ತುಮಕೂರು, ಡಿ.14- ಕೃಷಿ ಹೊಂಡದಲ್ಲಿ ಸೋಡಿಯಂ ಕೆಮಿಕಲ್ ಎಸೆದು ಸ್ಫೋಟಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಖ್ಯಾತಿಯ ಡೋಣ್ ಪ್ರತಾಪ್‌ನನ್ನು ಮಧುಗಿರಿಯ ಜೆಎಂಎಫ್‌ಸಿ ನ್ಯಾಯಾಲಯ ಈತನನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಈ ಪ್ರಕರಣ ಸಂಬಂಧ ಡ್ರೋಣ್ ಪ್ರತಾಪ್, ಜಮೀನಿನ ಮಾಲೀಕ ಸೇರಿದಂತೆ ಮೂವರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಮಿಡಿಗೇಶಿ ಠಾಣೆ ಪೊಲೀಸರು ಸುಮೋಟೊ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಪ್ರತಾಪ್‌ನನ್ನು ಪೊಲೀಸರು ಕೃಷಿ ಹೊಂಡದ ಸ್ಥಳಕ್ಕೆ ಕರೆತಂದು ಸ್ಫೋಟಿಸಿದ ಸ್ಥಳ ಮಹಜರು ನಡೆಸಿ ಮಾಹಿತಿಗಳನ್ನು ಪಡೆದಿದ್ದಾರೆ.
ತಾಲೂಕಿನ ಹೋಬಳಿಯ ಐಡಿ ಹಳ್ಳಿ ಜನಕಲೋಟಿ ಗ್ರಾಮದ ರೈತರ ಕೃಷಿ ಹೊಂಡದಲ್ಲಿ ಇತ್ತೀಚೆಗೆ ಸೋಡಿಯಂ ಎಸೆದು ಸ್ಫೋಟಿಸಿ ಅದನ್ನು ಯು ಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದ.
ಈ ವಿಡಿಯೋ ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಡೋಣ್ ಪ್ರತಾಪ್‌ನನ್ನು ಬೆಂಗಳೂರಿನಲ್ಲಿ ಬಿಎನ್‌ಎಸ್ ಕಾಯ್ದೆ ಸೆಕ್ಷನ್ 288 ಮತ್ತು ಸ್ಫೋಟಕ ವಸ್ತುಗಳ ನಿಷೇಧ ಕಾಯ್ದೆಯಡಿ ಸುಮೊಟೋ ಕೇಸು ದಾಖಲಿಸಿಕೊಂಡು ಬಂಧಿಸಿದ್ದು, ಮೂರು ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಈ ರೀತಿಯ ವಿಡಿಯೋ ಮಾಡುವುದು ಕಾನೂನು ಬಾಹಿರ. ಯಾವ ಕೆಮಿಕಲ್‌ಗಳನ್ನು ಬಳಸಿದರೆ ಅದು ನೀರಿನಲ್ಲಿ ಸ್ಫೋಟವಾಗುತ್ತದೆ ಎಂಬುದನ್ನು ಪ್ರತಾಪ್ ವಿಡಿಯೋ ಮಾಡಿ ಹೇಳಿರುವುದು ಕಿಡಿಗೇಡಿಗಳು ಇದನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಈ ರೀತಿಯ ಪ್ರಯೋಗ ಮಾಡುವುದು ಅಪಾಯಕಾರಿ ಹಾಗೂ ಕಾನೂನು ಬಾಹಿರ. ಈ ಪ್ರಯೋಗ ಮಾಡುವ ಮುನ್ನ ಪ್ರತಾಪ್ ಯೋಚನೆ ಮಾಡಬೇಕಿತ್ತು. ಇದೀಗ ತಾನು ಮಾಡಿದ ತಪ್ಪಿನಿಂದಾಗಿ ಜೈಲು ಸೇರುವಂತಾಗಿದೆ.