ನು ಸುಧಾರಣೆ ಮಾಡಿ ಎಂದು ಮನವಿ ಮಾಡಿದರು.
ಇನ್ನೂ ಕೆಲವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ಸುರಂಗ ರಸ್ತೆಗೆ 6 ಎಕರೆ ಲಾಲ್‌ಬಾಗ್ ಜಾಗವನ್ನು ತೆಗೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಇದೆ. ದಯವಿಟ್ಟು ಲಾಲ್‌ಬಾಗ್‌ನ ಒಂದಿಂಚು ಜಾಗವನ್ನು ತೆಗೆದುಕೊಳ್ಳಬೇಡಿ ಎಂದು ಆಗ್ರಹಿಸಿದರು.
ಈ ವಿಚಾರವನ್ನು ಪ್ರಸ್ತಾಪಿಸುವುದಾಗಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. ಇದೇ ವೇಳೆ ಉಪಸ್ಥಿತರಿದ್ದ ಬಿಬಿಎಂಪಿ ಮಾಜಿ ಸದಸ್ಯ ಉದಯ್‌ಕುಮಾರ್, ಸುರಂಗ ರಸ್ತೆ ಲಾಲ್‌ಬಾಗ್‌ಗೆ ಬರುವುದೇ ಇಲ್ಲ, ಅನಗತ್ಯವಾಗಿ ಈ ಬಗ್ಗೆ ಅಪಪ್ರಚಾರ ಮಾಡಲಾಗಿದೆ ಎಂದು ಹೇಳಿದರು.
ಲಾಲ್‌ಬಾಗ್‌ನ ಕೆರೆದಂಡೆಯಲ್ಲಿರುವ ತ್ಯಾಜ್ಯಸಂಸ್ಕರಣಾ ಘಟಕಕ್ಕೆ ವಿದ್ಯುತ್ ಬಿಲ್ ಹೆಚ್ಚಾಗುತ್ತಿರುವ ಬಗ್ಗೆ ಅಧಿಕಾರಿಗಳು ವಿವರಣೆ ನೀಡಿದರು.ಡಿ.ಕೆ.ಶಿವಕುಮಾರ್ ಅವರನ್ನು ಕಂಡು ಸಾರ್ವಜನಿಕರು ಪುಳಕಿತರಾದರು. ಬಹಳಷ್ಟು ಮಂದಿ ಡಿ.ಕೆ.ಶಿವಕುಮಾರ್ ಜೊತೆ ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡರು. ಕೆಲವರ ಜೊತೆ ಡಿ.ಕೆ.ಶಿವಕುಮಾರ್ ಅವರೇ ಖುದ್ದು ಮೊಬೈಲ್ ಪಡೆದುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಟ್ಟರು.ಕೆಲವು ಮಂಗಳೂರಿನ ಭಾಗದ ಮಹಿಳೆಯರು ವಿಶ್ ಮಾಡಿದಾಗ ನಾನು ಮಂಗಳೂರಿನ ಪ್ರಿಯಾ ಉಡುಪಿ, ಮಂಗಳೂರು, ದಕ್ಷಿಣ ಕನ್ನಡ ಆ ಭಾಗದ ಜನ ಎಲ್ಲರೂ ಒಂದೇ ಎಂದು ಹೇಳಿದರು.
ಲಾಲ್‌ಬಾಗ್‌ನಲ್ಲಿ 270ಕ್ಕೂ ಹೆಚ್ಚು ನಾಯಿಗಳ ಹಾವಳಿ ಇದೆ ಎಂದು ಕೆಲವರು ದೂರಿದರು. ನಾಯಿಗಳನ್ನು ನಾವು ಸಾಯಿಸಲಾಗುವುದಿಲ್ಲ, ಪ್ರಾಣಿ ದಯಾ ಸಂಘದ ಗಲಾಟೆ ಇದೆ. ಅವುಗಳನ್ನು ಹಿಡಿದು ಕಾಡಿಗೆ ಬಿಡಬೇಕಷ್ಟೇ ಎಂದು ಡಿ.ಕೆ.ಶಿವಕುಮಾರ್ ಅಸಹಾಯಕ ವ್ಯಕ್ತಪಡಿಸಿದರು.
ಮಹಿಳೆಯೊಬ್ಬರು ಕಸ ವಿಲೇವಾರಿಯಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರಣೆೆ ನೀಡಿದರು. ನಮಂತಹ ದುಡಿಯುವ ಮಹಿಳೆಯರಿಗೆ ಕಸ ವಿಲೇವಾರಿ ಸಮಸ್ಯೆ ಆಗುತ್ತಿದೆ. ಕಸ ಸಂಗ್ರಹಿಸುವವರು ಬರುವ ಸಮಯಕ್ಕೆ ನಾವು ಇರುವುದಿಲ್ಲ. ಕೆಲಸಕ್ಕೆ ಹೋಗಿರುತ್ತೇವೆ ಈ ತೊಂದರೆಯನ್ನು ತಪ್ಪಿಸಲು ಕಸ ಹಾಕುವ ಸಾಮಾನ್ಯ ಜಾಗವನ್ನು ಗುರುತಿಸಿ, ನಮಗೆ ಸಮಯ ಸಿಕ್ಕಾಗ ಅಲ್ಲಿಗೆ ಕಸ ಹಾಕಿ ಹೋಗುತ್ತೇವೆ ಎಂದರು.
ಸಲಹೆ ನೀಡಿದ ಎಲ್ಲರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಲಾಯಿತು. ಉತ್ತಮ ಸಲಹೆ ನೀಡಿದವರೊಂದಿಗೆ ನಾವು ಮತ್ತೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.ಶಾಸಕರಾದ ರಿಜ್ವಾನ್ ಹರ್ಷದ್, ಹಿರಿಯ ಅಧಿಕಾರಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಮಹೇಶ್‌ರಾವ್ ಮತ್ತಿತರರು ಉಪಸ್ಥಿತರಿದ್ದರು.