ಬೆಂಗಳೂರು, ಜ.1– ಹೊಸ ವರ್ಷಾಚರಣೆ ಸಂದರ್ಭದಲ್ಲೇ ನಗರ ಸಂಚಾರ ವಿಭಾಗದ ಪೊಲೀಸರು ನಗರದಾದ್ಯಂತ ವಿಶೇಷ ಕಾರ್ಯಾಚರಣೆ ಕೈಗೊಂಡು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ 513 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ರಾತ್ರಿ 11 ಗಂಟೆಯಿಂದ ಇಂದು ಬೆಳಗಿನ ಜಾವ 2 ಗಂಟೆಯವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸರು 28127ಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ಮಾಡಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಸವಾರರು ಹಾಗೂ ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ವಾರದ ಮೊದಲೇ ತಪಾಸಣೆ:
ಒಂದು ವಾರದ ಮೊದಲೇ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ಅತಿ ವೇಗ ಹಾಗೂ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ 95179 ವಾಹನಗಳನ್ನು ತಪಾಸಣೆ ಮಾಡಿ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷ 7620 ವಾಹನಗಳನ್ನು ತಪಾಸಣೆ ಮಾಡಿ 330 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.
ಅತಿ ವೇಗ ಹಾಗೂ ಅಜಾಗರೂಕತೆ ಚಾಲನೆ, ವೀಲ್ಹಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಅವರು ಎಚ್ಚರಿಕೆ ನೀಡಿದ್ದಾರೆ.2024ರಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ 23574 ಪ್ರಕರಣಗಳು ದಾಖಲಾಗಿವೆ.
ಕೆ ಆರ್ ಪುರ :
ವೀಲ್ಹಿಂಗ್ ಮಾಡುವವರ ವಿರುದ್ಧ ಕೆಆರ್ ಪುರ ಸಂಚಾರಿ ಠಾಣೆ ಪೊಲೀಸರು ನಿನ್ನೆ ವಿಶೇಷ ಕಾರ್ಯಾಚರಣೆ ಕೈಗೊಂಡು ಹಳೆ ಮದ್ರಾಸ್ ಮುಖ್ಯರಸ್ತೆಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸಮೇತ ಸವಾರನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೂರ್ವ ವಿಭಾಗದ ಉಪಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ್ಞಾನ ಭಾರತಿ:
ಎಸ್ಎಂವಿ ಲೇಔಟ್ನ 100 ಅಡಿ ರಸ್ತೆಯಲ್ಲಿ ಕೆಎಲ್ಇ ಲಾ ಕಾಲೇಜು ಹತ್ತಿರ ಜ್ಞಾನ ಭಾರತಿ ಸಂಚಾರಿ ಠಾಣೆ ಪೊಲೀಸರು ನಿನ್ನೆ ಗಸ್ತಿನಲ್ಲಿದ್ದಾಗ ಮಂಗನ ಹಳ್ಳಿ ಕಡೆಯಿಂದ ವೀಲ್ಹಿಂಗ್ ಮಾಡಿಕೊಂಡು ಬಂದ ಸವಾರನನ್ನು ತಡೆದು ವಾಹನವನ್ನು ಜಪ್ತಿ ಪಡೆಸಿಕೊಂಡು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತ ಅನಿತಾ ಬಿ. ಹದ್ದಣ್ಣನವರ ತಿಳಿಸಿದ್ದಾರೆ.
ವೀಲ್ಹಿಂಗ್ ಪ್ರಕರಣಗಳು: ವೀಲ್ಹಿಂಗ್ ಮಾಡುವರ ವಿರುದ್ಧ ಇದುವರೆಗೂ ಕಾರ್ಯಾಚರಣೆ ಕೈಗೊಂಡು ಒಟ್ಟು 532 ಪ್ರಕರಣಗಳನ್ನು ದಾಖಲಿಸಿಕೊಂಡು 520 ವಾಹನಗಳನ್ನು ಜಪ್ತಿ ಮಾಡಿ 456 ಮಂದಿಯನ್ನು ಬಂಧಿಸಿ 146 ಡಿ.ಎಲ್ಗಳನ್ನು, 246 ಆರ್ಸಿ ಸಂಖ್ಯೆಯನ್ನು ರದ್ದುಪಡಿಸಲು ಸಾರಿಗೆ ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗಿದೆ.