ಬೆಂಗಳೂರು, ಜೂ.16- ಡೀಸೆಲ್, ಪೆಟ್ರೋಲ್ ದರ ಹೆಚ್ಚಳ ಮಾಡುವ ಮೂಲಕ ಜನಸಾಮಾನ್ಯರಿಗೆ ಹೊರೆ ಮಾಡಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಜಿಲ್ಲಾ, ತಾಲ್ಲೂಕು ಮತ್ತು ಬಿಬಿಎಂಪಿ ಚುನಾವಣೆಯಲ್ಲಿ ಯಾರೊಬ್ಬರೂ ಮತ ಹಾಕಬಾರದು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಸಚಿವರು ಇಲ್ಲವೇ ಶಾಸಕರ ಅಣ್ಣ-ತಮಂದಿರು, ಅಕ್ಕ-ತಂಗಿಯರು ಇಲ್ಲವೇ ಸಂಬಂಧಿಕರೇ ಸ್ಪರ್ಧೆ ಮಾಡಿದರೂ ಅವರಿಗೆ ಒಂದೇ ಒಂದು ಮತ ಹಾಕಬೇಡಿ. ನೀವು ಕಾಂಗ್ರೆಸ್‌ಗೆ ಮತ ಹಾಕುವುದರಿಂದ ಮತ್ತಷ್ಟು ದರದ ಬಿಸಿಯನ್ನು ಅನುಭವಿಸುತ್ತೀರಿ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಗ್ಯಾರಂಟಿಗಳನ್ನು ಜಾರಿ ಮಾಡಿ ಕರ್ನಾಟಕದ ಜನರು ಸಂತೃಪ್ತರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೊಗಳೆ ಬಿಡುತ್ತಿದ್ದಾರೆ. ದೇಶದಲ್ಲಿ ಕರ್ನಾಟಕ ಮಾದರಿ ಚರ್ಚೆಯಾಗುತ್ತಿದೆ ಎಂದು ಮತ್ತೊಂದು ಹಸಿಸುಳ್ಳು ಹೇಳಿದ್ದಾರೆ. ನಿಜವಾಗಿಯೂ ಚರ್ಚೆಯಾಗುತ್ತಿರುವುದು ಏಕಾಏಕಿ ಇಷ್ಟು ದೊಡ್ಡಮಟ್ಟದಲ್ಲಿ ಡೀಸೆಲ್, ಪೆಟ್ರೋಲ್ ದರವನ್ನು ಏರಿಸಿದ್ದು ಏಕೆ ಎಂಬುದಾಗಿ ಅಶೋಕ್ ನುಡಿದರು.
ಮುಂಬರುವ ಸ್ಥಳೀಯ ಸಂಸ್ಥೆಗಳು ಮತ್ತು ಬಿಬಿಎಂಪಿ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಚೊಂಬು ಕೊಡುವುದು ಗ್ಯಾರಂಟಿ. ಜನವಿರೋಧಿ ಸರ್ಕಾರ ಇದು ಇದ್ದರೆಷ್ಟು, ಬಿಟ್ಟರೆಷ್ಟು ಎಂದು ಎಲ್ಲರೂ ಹಿಡಿಶಾಪ ಹಾಕುತ್ತಿದ್ದಾರೆ. ಅವರ ಕಣ್ಣೀರಿನ ಶಾಪ ಈ ಸರ್ಕಾರಕ್ಕೆ ತಟ್ಟದೇ ಇರುವುದಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಮಾತೆತ್ತಿದರೆ ನಾನು 14 ಬಜೆಟ್ ಮಂಡಿಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯ ಅವರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆಯಾಗುತ್ತದೆ ಎಂಬ ಸಾಮಾನ್ಯ ಜ್ಞಾನ ಇರಲಿಲ್ಲವೇ? ರಾಜ್ಯದ ಜನತೆ ಈ ದರಿದ್ರ ಸರ್ಕಾರ ಅಧಿಕಾರದಿಂದ ಹೋದರೆ ಸಾಕು ಎಂದು ಎದುರು ನೋಡುತ್ತಿದ್ದಾರೆ. ಯಾವ ನೈತಿಕತೆ ಇಟ್ಟುಕೊಂಡು ಅಧಿಕಾರದಲ್ಲಿ ಸಿದ್ದರಾಮಯ್ಯ ಮುಂದುವರೆಯುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದರು.
ಲೋಕಸಭಾ ಚುನಾವಣೆಯಲ್ಲಿ ನಮಗೆ ಮತ ಹಾಕಿಲ್ಲ ಎಂಬ ಒಂದೇ ಕಾರಣಕ್ಕಾಗಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಲಾಗಿದೆ. ನಿಮಗೆ ಸೇಡಿದ್ದರೆ ಬಿಜೆಪಿ ಮೇಲೆ ತೀರಿಸಿಕೊಳ್ಳಿ. ಅದನ್ನು ಬಿಟ್ಟು ಶ್ರೀಸಾಮಾನ್ಯರ ಹೊಟ್ಟೆಪಾಡಿಗೆ ಕಲ್ಲು ಹಾಕುವ ಕೆಲಸ ಮಾಡಬೇಡಿ. ಬಡವರು ರೊಚ್ಚಿಗೆದ್ದರೆ ಕಾಂಗ್ರೆಸ್ ರಾಜ್ಯದಲ್ಲಿ ಸರ್ವನಾಶವಾಗುತ್ತದೆ ಎಂದು ಅಶೋಕ್ ಎಚ್ಚರಿಕೆ ಕೊಟ್ಟರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತತ್‌ಕ್ಷಣವೇ ಶ್ವೇತಪತ್ರ ಹೊರಡಿಸಲಿ. ಕರ್ನಾಟಕದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬುದು ನನಗೂ ಗೊತ್ತಿದೆ. ಹಣಕಾಸು ಇಲಾಖೆಯಲ್ಲಿ ನನಗೂ ಬೇಕಾದ ಅಧಿಕಾರಿಗಳಿದ್ದಾರೆ ಎಂದರು.
ಸರ್ಕಾರಿ ಅಧಿಕಾರಿಗಳಿಗೆ ಪ್ರತಿಯೊಬ್ಬರೂ ಕಿರುಕುಳ ನೀಡುತ್ತಿದ್ದಾರೆ. ಇಲಾಖೆಗೆ ಬರಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.
ಇಲಾಖೆಯಲ್ಲಿ ನಯಾಪೈಸೆ ಹಣ ಇಲ್ಲದಿದ್ದರೂ ಕೆಲವರು ಬಿಲ್‌ಗಳನ್ನು ಬಿಡುಗಡೆ ಮಾಡಲು ಒತ್ತಡ ಹೇರುತ್ತಿದ್ದಾರೆ. ವೇತನ ಆಯೋಗದ ವರದಿಯನ್ನು ಕಸದ ಡಬ್ಬಿಗೆ ಎಸೆಯಲಾಗಿದೆ. ಸರ್ಕಾರಿ ನೌಕರರು ನಮಗೆ ಮತ ಹಾಕಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಇದೊಂದು ಆಡಳಿತ ನಡೆಸುವ ವ್ಯವಸ್ಥೆಯೇ ಎಂದು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಪಕ್ಷದ ಶಾಸಕರೇ ಸಿಎಂ ಮತ್ತು ಡಿಸಿಎಂ ಮೇಲೆ ತಿರುಗಿಬಿದ್ದಿದ್ದಾರೆ. ಯಾರೂ ಅನುಮಾನ ಕೇಳದೇ ಬಾಯಿ ಮುಚ್ಚಿಕೊಂಡು ಇರಿ ಎಂದು ಡಿ.ಕೆ.ಶಿವಕುಮಾರ್ ಶಾಸಕರಿಗೆ ಬೆದರಿಕೆ ಹಾಕುತ್ತಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಹೋದರ ಡಿ.ಕೆ.ಸುರೇಶ್ ಹಾಗೂ ಶಿವಕುಮಾರ್‌ಗೆ ಹೊಟ್ಟೆಗೆ ಹಸಿಮೆಣಸಿನಕಾಯಿ ಇಟ್ಟುಕೊಂಡಂತಾಗಿದೆ ಎಂದು ವ್ಯಂಗ್ಯವಾಡಿದರು.
ಶಾಸಕರು ತಮ ಮನೆಬಾಗಿಲಿಗೆ ಬರಬೇಡಿ ಎಂದು ಶಿವಕುಮಾರ್ ಹೇಳುತ್ತಾರೆ. ಸಹೋದರನ ಸೋಲಿನಿಂದ ಅವರು ಪೂರಾ ಹತಾಶರಾಗಿದ್ದಾರೆ. ಯಾರು ಮತ ಹಾಕಿಲ್ಲವೋ ಅವರ ಮೇಲೆ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ಗೆ ಸೋಲು ಎಷ್ಟು ಹತಾಶೆ ಉಂಟುಮಾಡಿದೆ ಎಂದರೆ ಡೀಸೆಲ್ ಮತ್ತು ಪೆಟ್ರೋಲ್ ಮಾರಾಟದ ಮೇಲಿನ ತೆರಿಗೆ ಹೆಚ್ಚಳವೇ ಸಾಕ್ಷಿ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯನವರು ಔಟ್ ಗೋಯಿಂಗ್ ಮುಖ್ಯಮಂತ್ರಿಯಾಗಿದ್ದಾರೆ. ಕಳೆದ ಬಜೆಟ್ ಒಂದು ಬೋಗಸ್ ಎಂದು ನಾನು ಸದನದಲ್ಲಿ ಹೇಳಿದ್ದೆ. ಆದರೆ ನನ್ನ ಮಾತು ಒಪ್ಪಿರಲಿಲ್ಲ. ಗ್ಯಾರಂಟಿಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತದೆ ಎಂದು ಆರ್ಥಿಕ ತಜ್ಞರು ಹೇಳಿದ್ದರು. ಈಗ ಅವರ ಹಣೆಬರಹ ಏನೆಂಬುದು ಎಲ್ಲರಿಗೂ ಗೊತ್ತಾಗಿದೆ. ಬಜೆಟ್‌ನಲ್ಲಿ ದರ ಹೆಚ್ಚಳ ಮಾಡುತ್ತೇವೆ ಎಂದು ಹೇಳಿದರೆ ಜನ ತಿರುಗಿಬೀಳಬಹುದು ಎಂಬ ಕಾರಣಕ್ಕಾಗಿ ಕದ್ದುಮುಚ್ಚಿ ರಾತ್ರೋರಾತ್ರಿ ಏರಿಕೆ ಮಾಡುತ್ತಾರೆ. ಇದರಿಂದ ಪ್ರತಿ ಮನೆಗೆ 1800 ರೂ. ಹೊರೆಯಾಗುತ್ತದೆ. ಇದು ಮನೆಮುರಿಯುವ ಕೆಲಸವಲ್ಲವೇ? ಎಂದು ಅಶೋಕ್ ಸಿಡಿಮಿಡಿಗೊಂಡರು.
ಕಳೆದ ಮೂರು ತಿಂಗಳಿನಿಂದ ಅಕ್ಕಿ ಹಣ ಕೊಟ್ಟಿಲ್ಲ. ಬಿಡಿಎ ನಿವೇಶನಗಳು, ಕಾಂಪ್ಲೆಕ್‌್ಸಗಳನ್ನು ಮಾರಾಟ ಮಾಡಲು ಇಟ್ಟಿದ್ದಾರೆ. ಕಾರ್ಪೊರೇಷನ್ ಕಟ್ಟಡ, ಯುಟಿಲಿಟಿ ಬಿಲ್ಡಿಂಗ್, ವಾರ್ಡ್ ಕಚೇರಿಗಳನ್ನು ಅಡವು ಇಡಲು ನೀಲಿನಕ್ಷೆ ಸಿದ್ಧ ಮಾಡಿದ್ದಾರೆ. ಇವುಗಳನ್ನು ಅಡವಿಟ್ಟು 4 ಸಾವಿರ ಕೋಟಿ ರೂ. ಲೂಟಿ ಹೊಡೆಯಲು ಸರ್ಕಾರ ಮುಂದಾಗಿದೆ.
ಇದೇ ರೀತಿ ಜಲಮಂಡಳಿಯಲ್ಲಿಯೂ ಸಾವಿರ ಕೋಟಿ ಲೂಟಿ ಹೊಡೆಯುವ ಯೋಜನೆ ಸಿದ್ಧವಾಗಿದೆ. ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಇವೆಲ್ಲವನ್ನೂ ಅಡವಿಟ್ಟು ಸಾಲ ಎತ್ತುವಳಿಗೆ ಡಿಸಿಎಂ ಶಿವಕುಮಾರ್ ನೀಲನಕ್ಷೆ ಸಿದ್ಧಪಡಿಸಿದ್ದಾರೆ. ಆರ್ಥಿಕ ಶಿಸ್ತು ಸಂಪೂರ್ಣವಾಗಿ ಹಾಳಾಗಿದೆ. ಕರ್ನಾಟಕವನ್ನು ಸರ್ವನಾಶದತ್ತ ಕೊಂಡೊಯ್ಯುತ್ತಿದ್ದಾರೆ. ಇದೇ ರೀತಿ ಇನ್ನೊಂದು ವರ್ಷ ಬಿಟ್ಟರೆ ವಿಧಾನಸೌಧವನ್ನೂ ಅಡ ಇಡಲಿದ್ದಾರೆ ಎಂದು ಅಶೋಕ್ ಆತಂಕ ವ್ಯಕ್ತಪಡಿಸಿದರು.