ಮಣಿಪಾಲ: ಮಣಿಪಾಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಟಿಎಂಎ ಪೈ ಅವರು ಬಹುಮುಖ ವ್ಯಕ್ತಿತ್ವ, ಶಿಕ್ಷಣ ತಜ್ಞ, ಬ್ಯಾಂಕರ್, ಲೋಕೋಪಕಾರಿ ಮತ್ತು ನಿಜವಾದ ರಾಷ್ಟ್ರ ನಿರ್ಮಾತೃ ಆಗಿದ್ದರರು ಎಂದು ಆಂಧ್ರಪ್ರದೇಶದ ರಾಜ್ಯಪಾಲರಾದ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು ಬಣ್ಣಿಸಿದರು.
ಮಣಿಪಾಲ್ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಟಿಎಂಎ ಪೈ ಅವರ 127ನೇ ಜನ್ಮದಿನ ಆಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು, ಅನಕ್ಷರತೆ ಮತ್ತು ಅನಾರೋಗ್ಯವನ್ನು ನಿರ್ಮೂಲನೆ ಮಾಡುವ ಮೂಲಕ ಬಡತನವನ್ನು ನಿರ್ಮೂಲನೆ ಮಾಡಬಹುದು ಎಂಬುದು ಪೈ ಅವರ ಬಲವಾದ ನಂಬಿಕೆಯಾಗಿತ್ತು.
ಡಾ. ಪೈ ಅವರು ನಿಜವಾದ ಕರ್ಮಾ ಯೋಗಿಯಾಗಿದ್ದರು. ವಿದ್ಯಾವಂತ ಮಕ್ಕಳು ಕೇವಲ ಕುಟುಂಬದ ಆಸ್ತಿ ಅಷ್ಟೇ ಅಲ್ಲದೆ, ಅವರು ಪ್ರಗತಿಶೀಲ ರಾಷ್ಟ್ರದ ನಿರ್ಮಾತೃವಾಗಿದ್ದರು ಎಂದರು. ಪೈ ಅವರು ಸ್ಥಾಪಿಸಿದ ಮೂಡುಬಿದಿರೆಯ ಮಹಾವೀರ ಕಾಲೇಜಿನ ಹೆಮ್ಮೆಯ ಹಳೆಯ ವಿದ್ಯಾರ್ಥಿ ನಾನು. ಅವರ ದೃಷ್ಟಿಕೋನ ನನ್ನ ಶೈಕ್ಷಣಿಕ ಪ್ರಯಾಣ ಮತ್ತು ವೃತ್ತಿ ಜೀವನವನ್ನು ರೂಪಿಸಿತು ಎಂದು ಅವರು ನೆನಪಿಸಿಕೊಂಡರು.
ಮಾಹೆ ಪ್ರೊ. ಚಾನ್ಸಲರ್ ಡಾ. ಎಚ್.ಎಸ್. ಬಲ್ಲಾಳ್ ಅವರು ಮಾತನಾಡಿ, ನಮ್ಮ ಸಂಸ್ಥಾಪಕ ಡಾ. ಟಿಎಂಎ ಪೈ ಅವರದ್ದು ಅಸಾಧಾರಣ ದೂರದೃಷ್ಟಿತ್ವವುಳ್ಳ ವ್ಯಕ್ತಿತ್ವ. ಅವರು ಕೇವಲ ಒಂದು ಶಿಕ್ಷಣ ಸಂಸ್ಥೆಯನ್ನು ರೂಪಿಸಿಲ್ಲ, ಬದಲಿಗೆ ಶೈಕ್ಷಣಿಕ ಪರಿಸರವನ್ನು ನಿರ್ಮಿಸಿದ್ದಾರೆ. 1950ರ ದಶಕದಲ್ಲಿ ಸ್ವಂತ ಹಣದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು ಒಂದು ಕ್ರಾಂತಿಕಾರಿಕ ನಡೆ. ಇಂದು, ನಾವು ಅವರನ್ನು ಗೌರವಯುತವಾಗಿ ಸ್ಮರಿಸುತ್ತ, ಅವರ ತತ್ವಗಳಾದ ಗುಣಮಟ್ಟದ ಶಿಕ್ಷಣ, ನಾವೀನ್ಯತೆ ಮತ್ತು ಸಮಾಜ ಸೇವೆಗೆ ಬದ್ಧರಾಗಿರುತ್ತವೆ ಎನ್ನುವುದನ್ನು ನಮಗೆ ನಾವೇ ಜವಾಬ್ದಾರಿವಹಿಸಿಕೊಳ್ಳಬೇಕು ಎಂದರು.
ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ ಮಾತನಾಡಿ, ನಮ್ಮ ಸಂಸ್ಥಾಪಕರಾದ ಡಾ ಟಿಎಂಎ ಪೈ ಅವರ 127ನೇ ಜನ್ಮದಿನವನ್ನು ಆಚರಿಸುತ್ತಿರುವ ಈ ಸಮಯದಲ್ಲಿ, ನಮ್ಮ ಸಂಸ್ಥೆಯ ನಿರಂತರ ಮಾರ್ಗ ಸೂಚಿಯಾಗಿರುವ ಧ್ಯೇಯ ಮತ್ತು ದೂರದೃಷ್ಟಿತ್ವವನ್ನು ನಾವು ಪಾಲಿಸಬೇಕು. ಒಂದು ಶಿಕ್ಷಣ ಸಂಸ್ಥೆಯಿಂದ ಶುರುವಾಗಿ ಒಂದು ಸಮಗ್ರ ಶೈಕ್ಷಣಿಕ ಪರಿಸರವನ್ನು ಸೃಷ್ಟಿಸಿದ ಡಾ. ಪೈ ಅವರದ್ದು ಗಮನಾರ್ಹ ಪಯಣ. ಶಿಕ್ಷಣ ಎಲ್ಲರಿಗೂ ದೊರೆಯಬೇಕು ಎನ್ನುವುದು ಅವರ ಮೂಲ ನಂಬಿಕೆ. ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಅದನ್ನು ಸಾಕಾರಗೊಳಿಸಲು ನಾವೆಲ್ಲ ನಿರಂತರ ಶ್ರಮಿಸಬೇಕು ಎಂದು ಹೇಳಿದರು.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್.ಪೈ,ಮಾಹೆ ಟ್ರಸ್ಟ್ ಅಧ್ಯಕ್ಷರಾದ ಡಾ. ರಂಜನ್ ಪೈ, ಡಾ. ಟಿಎಂಎ ಪೈ ಫೌಂಡೇಶನ್ ಅಧ್ಯಕ್ಷ ಟಿ. ಅಶೋಕ್ ಪೈ, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಕಾರ್ಯಾಧ್ಯಕ್ಷ, ಟಿ. ಸತೀಶ್ ಯು ಪೈ, ಮಣಿಪಾಲ್ ಗ್ರೂಪ್‌ನ ವಿವಿಧ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.