ಪ್ರಯಾಗ್‌ರಾಜ್,ಜ.29- ಸಂಗಮದ ಎಲ್ಲಾ ಘಾಟ್‌ಗಳಲ್ಲಿ ಜನರು ಶಾಂತಿಯುತವಾಗಿ ಸ್ನಾನ ಮಾಡುತ್ತಿದ್ದಾರೆ. ಯಾವುದೇ ವದಂತಿಗೆ ಕಿವಿಗೊಡಬೇಡಿ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಜನರಲ್ಲಿ ಮನವಿ ಮಾಡಿದ್ದಾರೆ.
ಗಂಗೆಯ ಯಾವುದೇ ಘಾಟ್ ಬಳಿ ಇರುವ ಭಕ್ತರು ಅಲ್ಲಿ ಸ್ನಾನ ಮಾಡಿ ಸಂಗಮದ ತುದಿಗೆ ತಲುಪಲು ಪ್ರಯತ್ನಿಸಬಾರದು. ಪುಣ್ಯ ಸ್ನಾನಕ್ಕಾಗಿ ಹಲವಾರು ನಿಗದಿತ ಸ್ನಾನ ಘಾಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಆಡಳಿತದ ಸೂಚನೆಗಳನ್ನು ಪಾಲಿಸಿ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸಹಕರಿಸಿ. ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ ಎಂದು ಕೋರಿದ್ದಾರೆ.
ಭಕ್ತರು ಹತ್ತಿರದ ಘಾಟ್‌ನಲ್ಲಿ ಸ್ನಾನ ಮಾಡಿ ಸಂಗಮದ ತುದಿಗೆ ಹೋಗುವುದನ್ನು ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಯೋಗಿ ನೀವು ಇರುವ ಗಂಗಾ ಮಾತೆಯ ಘಾಟ್ ಬಳಿಯೇ ಸ್ನಾನ ಮಾಡಿ ತ್ರಿವೇಣಿ ಸಂಗಮಕ್ಕೆ ಹೋಗಲು ಪ್ರಯತ್ನ ಮಾಡಬೇಡಿ ಎಂದು ವಿನಂತಿ ಮಾಡಿದ್ದಾರೆ.
ನಾನು ಸಾಧು ಸಂತರ ಜೊತೆಗೆ ಮಾತನಾಡಿದ್ದೇವೆ. ಮೊದಲು ಭಕ್ತಾಧಿಗಳು ಪುಣ್ಯಸ್ನಾನ ಮಾಡಲಿ. ಆಮೇಲೆ ನಾವು ಸ್ನಾನ ಮಾಡುವುದಾಗಿ ಸಾಧು ಸಂತರು, ಅಖಾಡಗಳ ಮುಖ್ಯಸ್ಥರು ಹೇಳಿದ್ದಾರೆ. ಆರೋಗ್ಯ ಸಮಸ್ಯೆ ಇರುವವರು ದೂರ ನಡೆಯಬೇಡಿ. ಯಾವುದೇ ಘಾಟ್‌ನಲ್ಲಿ ಸ್ನಾನ ಮಾಡಿದರೂ ಅದು ಗಂಗಾ ನದಿಯ ನೀರು. ಮೌನಿ ಅಮವಾಸ್ಯೆ ಗಂಗಾ ಸ್ನಾನ ಪುಣ್ಯ ಪ್ರಾಪ್ತಿ ಮಾಡಲಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ, ಜನಸ್ತೋಮ ಇರುವ ಹಿನ್ನಲೆ ಜನರು ಸಂಯಮದಿಂದ ವರ್ತಿಸಿ ಎಂದು ಮನವಿ ಮಾಡಿದರು.
ಆಡಳಿತದ ಸೂಚನೆಗಳನ್ನು ಅನುಸರಿಸಿ ಮತ್ತು ಅವರೊಂದಿಗೆ ಸಹಕರಿಸಬೇಕು. ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ ಎಂದು ಕೇಳಿಕೊಂಡಿದ್ದಾರೆ.ಕುಂಭಮೇಳದಲ್ಲಿ ಕಾಲ್ತುಳಿತ ವರದಿಯಾದ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಅಖಾಡಗಳು ಅಮೃತ ಸ್ನಾನವನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದವು. ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು ಪವಿತ್ರ ಸ್ನಾನ ಮತ್ತೆ ಆರಂಭಗೊಂಡಿದೆ.