ಕೋಲ್ಕತ್ತಾ, ಡಿ.9- ಕ್ರಿಕೆಟಿಗರು ಕೂಡ ಪದವೀಧರರಾಗಬೇಕೆಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಟಗಾರ ವೆಂಕಟೇಶ್ ಅಯ್ಯರ್ ಅವರು ಹೇಳಿದ್ದಾರೆ. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ ಸಿಬಿ ಸೇರಿದಂತೆ ಹಲವು ಫ್ರಾಂಚೈಸಿಗಳ ಗಮನ ಸೆಳೆದಿದ್ದ ವೆಂಕಟೇಶ್ ಅಯ್ಯರ್, 23.75 ಕೋಟಿ ರೂ.ಪಡೆದು ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರಿಕೊಂಡಿದ್ದಾರೆ.
ಕ್ರಿಕೆಟ್ನೊಂದಿಗೆ ವಿದ್ಯಾ ಭ್ಯಾಸದ ಕಡೆಗೂ ಗಮನ ಹರಿಸಿದ್ದ ವೆಂಕಟೇಶ್ ಅಯ್ಯರ್ ಅವರು ಹಣಕಾಸು ವಿಷಯದಲ್ಲಿ ಎಂಬಿಎ ಪದವಿ ಪಡೆದಿದ್ದರು. ಕ್ರಿಕೆಟ್ ನಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದರೂ ಓದಿನ ಕಡೆ ಹೆಚ್ಚಿನ ಗಮನ ಹರಿಸಿದ್ದು, ಪಿಎಚ್ ಡಿ ಪದವಿ ಪಡೆದಿದ್ದು, ಇನ್ನೂ ಮುಂದೆ ನನ್ನ ಮುಂದೆ ಡಾ. ವೆಂಕಟೇಶ್ ಅಯ್ಯರ್ ಎಂದು ಕರೆಯಬೇಕಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟಿಗರು ಪದವೀಧರರಾಗಬೇಕು:
`ಕ್ರಿಕೆಟಿಗರು ಕೂಡ ಪದವೀಧರ ರಾಗಬೇಕು ಎಂಬುದು ನನ್ನ ಭಾವನೆ. ಅವರು ಕ್ರಿಕೆಟ್ ಜ್ಞಾನದ ಜೊತೆಗೆ ಶಿಕ್ಷಣದ ಮೂಲಕ ಅಧಿಕ ಮಟ್ಟದ ಜ್ಞಾನ ಹೊಂದಬೇಕು. ಕನಿಷ್ಠ ಪಕ್ಷ ಕ್ರಿಕೆಟಿಗರು ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆಯಬೇಕು. ಅದು ನಿಮಿಂದ ಖಂಡಿತವಾಗಿಯೂ ಸಾಧ್ಯವಾಗುತ್ತದೆ. ನಾನು ಈಗ ಪಿಎಚ್ ಡಿ (ಹಣಕಾಸು) ಪದವಿ ಹೊಂದಿದ್ದೇನೆ. ಇನ್ನು ಮುಂದೆ ಸುದ್ದಿಗಾರರು ನನ್ನನ್ನು ಡಾ.ವೆಂಕಟೇಶ್ ಅಯ್ಯರ್ ಎಂಬ ಹೆಸರಿನಲ್ಲಿ ಸಂದರ್ಶನ ಮಾಡಬೇಕು’ ಎಂದು ಹೇಳಿ ದರು.
ಮಧ್ಯಮ ಕುಟುಂಬದಿಂದ ಬಂದ ವೆಂಕಟೇಶ್ ಅಯ್ಯರ್:
`ನಾನು ತುಂಬಾ ಸಂಪ್ರದಾಯಿಕ ಹಾಗೂ ಮಧ್ಯಮ ಕುಟುಂಬದಿಂದ ಬಂದವನಾಗಿದ್ದು, ನನ್ನ ಪೋಷಕರು ನಾನು ಕೇವಲ ಕ್ರಿಕೆಟ್ ಕಡೆ ಹೆಚ್ಚು ಗಮನ ಹರಿಸುವುದನ್ನು ಇಷ್ಟಪಡುತ್ತಿರಲಿಲ್ಲ. ಆದರಿಂದ ನಾನು ಅಕಾಡೆಮಿಗಳಲ್ಲಿ ಕ್ರಿಕೆಟ್ ಆಡುವ ಉಪಾಯ ಮಾಡಿದೆ. ಆದರೆ ನನ್ನ ಪೋಷಕರು ನಾನು ಕ್ರೀಡೆಯಲ್ಲೂ ಉನ್ನತ ಮಟ್ಟಕ್ಕೆ ತಲುಪಲಿ ಎಂದು ಬಯಸಿದ್ದರು.
ಮಧ್ಯಪ್ರದೇಶ ತಂಡಕ್ಕೆ ಯಾರಾದರೂ ಯುವ ಆಟಗಾರರ ಆಗಮನವಾದರೆ, ನಾನು ಅವರನ್ನು ನೀವು ಓದಿದ್ದೀರಾ? ಇಲ್ಲವಾ? ಎಂದು ಕೇಳುತ್ತಿದ್ದೆ. ಏಕೆಂದರೆ ಒಬ್ಬ ಕ್ರಿಕೆಟಿ 60 ವರ್ಷಗಳ ಕಾಲ ಆಡಲು ಸಾಧ್ಯವಿಲ್ಲ. ಆದರೆ ವಿದ್ಯೆ ಅವರು ಸಾಯುವವರೆಗೂ ಅವರ ಜೊತೆಯಲ್ಲಿರುತ್ತದೆ. ಒಂದು ವೇಳೆ ನೀವು ವಿದ್ಯಾವಂತರಾದರೆ ಸುಖಮಯ ಜೀವನ ನಡೆಸಬಹುದು’ ಎಂದು ವೆಂಕಟೇಶ್ ಅಯ್ಯರ್ ತಿಳಿಸಿದ್ದಾರೆ.
`ಒಂದು ವೇಳೆ ನೀವು ವಿದ್ಯಾವಂತರಾದರೆ ಕ್ರಿಕೆಟ್ ಮೈದಾನದಲ್ಲೂ ಕೂಡ ಒತ್ತಡ ನಿಭಾಯಿಸುವ ಮೂಲಕ ಉತ್ತಮ ಆಟ ಹೊರಹೊಮಿಸಲು ಸಾಧ್ಯವಾಗುತ್ತದೆ’ ಎಂದು ಕೆಕೆಆರ್ ಆಟಗಾರ ಹೇಳಿದ್ದಾರೆ.