ನವದೆಹಲಿ,ಡಿ.14- ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಾ. ಸಿ ಎನ್ ಮಂಜುನಾಥ್ ಅವರು ತೆಂಗು-ಮಾವು ಬೆಳಗೆಗಾರರ ಸಂಕಷ್ಟಕ್ಕೆ ನೆರವು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.
ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಐಸಿಎಆರ್-ಐಐಎಚ್ಆರ್ ಸಂಸ್ಥೆಯು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೋಟಕಾರಿಕಾ ವಲಯದಲ್ಲಿ ಅಧಿಕ ಇಳುವರಿ ನೀಡುವ ಬೆಳೆಗಳು, ಹೆಚ್ಚು ರೋಗ ನಿರೋಧಕ ಶಕ್ತಿ ಇರುವ ಬೆಳೆಗಳ ಸಂಶೋಧನೆ, ಹೊಸ ತಂತ್ರಜ್ಞಾನಗಳ ಆವಿಷ್ಕಾರ ಮೂಲಕ ರೈತರ ಆರ್ಥಿಕ ಪ್ರಗತಿಗೆ ಸಹಕರಿಸುತ್ತಿದೆ.
ದೇಶದಲ್ಲಿ 2025ರ ವೇಳೆಗೆ ಸುಮಾರು 1.5 ಲಕ್ಷ ತೋಟಗಾರಿಕಾ ಪದವೀಧರರ ಅವಶ್ಯಕತೆಯಿದ್ದು, ಪ್ರಸ್ತುತ 57 ತೋಟಗಾರಿಕಾ ಕಾಲೇಜುಗಳಲ್ಲಿ 10 ಸಾವಿರಕ್ಕೂ ಕಡಿಮೆ ಪದವೀಧರರು ಹೊರಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ, ರೈತರಿಗೆ, ಮಾರಾಟಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಐಸಿಎಆರ್-ಐಐಎಚ್ಆರ್ ಅನ್ನು ಡೀಮ್ಡೌ ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಕೋರಿದರು.
ಅಲ್ಲದೆ ಈಗಾಗಲೇ ಸಂಸದರು ಪತ್ರದ ಮುಖೇನ ಮನವಿ ಸಲ್ಲಿಸಿದ್ದ ರಾಮನಗರ ಜಿಲ್ಲೆಯಾದ್ಯಂತ ಮಾವು ಹಾಗೂ ತೆಂಗು ಬೆಳೆ ಶೇಕಡಾ 90ರಷ್ಟು ಹಾನಿಯಾಗಿದ್ದು 50,000ಕ್ಕೂ ಅಧಿಕ ರೈತರು ನಷ್ಟ ಅನುಭವಿಸಿದ್ದಾರೆ. ಮಾವು ಬೆಳೆಗೆ 57.67 ಕೋಟಿ ಹಾಗೂ ತೆಂಗು ಬೆಳೆಗೆ 30.65 ಕೋಟಿ ನೆರವನ್ನು ಎನ್ಡಿಆರ್ಎಫ್ ಅಡಿಯಲ್ಲಿ ಕಲ್ಪಿಸುವ ಮೂಲಕ ನಮ ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಕೇಂದ್ರ ಸಚಿವರಿಗೆ ಮಂಜುನಾಥ್ ಮನವಿ ಸಲ್ಲಿಸಿದರು.