ಬೆಂಗಳೂರು,ಜು.10– ನಾಯಕತ್ವ ಬದಲಾವಣೆ ಎಂಬುದು ಕೇವಲ ರಾಜಕೀಯ ಪ್ರಹಸನವಷ್ಟೇ. ನನಗೆ ಆ ರೀತಿಯ ಮತ್ತೊಂದು ಡ್ರಾಮಾ ಕಂಪನಿ ತೆರೆಯಲು ಇಷ್ಟವಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಗತ್ಯವಾದ ವಿಶ್ಲೇಷಣೆಗಳು ನಡೆಯುತ್ತದೆ. ಅದಕ್ಕಾಗಿಯೇ ಇಂತಹ ಚರ್ಚೆಗಳು ಪದೇಪದೇ ವರದಿಯಾಗುತ್ತಿವೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದೆಲ್ಲವೂ ಕಪೋಲಕಲ್ಪಿತ. ನಾನು ಅದೇ ರೀತಿಯ ಹೇಳಿಕೆಗಳನ್ನು ನೀಡಲು ಇಷ್ಟಪಡುವುದಿಲ್ಲ ಎಂದರು.
ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ಅಭಿಪ್ರಾಯವನ್ನು ಗೌರವಿಸುವುದಾಗಿ ಸುರ್ಜೇವಾಲ ಹೇಳಿದ್ದಾರೆ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿರುತ್ತದೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.ಶಾಸಕ ಸುಬ್ಬಾರೆಡ್ಡಿ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯದ ದಾಳಿಯ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸರ್ಕಾರಿ ಹುದ್ದೆಗಳಲ್ಲಿ ಜನತಾ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂದು ತಮ ಬಳಿ ಯಾರೂ ಚರ್ಚೆ ಮಾಡಿಲ್ಲ. ಆ ರೀತಿ ಯಾರಾದರೂ ಮನವಿ ಕೊಟ್ಟರೆ ಪರಿಶೀಲನೆ ಮಾಡುತ್ತೇವೆ. ಸದ್ಯದ ಮಟ್ಟಿಗೆ ಒಳಮೀಸಲಾತಿ ಕಾರಣಕ್ಕಾಗಿ ಸರ್ಕಾರಿ ನೇಮಕಾತಿಗಳನ್ನು ತಡೆಹಿಡಿಯಲಾಗಿದೆ. ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ ನೀಡಬೇಕಾಗುತ್ತದೆ.
ಒಳಮೀಸಲಾತಿಯ ವಿವಾದ ಇತ್ಯರ್ಥವಾದ ಬಳಿಕ ನೇಮಕಾತಿಗಳು ನಡೆಯಲಿವೆ ಎಂದರು.ಮಂಗಳೂರಿನಲ್ಲಿ ಶಾಂತಿ ಸಭೆಯನ್ನು ನಡೆಸಿದ್ದೇವೆ. ಆ ಭಾಗದಲ್ಲಿ ಇತ್ತೀಚೆಗೆ ಕೊಲೆಗಳಾಗಿದ್ದವು. ಅದಕ್ಕಾಗಿ ಕೋಮು ನಿಗ್ರಹ ದಳ ರಚಿಸಿದ್ದೇವೆ. ಶಾಂತಿ ಸಭೆ ನಡೆಸಬೇಕು ಎಂಬ ಸಲಹೆ ಕೂಡ ಕೇಳಿಬಂದಿತ್ತು. ಅದರಂತೆ ನಿನ್ನೆ ಶಾಸಕರು, ಸಂಸದರು ಹಾಗೂ ಧಾರ್ಮಿಕ ಮುಖಂಡರ ಜೊತೆ ಚರ್ಚೆ ಮಾಡಿದ್ದೇನೆ. ಉತ್ತಮ ಸಲಹೆಗಳು ಬಂದಿವೆ. ಮತ್ತೊಮೆ ದೊಡ್ಡ ಸಭೆ ನಡೆಸುವುದಾಗಿ ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹರಡುವುದನ್ನು ನಿಯಂತ್ರಿಸಲು ಮುಂದಿನ ಅಧಿವೇಶನದಲ್ಲಿ ಕಾನೂನು ರೂಪಿಸಲಾಗುವುದು. ಕರಾವಳಿ ಕಲೆ, ಸಂಸ್ಕೃತಿ ರಕ್ಷಣೆಯಾಗಬೇಕು. ಶಾಂತಿ ನೆಲೆಸಬೇಕು. ಕೋಮು ಸೂಕ್ಷ್ಮ ಜಿಲ್ಲೆ ಎಂದು ಕರೆಯಬೇಡಿ ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಮಾದಕವಸ್ತುಗಳ ಹಾವಳಿ, ಮರಳು ಗಣಿಗಾರಿಕೆ, ಕೆಂಪು ಕಲ್ಲು ಮಾಫಿಯಾ ದಂಧೆಯ ಬಗ್ಗೆಯೂ ಚರ್ಚೆಯಾಗಿದೆ. ಪೊಲೀಸ್ ಅಧಿಕಾರಿಗಳಿಗೆ ಈ ವಿಷಯವಾಗಿ ಅಗತ್ಯ ಸಲಹೆ ಸೂಚನೆಯನ್ನು ನೀಡಿದ್ದೇವೆ ಎಂದರು.
- ಸಿದ್ದರಾಮಯ್ಯನವರೇ ಸಿಎಂ ಆಗಿ ಸಿದ್ದು ಮುಂದುವರೆಯುತ್ತಾರೆ : ಪುತ್ರ ಯತೀಂದ್ರ
- ಪಾಲಿಕೆಗಳ ನೌಕರರ ಕಷ್ಟಗಳನ್ನೂ ಕೇಳಿಸಿಕೊಳ್ಳಿ : ರಾಜ್ಯ ಸರ್ಕಾರಕ್ಕೆ HDK ಆಗ್ರಹ
- ಬೆಂಗಳೂರಿನ ಬೀದಿ ನಾಯಿಗಳಿಗೆ ನಿತ್ಯ ಬಾಡೂಟದ ಭಾಗ್ಯ
- ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೊಬೈಲ್ ಕಳವು ಮಾಡುತ್ತಿದ್ದ ಚೋರನ ಬಂಧನ
- ದಕ್ಷಿಣ ಭಾರತೀಯರು ಡ್ಯಾನ್ಸ್ ಬಾರ್ ನಡೆಸಲು ಮಾತ್ರ ಯೋಗ್ಯರು : ಶಿವಸೇನೆ ಶಾಸಕ ಗಾಯಕ್ವಾಡ್