ಬೆಂಗಳೂರು, ಜ.7- ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಮೂಲಕ ಸಂಸದರಾದ ಡಾ.ಸಿ.ಎನ್. ಮಂಜುನಾಥ್ ಅವರು ಅಲ್ಲಿದ್ದ ಪ್ರಯಾಣಿಕರನ್ನು ಅಚ್ಚರಿಗೊಳಿಸಿದರು.ಮಾಗಡಿಯಲ್ಲಿ ನೂತನ ಹಾಲು ಉತ್ಪಾದಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಅವರು ವೈದ್ಯಾಧಿಕಾರಿಗಳ ಸಮಾವೇಶದಲ್ಲಿ ಜಯನಗರದ ಸೌತ್ಎಂಡ್ ಸರ್ಕಲ್ಗೆ ಬರಬೇಕಾಗಿತ್ತು.
ಅಲ್ಲಿಂದ ಭದ್ರತಾ ಸಿಬ್ಬಂದಿಯೊಂದಿಗೆ ಬರಬೇಕಾದರೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ ಎಂದು ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಬಳಿ ಮೆಟ್ರೋ ರೈಲು ಏರಿದರು.
ಸಾಮಾನ್ಯರಂತೆಯೇ ಅವರು ಆಸನದಲ್ಲಿ ಕುಳಿತಾಗ ರೈಲಿನಲ್ಲಿದ್ದ ಪ್ರಯಾಣಿಕರು ಅಚ್ಚರಿಗೊಂಡರು. ಅವರ ಸರಳತೆಯನ್ನು ನೋಡಿ ಬೆರಗಾದರು. ಅವರ ಹತ್ತಿರ ಬಂದು ಮಾತನಾಡಿಸಿದ ಕೆಲವರು ತಾವು ರೈಲಿನಲ್ಲಿ ಪ್ರಯಾಣಿಸುತ್ತಿರುವುದು ಏಕೆ ಎಂದು ಕೇಳಿದ್ದಾರೆ.
ಸಾರ್ವಜನಿಕ ಸಾರಿಗೆಯನ್ನು ಬಳಸಿದಾಗ ಸಮಯ ಉಳಿತಾಯವಾಗುತ್ತದೆ ಮತ್ತು ಪರಿಸರ ಮಾಲಿನ್ಯ ತಪ್ಪುತ್ತದೆ. ಹೀಗಾಗಿ ನಾನು ಜಯನಗರಕ್ಕೆ ಹೋಗಬೇಕಾಗಿದ್ದರಿಂದ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದೇನೆ ಎಂದು ಅವರೊಂದಿಗೆ ತಮಾಷೆಯಾಗಿ ಮಾತನಾಡಿ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಕೆಲವೊಂದು ಮಾಹಿತಿಗಳನ್ನೂ ವಿನಿಮಯ ಮಾಡಿಕೊಂಡರು.
ಹಿರಿಯ ನಾಗರಿಕರು ಬಂದಾಗ ಆಸನದಿಂದ ಎದ್ದು ಅವರಿಗೆ ಕುಳಿತುಕೊಳ್ಳುವಂತೆ ಹೇಳಿ ನಂತರ ಕೆಲಕಾಲ ಪ್ರಯಾಣಿಕರೊಂದಿಗೆ ಬೆರೆತು ಮಾತನಾಡಿದ್ದಾರೆ. ಕೆಲವರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದು ಡಾ.ಸಿ.ಎನ್. ಮಂಜುನಾಥ್ ಅವರ ಸರಳತೆಯನ್ನು ಕೊಂಡಾಡಿದ್ದಾರೆ.