ಬೆಂಗಳೂರು,ನ.15- ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ನ್ನು ಬೇರೆಯವರಿಗೆ ವ್ಯವಹರಿಸಲು ಕೊಡಬೇಡಿ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ನಿಮ ಬ್ಯಾಂಕ್ ಖಾತೆಯ ವಿವರಗಳನ್ನು ಬೇರೆಯವರಿಗೆ ಕೊಟ್ಟರೆ ವಂಚಕರು ಅದನ್ನು ದುರುಪಯೋಗಪಡಿಸಿಕೊಳ್ಳುವುದರಿಂದ ನೀವು ಸಂಕಷ್ಟಕ್ಕೆ ಒಳಗಾಗುತ್ತೀರಿ. ಈ ಬಗ್ಗೆ ಎಚ್ಚರದಿಂದಿರಿ ಎಂದು ಸಲಹೆ ಮಾಡಿದರು.
ವಂಚಕರು ನಿಮಗೆ ಕಮೀಷನ್ ಹಾಗೂ ಇನ್ನಿತರೆ ಆಮಿಷವೊಡ್ಡಿ ಬ್ಯಾಂಕ್ ಖಾತೆಗಳ ನಂಬರ್ನ್ನು ಪಡೆದು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಜಾಗೃತರಾಗಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಿಮ ವಾಹನಕ್ಕೆ ನೀವೇ ಜವಾಬ್ದಾರಿ:
ನಿಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವಾಗ ಸುರಕ್ಷತೆಯ ಬಗ್ಗೆ ಅರಿವಿರಲಿ. ಈಗಾಗಲೇ ಈ ಬಗ್ಗೆ ಹಲವು ಬಾರಿ ಎಚ್ಚರಿಸಿದ್ದೇವೆ. ಸಿಸಿ ಕ್ಯಾಮೆರಾಗಳಿರುವ ಜಾಗದಲ್ಲಿ ವಾಹನ ನಿಲ್ಲಿಸಿ, ಬೀಗ ಹಾಕದೆ ಕೀ ಅದರಲ್ಲೇ ಬಿಟ್ಟು ಹೋಗಬೇಡಿ. ನಿಮ ನಿಮ ವಾಹನಗಳನ್ನು ಸುರಕ್ಷಿತ ಜಾಗಗಳಲ್ಲಿ ನಿಲ್ಲಿಸಿ ಎಂದು ಹೇಳಿದರು.