ಬೆಂಗಳೂರು,ಅ.17- ಪತ್ನಿ, ವೈದ್ಯೆ ಕೃತ್ತಿಕಾ ಕೊಲೆಗೆ 11 ತಿಂಗಳುಗಳಿಂದ ಪತಿ ಡಾ. ಮಹೇಂದ್ರ ರೆಡ್ಡಿ ಹಲವು ಬಾರಿ ಯತ್ನಿಸಿದ್ದ ಎಂಬುವುದು ಮಾರತ್ತಹಳ್ಳಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.ಕೃತಿಕಾ ಅವರ ಮರಣೋತ್ತರ ಪರೀಕ್ಷೆಯ ವರದಿಯಿಂದ ಕೊಲೆಯಾಗಿರುವುದು ಬಹಿರಂಗವಾಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತಿ ಮಹೇಂದ್ರರೆಡ್ಡಿಯನ್ನು ವಿಚಾರಣೆಗೆ ಒಳಪಡಿಸಿ ಹಲವು ಮಾಹಿತಿಗಳನ್ನು ಕಲೆಹಾಕಿದಾಗ ಹಲವು ಸ್ಪೋಟಕ ಸಂಗತಿಗಳು ಬೆಳಕಿಗೆ ಬಂದಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹೇಂದ್ರರೆಡ್ಡಿಯನ್ನು ಪೊಲೀಸರು ಬಂಧಿಸಿ, ಸುದೀರ್ಘ ವಿಚಾರಣೆ ನಡೆಸಿದಾಗ ಮದುವೆಯಾದ ಕೆಲವೇ ತಿಂಗಳ ಅಂತರದಲ್ಲಿ ಪತ್ನಿ ಕೊಲೆಗೆ ಪ್ರಯತ್ನಿಸಿದ್ದ ಎಂಬುವುದು ಗೊತ್ತಾಗಿದೆ.
ಮೇಲ್ನೋಟಕ್ಕೆ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವಂತೆ ಮಹೇಂದ್ರರೆಡ್ಡಿ ಕುಟುಂಬದವರ ವಿಶ್ವಾಸಗಳಿಸಿ ಅನುಮಾನಕ್ಕೆ ಆಸ್ಪದ ಕೊಡದಂತೆ ಒಳಗೊಳಗೆ ಕೊಲೆಗೆ ಸಂಚು ರೂಪಿಸುತ್ತಿದ್ದದ್ದು ಯಾರ ಗಮನಕ್ಕೂ ಬಂದಿಲ್ಲ.ಕೃತಿಕಾ ಮನೆಯವರು ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂದು ಮಹೇಂದ್ರರೆಡ್ಡಿ ಮೇಲೆ ತುಂಬ ನಂಬಿಕೆ ಇಟ್ಟುಕೊಂಡಿದ್ದರು.
ಆದರೆ ಆ ನಂಬಿಕೆಯನ್ನು ಮಹೇಂದ್ರರೆಡ್ಡಿ ಹುಸಿಗೊಳಿಸಿದ್ದಾನೆ. ಹಲವು ಬಾರಿ ಪತ್ನಿ ಮೇಲೆ ಡ್ರಗ್‌್ಸ ಪ್ರಯೋಗ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.11 ತಿಂಗಳಿನಿಂದ ಪ್ರತಿನಿತ್ಯ ಪತ್ನಿ ಕೃತಿಕಾಗೆ ಡ್ರಗ್‌್ಸ ನೀಡಿದ್ದು, ಬಳಿಕ ಒಂದು ದಿನ ಹೆಚ್ಚಿನ ಪ್ರಮಾಣದಲ್ಲಿ ಅನಸ್ತೇಶಿಯಾ ನೀಡಿ ಕೊಲೆ ಮಾಡಿ ಸಹಜ ಸಾವೆಂದು ಬಿಂಬಿಸಿ ನಾಟಕವಾಡಿದ್ದ. ವೈದ್ಯಕೀಯ ಪರೀಕ್ಷೆ ವರದಿ ನೋಡಿ ಕೃತಿಕಾ ಪೋಷಕರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.
ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿ ಹಲವು ವಸ್ತುಗಳನ್ನು ವಶಕ್ಕೆ ಪಡೆದು ಅದನ್ನು ಸಹ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, 6 ತಿಂಗಳ ಬಳಿಕ ಆತನ ಸಂಚು ಬಯಲಾಗಿದೆ.
ಡಾ.ಕೃತಿಕಾರೆಡ್ಡಿ ಅವರ ತಂದೆ ನೂರಾರು ಕೋಟಿ ಆಸ್ತಿವಂತರು. ಡಾ. ಮಹೇಂದ್ರರೆಡ್ಡಿ ಕುಟುಂಬ ಸಹ ಸ್ಥಿತಿವಂತರು. ಇವರಿಬ್ಬರಿಗೂ ಮೇ.26, 2024 ರಲ್ಲಿ ವಿವಾಹವಾಗಿದ್ದು, ದಂಪತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ನಡುವೆ ಡಾ. ಮಹೇಂದ್ರರೆಡ್ಡಿ ಮನಸಲ್ಲಿ ಯಾವ ದುರಾಲೋಚನೆ ಇತ್ತೋ ಗೊತ್ತಿಲ್ಲ.ವಿದ್ಯಾವಂತೆ, ರೂಪವಂತೆಯಾಗಿದ್ದ ಪತ್ನಿಯನ್ನೇ ಕೊಲೆ ಮಾಡಿ ಇದೀಗ ಪೊಲೀಸರ ವಶದಲ್ಲಿದ್ದಾನೆ.