ಮೈಸೂರು,ಏ.3- ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಹೃದಯಾಘಾತವಾಗಿ ಪಾದಚಾರಿ ಮಹಿಳೆಗೆ ಬಸ್ ಡಿಕ್ಕಿಯಾಗಿದ್ದು, ಈ ವೇಳೆ ಪಾದಚಾರಿ ಮಹಿಳೆ ಮತ್ತು ಬಸ್ ಚಾಲಕ ಇಬ್ಬರೂ ಸಾವನ್ನಪ್ಪಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಬಳಿ ನಡೆದಿದೆ.
ಹೊರಗುತ್ತಿಗೆ ಆಧಾರದಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಮೈಸೂರು ಮೂಲದ ಚಾಲಕ ಸುನೀಲ್ ಕುಮಾರ್, ಹೆಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಗ್ರಾಮದ ಲಕ್ಷ್ಮಮ್ಮ ಸ್ಥಳದಲ್ಲೇ ಮೃತಪಟ್ಟವರಾಗಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಕೇರಳ ರಾಜ್ಯದ ಮಾನಂದವಾಡಿಯಿಂದ ಹೆಚ್.ಡಿ.ಕೋಟೆಗೆ ಬರುತ್ತಿತ್ತು. ಹೆಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ ಬಳಿ ಬರುತ್ತಿದ್ದಂತೆ ಚಾಲಕನಿಗೆ ಹೃದಯಾಘಾತವಾಗಿದ್ದು ಬಸ್ ಸ್ಟೇರಿಂಗ್ ಮೇಲೆ ಚಾಲಕ ಪ್ರಜ್ಞೆ ತಪ್ಪಿ ಮಲಗಿದ್ದು ಈ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಜಮೀನಿಗೆ ಬಸ್ ನುಗ್ಗಿದೆ.
ಈ ಸಮಯದಲ್ಲಿ ಪಾದಾಚಾರಿ ಮಹಿಳೆ ಲಕ್ಷ್ಮಮ್ಮಗೆ ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿದ್ದಾರೆ. ಆದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.