ದೊಡ್ಡಬಳ್ಳಾಪುರ, ಅ.1- ತಾಲೂಕಿನಲ್ಲಿ ವನ್ಯಜೀವಿಗಳ ಉಪಟಳ ದಿನೇ ದಿನೆ ಹೆಚ್ಚುತ್ತಿದ್ದು, ಅಡಿಕೆ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷವಾಗಿದ್ದು, ಕೂಲಿ ಕಾರ್ಮಿಕರು ಭಯಭೀತರಾಗಿದ್ದಾರೆ.ತಿಪ್ಪೂರು ಗ್ರಾಮದ ಅಡಿಕೆ ತೋಟದಲ್ಲಿ ಸುಮಾರು 9 ಅಡಿ ಉದ್ದ, 20 ಕೆಜಿ ತೂಕದ ಬೃಹತ್ ಹೆಬ್ಬಾವು ಪತ್ತೆಯಾಗಿದ್ದು, ರೈತರಲ್ಲಿ ಆತಂಕ ಉಂಟಾಗಿದೆ.
ಹೆಜ್ಜಾಜಿ ಗ್ರಾಮದ ಯೋಗಿ ಎಂಬುವವರು ಕಾರ್ಮಿಕರೊಂದಿಗೆ ಅಡಿಕೆ ಕೀಳಲು ತೆರಳಿದ ಸಂದರ್ಭದಲ್ಲಿ ಭಾರೀ ಗಾತ್ರದ ಹೆಬ್ಬಾವು ಕಂಡುಬಂದಿದೆ. ತಕ್ಷಣ ಉರಗ ರಕ್ಷಕ ನಾಗರಾಜ್ ಅವರಿಗೆ ಕರೆ ಮಾಡಿದರೂ, ಅವರು ಕೆಲಸದ ಒತ್ತಡದಲ್ಲಿದ್ದ ಕಾರಣ ತಮ ಮಿತ್ರ ಹಾಗೂ ಮತ್ತೊಬ್ಬ ಉರಗ ರಕ್ಷಕ ರಾಮಾಂಜಿನಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಧಾವಿಸಿ ಸುರಕ್ಷಿತವಾಗಿ ಹೆಬ್ಬಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ.
ನಂತರ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಹಸ್ತಾಂತರಿಸಲಾಗಿದ್ದು, ಮಾಕಳಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಬಿಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
ಇತ್ತೀಚೆಗೆ ರೈತರು ನವಿಲು, ಕಾಡುಹಂದಿಗಳಿಂದ ಬೆಳೆ ರಕ್ಷಿಸಿಕೊಳ್ಳುವುದು ಒಂದು ಕಡೆಯಾದರೆ, ಚಿರತೆ-ಕರಡಿ ದಾಳಿಗಳಿಂದ ಸಾಕು ಪ್ರಾಣಿಗಳನ್ನ ಕಾಪಾಡಿಕೊಳ್ಳುವುದು ಮತ್ತೊಂದು ಕಡೆ.
ಈ ಎಲ್ಲಾ ಆತಂಕದ ನಡುವೆ ಈಗ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿರುವುದರಿಂದ ರೈತರು ಹೊಲ, ಗ್ದೆ , ತೋಟಗಳ ಬಳಿ ಓಡಾಡಲು ಭಯ ಪಡುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.