ಬೆಂಗಳೂರು,ಏ.30- ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯರ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಸಾಮಾಜಿಕ ತಾಲತಾಣಗಳಲ್ಲಿ ಸಂತ್ರಸ್ತ ಮಹಿಳೆಯರ ಫೋಟೋ ವಿಡಿಯೋಗಳನ್ನು ಹಂಚಲಾಗುತ್ತಿದೆ. ಇದರಿಂದ ಮಹಿಳೆಯರ ಘನತೆಗೆ ಧಕ್ಕೆ ಉಂಟಾಗುತ್ತಿದೆ. ಸಂತ್ರಸ್ತ ಮಹಿಳೆಯ ಕುಟುಂಬದಲ್ಲೂ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಈ ಬಗ್ಗೆ ಸಾಕಷ್ಟು ಮಹಿಳೆಯರಿಂದ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಸಂತ್ರಸ್ತ ಮಹಿಳೆಯರ ವಿಡಿಯೋ ಶೇರ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ. ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರ ಫೋಟೋ, ವಿಡಿಯೋಗಳನ್ನು ಹರಿಯಬಿಡುವ ಮೂಲಕ ಅನ್ಯಾಯಕ್ಕೊಳಗಾದ ಮಹಿಳೆಯರ ಘನತೆಗೆ ಕುಂದು ತರುತ್ತಿದ್ದಾರೆ. ಇದರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ಈಗಾಗಲೇ ಹಾಸನ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಎಸ್‌ಐಟಿ ರಚನೆ ಮಾಡಿ ಎರಡು ದಿನಗಳಷ್ಟೇ ಆಗಿದೆ. ತನಿಖಾ ತಂಡಕ್ಕೆ ಸಮಯಾವಕಾಶ ಕೊಡಬೇಕಿದೆ. ನಾವು ಸ್ವಲ್ಪ ಕಾಯಬೇಕಾಗಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಆಗಲಿದೆ ಎಂಬ ಭರವಸೆ ಇದೆ ಎಂದು ಇದೇ ಸಂದರ್ಭದಲ್ಲಿ ನಾಗಲಕ್ಷ್ಮಿ ಚೌಧರಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚನೆ ಆಗಿರುವುದರಿಂದ ನಾವು ಕಾಯಬೇಕು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಮುಂದೆ ಬರುವ ಸಂತ್ರಸ್ತ ಮಹಿಳೆಯರ ಗೌಪ್ಯತೆ ಕಾಪಾಡೋದು, ತನಿಖೆಯಲ್ಲಿ ಭಾಗಿಯಾದಾಗ ರಕ್ಷಣೆ ಕೊಡಿಸುವುದು ಮಹಿಳಾ ಆಯೋಗದ ಜವಾಬ್ದಾರಿಯಾಗಿದೆ. ಈ ಭರವಸೆಯನ್ನು ನಾನು ಸಂತ್ರಸ್ತರಿಗೆ ನೀಡುತ್ತೇನೆ ಎಂದು ಹೇಳಿದರು.