ಬೆಂಗಳೂರು,ಏ.10- ಡೀಸೆಲ್, ಟೋಲ್ ದರ ಏರಿಕೆ ಖಂಡಿಸಿ ಏ.15 ರಿಂದ ಲಾರಿ ಮಾಲೀಕರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ನಮ್ಮ ಬೆಂಬಲವಿದೆ ಎಂದು ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಹೇಳಿದ್ದಾರೆ.
ಮುಷ್ಕರವನ್ನು ಬೆಂಬಲಿಸಿ ರಾಜ್ಯದಲ್ಲಿ ಚಾಲಕರು ವಾಹನಗಳ ಸಂಚಾರವನ್ನು ಬಂದ್ ಮಾಡಲಿದ್ದಾರೆ. ಡಿಸೇಲ್ ಬೆಲೆ 7 ತಿಂಗಳಲ್ಲಿ 5ರೂ ಏರಿಕೆಯಾಗಿದೆ. ಈಗಾಗಲೇ ಟೋಲ್ ದರ ದುಬಾರಿಯಾಗಿದ್ದು, ಹೆದ್ದಾರಿಗಳಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಟೋಲ್ ದರ ಏರಿಕೆಯಿಂದ ಇನ್ನಷ್ಟು ಸಮಸ್ಯೆಗಳು ತಲೆ ದೂರಲಿದೆ. ಡೀಸೆಲ್ ದರದ ಜೊತೆ ಟೋಲ್ ದರ ಏರಿಕೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಏ.14ರಿಂದ ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರ
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು ಫಿಟೈಸ್ ಫೀಸ್, ಬಾರ್ಡರ್ ಚೆಕ್ ಪೋಸ್ಟ್, ಡಿಸೇಲ್ ದರ ಇಳಿಕೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ ಮಾಲೀಕರ ಸಂಘ ಮುಷ್ಕರಕ್ಕೆ ಕರೆ ನೀಡಿದೆ. ಬೇಡಿಕೆ ಈಡೇರುವವರೆಗೆ ಹೋರಾಟಕ್ಕೆ ನಮ್ಮ ಬೆಂಬಲ ಇರಲಿದೆ ಎಂದು ಹೇಳಿದರು.
ಮುಷ್ಕರ ಬೆಂಬಲಿಸಿ ಏರ್ಪೋಟ್ ಟ್ಯಾಕ್ಸಿ, ಜಲ್ಲಿ ಮರಳು, ಸೇರಿದಂತೆ ಗೂಡ್ಸ್ ವಾಹನಗಳು ಸಹ ಬಂದ್ ಆಗಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡೀಸೆಲ್ ಮೇಲೆ ಅನಗತ್ಯವಾಗಿ ತೆರಿಗೆ ಹೊರೆ ಹಾಕುತ್ತಿದ್ದು, ಇದರಿಂದ ಬೆಲೆ ಏರಿಕೆಯಾಗಲಿದೆ. ಹೆಚ್ಚಾಗುತ್ತಿರುವ ಬೆಲೆ ಮತ್ತು ಹಣದುಬ್ಬರದ ನಡುವೆ ಚಾಲಕರು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಬೊಕ್ಕಸ ತುಂಬಿಸಲು ತೆರಿಗೆ ಹೆಚ್ಚಳ ಮಾಡುತ್ತಿದ್ದು,ಚಾಲಕ ಸಮುದಾಯಕ್ಕೆ ಮಾತ್ರ ವೇತನ ಹೆಚ್ಚಾಗುತ್ತಿಲ್ಲ. ಹೀಗಾಗಿ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಅವರು ಸ್ಪಷ್ಟಪಡಿಸಿದರು.