ವಾಷಿಂಗ್ಟನ್, ಫೆ.14- ವಾಣಿಜ್ಯ ರಾಜಧಾನಿ ಮುಂಬೈ ದಾಳಿಯ ಪ್ರಮುಖ ರೂವಾರಿ ಹಾಗೂ ಪಾಕಿಸ್ತಾನದ ಭಯೋತ್ಪಾದಕ ತಹವೊರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಶಿಕ್ಷಿಸುವಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅಮೆರಿಕ ಹೇಳಿದೆ. 2008ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿಯನ್ನು ನಾವು ಭಾರತಕ್ಕೆ ಕಳುಹಿಸುತ್ತಿದ್ದೇವೆ. ಅವರು ಭಾರತದಲ್ಲಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಈ ನಿರ್ಧಾರಕ್ಕೆ ಪ್ರಧಾನಿ ನರೇಂದ್ರಮೋದಿ ಅವರು ಟ್ರಂಪ್‌ಗೆ ಧನ್ಯವಾದ ಅರ್ಪಿಸಿ, ನಾವು ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇಂದು ನಮ್ಮ ಸರ್ಕಾರವು ವಿಶ್ವದ ಅತ್ಯಂತ ಮಷ್ಟರಲ್ಲಿ ಒಬ್ಬನಾದ ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದವರನ್ನು ಭಾರತದಲ್ಲಿ ನ್ಯಾಯ ಎದುರಿಸಲು ಹಸ್ತಾಂತರಿಸಲು ಅನುಮೋದನೆ ನೀಡಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಭಾರತದಲ್ಲಿ ಕಾನೂನು ಪ್ರಕಾರ ವಿಚಾರಣೆ ಎದುರಿಸಲಿ ಎಂದಿದ್ದಾರೆ.
ಮುಂಬೈ ದಾಳಿಯ ಶಂಕಿತ ತಹವೂರ್ ಹುಸೇನ್ ರಾಣಾನ ರೇಖಾಚಿತ್ರವನ್ನು ಚಿಕಾಗೋ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. 2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ತಹವೂರ್ ರಾಣಾ ಅರ್ಜಿಯನ್ನು ಯುಎಸ್ ಸುಪ್ರೀಂಕೋರ್ಟ್ ವಜಾಗೊಳಿಸಿದ್ದರಿಂದ, ಆತನ ಹಸ್ತಾಂತರಕ್ಕೆ ಅನುಮತಿ ಸಿಕ್ಕಿದೆ.
ಈ ಪ್ರಕರಣದಲ್ಲಿ ರಾಣಾ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಜನವರಿಯಲ್ಲಿ ತಿರಸ್ಕರಿಸಿದ ಅಮೆರಿಕದ ಸುಪ್ರೀಂಕೋರ್ಟ್, ರಾಣಾ ಹಸ್ತಾಂತರವನ್ನು ತೆರವುಗೊಳಿಸಿತ್ತು. ರಾಣಾನನ್ನು ಆದಷ್ಟು ಬೇಗ ಗಡಿಪಾರು ಮಾಡಲು ಅಮೆರಿಕದ ಅಧಿಕಾರಿಗಳೊಂದಿಗೆ ನಿಕಟವಾಗಿ ಸಂಪರ್ಕ ಹೊಂದಿ ಕಾರ್ಯಪ್ರವೃತ್ತವಾಗಿರುವುದಾಗಿ ಭಾರತ ಕಳೆದ ತಿಂಗಳು ಹೇಳಿತ್ತು.
ತಹವೂರ್ ರಾಣಾ ಯಾರು?:
ತಹಾವೂರ್ ರಾಣಾ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆ. ಈತನನ್ನು ಅಮೆರಿಕದ ಜೈಲಿನಲ್ಲಿ ಇರಿಸಲಾಗಿದೆ. ಈತ 26/11 ದಾಳಿಯ ಮಾಸ್ಟರ್‌ಮೈಂಡ್ ಡೇವಿಡ್ ಕೋಲ್ಡನ್ ಹೆಡ್ಲಿಯ ಆಪ್ತನಾಗಿದ್ದಾನೆ. 166 ಅಮಾಯಕರ ಸಾವಿಗೆ ಕಾರಣವಾದ ಮುಂಬೈ ದಾಳಿಯನ್ನು ಹೆಡ್ಲಿ ಯೋಜಿಸಿದ್ದನು. ತಹವೂರ್ ರಾಣಾ ಲಷ್ಕರ್-ಎ-ತೊಯ್ದಾ (ಎಲ್‌ಇಟಿ) ಮತ್ತು ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದನು.
ತಹವೂರ್ ರಾಣಾ ಮುಂಬೈ ದಾಳಿಯ ಪಿತೂರಿಯಲ್ಲಿ ಭಾಗಿಯಾಗಿ, ಭಯೋತ್ಪಾದಕರಿಗೆ ಸಹಾಯ ಮಾಡಿದ ಆರೋಪದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದೆ. ಹೀಗಾಗಿ ಭಾರತೀಯ ಕಾನೂನಿನಡಿ ರಾಣಾಗೆ ಶಿಕ್ಷೆಯಾಗುವಂತೆ ಮಾಡಲು ಭಾರತ ಹಲವಾರು ವರ್ಷಗಳಿಂದ ರಾಣಾನನ್ನು ಹಸ್ತಾಂತರಿಸುವಂತೆ ಅಮೆರಿಕಾವನ್ನು ಒತ್ತಾಯಿಸಿತ್ತು.
ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹಾವೂರ್ ರಾಣಾ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆಂದು ಆರೋಪಿಸಲ್ಪಟ್ಟು ಮತ್ತು ಶಿಕ್ಷೆಗೊಳಗಾಗಿದ್ದಾರೆ. ಭಾರತವು ಅಮೆರಿಕದ ಏಜೆನ್ಸಿಯೊಂದಿಗೆ ವಿವರಗಳನ್ನು ಹಂಚಿಕೊಂಡಿತ್ತು, ಅದನ್ನು ಕೆಳ ನ್ಯಾಯಾಲಯಗಳು ಮತ್ತು ಸುಪ್ರೀಂಕೋರ್ಟ್ ಮುಂದೆ ಇಡಲಾಯಿತು.ಭಾರತದ ಈ ಸಾಕ್ಷ್ಯವನ್ನು ನ್ಯಾಯಾಲಯ ಸ್ವೀಕರಿಸಿತು. ಭಾರತ ನೀಡಿದ ದಾಖಲೆಯಲ್ಲಿ 26/11 ದಾಳಿಯಲ್ಲಿ ತಹಾವೂರ್ ಪಾತ್ರವನ್ನು ಉಲ್ಲೇಖಿಸಲಾಗಿದೆ.
2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ತಹಾಗ್ವುರ್ ರಾಣಾ ಬೇಕಾಗಿದ್ದರಿಂದ ಭಾರತ ಅವನನ್ನು ಹಸ್ತಾಂತರಿಸುವಂತೆ ಕೋರಿತ್ತು. ಇದಕ್ಕೂ ಮೊದಲು ಸ್ಯಾನ್ ಫ್ರಾನ್ಸಿಸ್ಕೋದ ಉತ್ತರ ಸಕ್ಯೂಟ್ ಗಾಗಿ ಯುಎಸ್ ಕೋರ್ಟ್ ಆಫ್ ಅಪೀಲ್ಸ್ ಸೇರಿದಂತೆ ಹಲವಾರು ಫೆಡರಲ್ ನ್ಯಾಯಾಲಯಗಳಲ್ಲಿ ರಾಣಾ ಕಾನೂನು ಹೋರಾಟಗಳಲ್ಲಿ ಸೋತಿದ್ದರು.ಅಕ್ಟೋಬರ್ 2009ರಲ್ಲಿ ಅಮೆರಿಕದ ಅಧಿಕಾರಿಗಳು ಅವರನ್ನು ಚಿಕಾಗೋದಲ್ಲಿ ಬಂಧಿಸಿದರು. 2013 ಜನವರಿ 24ರಂದು, ಮುಂಬೈ ದಾಳಿಯಲ್ಲಿ ಹೆಡ್ಲಿ ಭಾಗಿಯಾಗಿದ್ದಾನೆಂದು ಸಾಬೀತಾಯಿತು ಮತ್ತು ಅಮೆರಿಕದ ನ್ಯಾಯಾಲಯವು ಅವನಿಗೆ 35 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ರಾಣಾ ಪಾಕಿಸ್ತಾನದ ಹಸನ್ ಅಬ್ದಲ್ ಕೆಡೆಟ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದ, ಹೆಡ್ಲಿ ಕೂಡ ಅಮೆರಿಕಕ್ಕೆ ತೆರಳುವ ಮೊದಲು ಐದು ವರ್ಷಗಳ ಕಾಲ ಅಲ್ಲಿಯೇ ಅಧ್ಯಯನ ಮಾಡಿದ್ದರು. ಪಾಕಿಸ್ತಾನಿ ಸೈನ್ಯದಲ್ಲಿ ವೈದ್ಯನಾಗಿ ಕೆಲಸ ಮಾಡಿದ ನಂತರ, ರಾಣಾ ಕೆನಡಾಕ್ಕೆ ಸ್ಥಳಾಂತರಗೊಂಡರು ಮತ್ತು ಕೆಲವು ವರ್ಷಗಳ ನಂತರ ಕೆನಡಾದ ಪೌರತ್ವವನ್ನೂ ಪಡೆದರು.
ಚಿಕಾಗೋದಲ್ಲಿ ಫಸ್ಟ್ ವರ್ಲ್ಡ್ ಇಮಿಗ್ರೇಷನ್ ಸರ್ವೀಸಸ್ ಎಂಬ ಸಲಹಾ ಸಂಸ್ಥೆಯನ್ನು ಪ್ರಾರಂಭಿಸಿದರು. ರಾಣಾ ಅವರ ಕಂಪನಿಯು ಮುಂಬೈನಲ್ಲಿ ಒಂದು ಶಾಖೆಯನ್ನು ಸಹ ಹೊಂದಿತ್ತು. 2008ರ ನವೆಂಬರ್ 26ರಂದು 10 ಲಷ್ಕರ್ ಭಯೋತ್ಪಾದಕರು ಅಪಾರ ಪ್ರಮಾಣದ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೊತ್ತು ಸಮುದ್ರ ಮಾರ್ಗವಾಗಿ ಮುಂಬೈ ಪ್ರವೇಶಿಸಿದ್ದರು. ಆತ ಮುಂಬೈನ 9 ಸ್ಥಳಗಳಲ್ಲಿ ಹತ್ಯಾಕಾಂಡವನ್ನು ನಡೆಸಿದ್ದ.
ಭಯೋತ್ಪಾದಕರು ಗುರಿಯಾಗಿಸಿಕೊಂಡ ಎಂಟು ಸ್ಥಳಗಳು ದಕ್ಷಿಣ ಮುಂಬೈನಲ್ಲಿವೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಒಬೆರಾಯ್ ಟ್ರೈಡೆಂಟ್ ಹೋಟೆಲ್, ತಾಜ್ ಹೋಟೆಲ್, ಲಿಯೋಪೋಲ್ಡ್ ಕೆಫೆ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್, ಮೆಟ್ರೋ ಸಿನಿಮಾ ಮತ್ತು ಟೈಮ್ಸ್ ಆಫ್ ಇಂಡಿಯಾ ಕಟ್ಟಡ ಮತ್ತು ಸೇಂಟ್ ಕ್ಲೀವಿಯರ್ಸ್ ಕಾಲೇಜಿನ ಹಿಂದಿನ ಲೇನ್. ಮುಂಬೈನ ಬಂದರು ಪ್ರದೇಶವಾದ ಮಜಗಾಂವ್ ಮತ್ತು ವಿಲೇ ಪಾರ್ಲೆಯಲ್ಲಿ ಟ್ಯಾಕ್ಸಿಯಲ್ಲಿಯೂ ಸ್ಫೋಟ ಸಂಭವಿಸಿದೆ.
ಜನವರಿ 21ರಂದು ಅಮೆರಿಕದ ಸುಪ್ರೀಂಕೋರ್ಟ್ ಆರೋಪಿಗಳ ಅರ್ಜಿಯನ್ನು ಆಲಿಸಲು ನಿರಾಕರಿಸಿತು. ಮುಂಬೈ ಭಯೋತ್ಪಾದಕ ದಾಳಿಯ ಆರೋಪಿಗಳನ್ನು ಆದಷ್ಟು ಬೇಗ ಭಾರತಕ್ಕೆ ಹಸ್ತಾಂತರಿಸುವ ಕಾರ್ಯವಿಧಾನದ ಕುರಿತು ನಾವು ಈಗ ಅಮೆರಿಕದ ಕಡೆಯೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದರು.
2008ರ ನವೆಂಬರ್ 26 ರಂದು 10 ಮಂದಿ ಪಾಕಿಸ್ತಾನಿ ಭಯೋತ್ಪಾದಕರ ಗುಂಪು ಅರೇಬಿಯನ್ ಸಮುದ್ರದಲ್ಲಿ ಸಮುದ್ರ ಮಾರ್ಗವನ್ನು ಬಳಸಿಕೊಂಡು ಮುಂಬೈಗೆ ನುಸುಳಿದ ನಂತರ, ರೈಲ್ವೆ ನಿಲ್ದಾಣ, ಎರಡು ಐಷಾರಾಮಿ ಹೋಟೆಲ್‌ಗಳು ಮತ್ತು ಯಹೂದಿ ಕೇಂದ್ರದ ಮೇಲೆ ಸಂಘಟಿತ ದಾಳಿ ನಡೆಸಿದ್ದರು.
ದೇಶಾದ್ಯಂತ ಆಘಾತಕಾರಿ ಅಲೆಗಳನ್ನು ಉಂಟುಮಾಡಿದ ಸುಮಾರು 60 ಗಂಟೆಗಳ ದಾಳಿಯಲ್ಲಿ 166 ಜನರು ಅಂದು ಮೃತಪಟ್ಟಿದ್ದರು. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಮತ್ತಷ್ಟು ದ್ವೇಷ ಉಂಟಾಗುವಂತೆ ಮಾಡಿದ್ದರು.
ನವೆಂಬರ್ 2012ರಲ್ಲಿ ಪಾಕಿಸ್ತಾನಿ ಗುಂಪಿನಲ್ಲಿ ಬದುಕುಳಿದ ಏಕೈಕ ಬಂದೂಕುಧಾರಿ ಅಜ್ಜಲ್ ಅಮೀರ್ ಕಸಬ್ ನನ್ನು ಪುಣೆಯ ಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಭೀಕರ ದಾಳಿಯಲ್ಲಿ ಭಾಗಿಯಾದವರನ್ನು ಶಿಕ್ಷಿಸುವಂತೆ ಭಾರತ ಪಾಕಿಸ್ತಾನದ ಮೇಲೆ ಒತ್ತಡ ಹೇರುತ್ತಿದೆ ಆದರೆ ದಾಳಿಯ ಆರೋಪಿಗಳ ವಿಚಾರಣೆಯಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಗತಿಯಾಗಿಲ್ಲ.
ಭಾರತೀಯ ಸಂಸ್ಥೆಗಳು (ಸಿಬಿಐ, ಎನ್‌ಐಎ) ರಾಣಾನನ್ನು ಕಟ್ಟುನಿಟ್ಟಾಗಿ ವಿಚಾರಣೆ ನಡೆಸುತ್ತವೆ. ರಾಣಾ ವಿರುದ್ಧ ಭಯೋತ್ಪಾದನೆ, ದೇಶದ್ರೋಹ ಮತ್ತು ಕೊಲೆಯಂತಹ ಗಂಭೀರ ವಿಭಾಗಗಳ ಅಡಿಯಲ್ಲಿ ವಿಚಾರಣೆ ನಡೆಯಲಿದೆ. ಮುಂಬೈ ಪೊಲೀಸರ ಬಳಿ ರಾಣಾ ಮತ್ತು ಹೆಡ್ಲಿ ನಡುವಿನ ಇಮೇಲ್ ಸಾಕ್ಷ್ಯಗಳಿದ್ದು, ಅದನ್ನು ನ್ಯಾಯಾಲಯದಲ್ಲಿ ಬಳಸಲಾಗುವುದು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ರಾಣಾ ಅವರ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುವುದು.