Monday, July 1, 2024
Homeರಾಜ್ಯಜನ ನೀಡಿರುವ ಸ್ನೇಹ-ಅಭಿಮಾನ ದೊಡ್ಡದು : ಡಾ.ಬಿ.ಆರ್‌.ಮಮತಾ

ಜನ ನೀಡಿರುವ ಸ್ನೇಹ-ಅಭಿಮಾನ ದೊಡ್ಡದು : ಡಾ.ಬಿ.ಆರ್‌.ಮಮತಾ

ಬೆಂಗಳೂರು, ಜೂ.28- ನಾನು ಹೆಜ್ಜೆಯಿಟ್ಟಿರುವಲ್ಲೆಲ್ಲಾ ಜನ ನೀಡಿರುವ ಸ್ನೇಹ ದೊಡ್ಡದು. ಅದು ನನ್ನಲ್ಲಿ ಧನ್ಯತಾ ಭಾವ ತುಂಬಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾ ನಿರೀಕ್ಷಕರಾದ ಡಾ. ಬಿ.ಆರ್. ಮಮತಾ ಅವರು ಹೇಳಿದರು.

ಜೂ.30ರಂದು ನಿವೃತ್ತರಾಗುತ್ತಿರುವ ಮಮತಾ ಅವರಿಗೆ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. We are what the society makes us ಎಂಬ ಮಾತಿನಂತೆ ನನ್ನ ಸ್ನೇಹಿತರು, ಹಿರಿಯರು, ಮಾರ್ಗದರ್ಶಕರು ಅಧಿ ಕಾರಿಗಳು ನನ್ನನ್ನು ರೂಪಿಸಿದ್ದಾರೆ. ಚಿತ್ರದುರ್ಗದ ಕುಗ್ರಾಮ ಪಿಟ್ಲಾಳಿಯ ನಂಟು ಸದಾ ಉಳಿಸಿಕೊಂಡು ಬೆಳೆದುಬಂದ ಬಗೆಯನ್ನು ವಿವರಿಸಿದ ಮಮತಾ ಅವರು ಮೊದಲು ಆಸೆಪಟ್ಟಂತೆ ವೈದ್ಯರಾಗದೇ ಪತ್ರಕರ್ತೆಯಾಗಿದ್ದು, ವಿಪ್ರೋ ಸಂಸ್ಥೆಯಲ್ಲಿ ಕೆಲಸ ಮಾಡಿದ್ದನ್ನು ಸ್ಮರಿಸಿದರು. ನಂತರ ವಾರ್ತಾ ಇಲಾಖೆಗೆ ಅನಿರೀಕ್ಷಿತವಾಗಿ ಸೇರಿ ಐಎಎಸ್ವರೆಗಿನ ತಮ್ಮ ವೃತ್ತಿ ಜೀವನದ ಪಯಣವನ್ನು ವಿವರಿಸಿದರು.

ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಂ.ಆರ್.ಶ್ರೀನಿವಾಸಮೂರ್ತಿ ಮಾತನಾಡಿ, ಸೇವೆಗೆ ಸೇರಿದ ನಂತರವೂ ಮಮತಾ ಅವರು ತಮ್ಮ ಶಿಕ್ಷಣವನ್ನೂ ಮುಂದುವರೆಸಿದ್ದು ವಿಶೇಷ. ದೇಶ-ವಿದೇಶಗಳನ್ನು

ಸುತ್ತಿ ತಮ್ಮ ಜ್ಞಾನವನ್ನು ಬೆಳೆಸಿಕೊಂಡರು. ಇದು ಎಲ್ಲರೂ ಕಲಿಯಬೇಕಾದ ಪಾಠ. ಕಾನೂನು ಮೀರಿ ಅದರ ಆಂತರ್ಯ ಅರ್ಥಮಾಡಿಕೊಂಡು ಜನರಿಗೆ ಉಪಯೋಗವಾಗುವಂತೆ ನಡೆದುಕೊಂಡವರು ಮಮತಾ. ಸರ್ಕಾರಿ ವ್ಯವಸ್ಥೆಯ ಕುಂದು-ಕೊರತೆಗಳ ನಡುವೆಯೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಹುದೆಂದು ನಿರೂಪಿಸಿರುವುದು ಅವರ ದಕ್ಷತೆಗೆ ಸಾಕ್ಷಿಯಾಗಿದೆ. ಸರ್ಕಾರಿ ಸೇವೆಯಲ್ಲಿ ಸಾರ್ಥಕವಾದ ಸೇವೆ ಸಲ್ಲಿಸಿದ್ದಾರೆ ಎಂದರು.

ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ ಮಾತನಾಡಿ, ಅಭಿಪ್ರಾಯ ರೂಪಿಸುವಲ್ಲಿ ವಾರ್ತಾ ಇಲಾಖೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ವಾರ್ತಾಧಿ ಕಾರಿ ಮಮತಾ ಅವರು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿದ್ದರು. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಐಟಿ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಂತ್ರಜ್ಞಾನ ಆಗಷ್ಟೇ ಬೆಳೆಯುತ್ತಿದ್ದ ಸಂದರ್ಭದಲ್ಲಿ ಸರ್ಕಾರದ ಕಣ್ಣು ಮತ್ತು ಕಿವಿಗಳಾಗಿ ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಿದ್ದರು. ನಿವೃತ್ತಿ ನಂತರವೂ ಕ್ರಿಯಾಶೀಲರಾಗಿರುವಂತೆ ಸಲಹೆ ನೀಡಿದರು.

ಮಮತಾ ಅವರು ಗುರಿ ಸಾಧಿಸುವ ಛಾತಿವುಳ್ಳವರಾಗಿದ್ದಾರೆ. ಕಳಂಕರಹಿತರಾಗಿ, ಪ್ರಾಮಾಣಿಕತೆ, ಸರಳತೆಯಿಂದ ಕೆಲಸ ನಿರ್ವಹಿಸಿದವರು. ತಾವು ಎಲ್ಲೇ ಕಾರ್ಯನಿರ್ವಹಿಸಿದರೂ ಅವರು ಮಾಡಿದ ಕೆಲಸಕ್ಕೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ ಎಂದು ಎನ್.ಆರ್. ವಿಶುಕುಮಾರ್ ತಿಳಿಸಿದರು.

ಆಪ್ತ ಸ್ನೇಹಿತೆ, ಹಿರಿಯ ಪತ್ರಕರ್ತರಾದ ನಾಹೀದ್ ಅತಾವುಲ್ಲಾ ಮಾತನಾಡಿ ,ಮಮತಾ ಅವರು ನನಗೆ ಅಧಿ ಕಾರಿಗಿಂತಲೂ ಸ್ನೇಹಿತೆಯಾಗಿ ಹೆಚ್ಚು ಆಪ್ತರು. ಅಧಿ ಕಾರಶಾಹಿ ಹೇಗೆ ಕೆಲಸ ಮಾಡಬೇಕೆನ್ನುವುದಕ್ಕೆ ಮಮತಾ ಅತ್ಯುತ್ತಮ ಉದಾಹರಣೆ ಎಂದರು.

ಗಾಂಧಿ ಭವನದ ಅಧ್ಯಕ್ಷರಾದ ವೂಡೆ.ಪಿ.ಕೃಷ್ಣ ಮಾತನಾಡಿ, ವಾರ್ತಾ ಇಲಾಖೆಯಿಂದ ಐಎಎಸ್ಗೆ ಬಡ್ತಿ ಪಡೆದ ಮೊದಲ ಅಧಿ ಕಾರಿಯಾದ ಮಮತಾ ಅವರ ಸಂವಹನ ಕೌಶಲ್ಯ ಅತ್ಯುತ್ತಮ. ಸರಳತೆ ಹಾಗೂ ದಕ್ಷತೆ ಅವರ ವಿಶೇಷ ಗುಣಗಳು. ಮುದ್ರಾಂಕ ಇಲಾಖೆಯಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಕಾರಣೀಭೂತರು ಎಂದರು. ವಾರ್ತಾ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಹೆಚ್. ಬಿ.ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

Latest News