ವಿಜಯಪುರ,ಏ.7 – ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರದ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ. ಶ್ರೀ ಸಾಯಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿದ್ದ ಡಾ.ರಾಜಶೇಖರ ಮುಚ್ಚಂಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈದ್ಯರ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ತಾಳಿಕೋಟೆ ಠಾಣೆಯ ಪೋಲಿಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಎಂದಿನಂತೆ ಆಸ್ಪತ್ರೆಗೆ ಬಂದು ರೋಗಿಗಳ ತಪಸಣೆ ಮಾಡಿ ನಂತರ ತಮ್ಮ ಕೋಣೆಗೆ ಹೋಗಿದ್ದರು ಆದರೆ ಬಹಳ ಹೊತ್ತಾದರೂ ಹೊರ ಬಾರದಿದ್ದಾಗ ಆಸ್ಪತ್ರೆ ಸಿಬ್ಬಂದಿ ಮತ್ತೊಂದೆಡೆ ಹೋಗಿ ನೋಡಿದಾಗ ನೇಣು ಹಾಕಿಕೊಂಡಿರುವುದು ಗೊತ್ತಾಗಿದೆ.
ಇತರ ವೈದ್ಯರು, ಸಿಬ್ಬಂದಿ ಆತಂಕಗೊಂಡು ತಾಳಿಕೋಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.