Monday, September 1, 2025
Homeಜಿಲ್ಲಾ ಸುದ್ದಿಗಳು | District Newsಕುಡಿದ ಅಮಲಿನಲ್ಲಿ ಹೊಡೆದಾಡಿಕೊಂಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು

ಕುಡಿದ ಅಮಲಿನಲ್ಲಿ ಹೊಡೆದಾಡಿಕೊಂಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು

Drunk Gram Panchayat Development Officers Fight each other

ಚನ್ನರಾಯಪಟ್ಟಣ, ಆ.31- ಕುಡಿದ ಅಮಲಿನಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಬ್ಬರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಇಲ್ಲಿ ನಡೆದಿದೆ. ತಾಲ್ಲೂಕಿನ ಗೋವಿನಕೆರೆ ಗ್ರಾಮದ ಗ್ರಾಪಂ ಸದಸ್ಯರೊಬ್ಬರ ಮನೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹಿರೀಸಾವೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ ಹಾಗೂ ಎಂ. ಶಿವರ ಗ್ರಾ.ಪಂ. ಪಿಡಿಒ ರಾಮಸ್ವಾಮಿ ನಡುವೆ ಜಗಳ ನಡೆದಿದೆ. ಸತೀಶ ಅವರ ತಲೆಗೆ ಮದ್ಯದ ಬಾಟಲಿಯಿಂದ ರಾಮಸ್ವಾಮಿ ಹೊಡೆದಿದ್ದಾರೆ.ಸತೀಶ ಅವರಿಗೆ ಗಂಭೀರ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ: ಎಂ. ಶಿವರ ಗ್ರಾ.ಪಂ. ಸದಸ್ಯ ಗೋವಿನಕೆರೆ ಗ್ರಾಮದ ರಾಮು ಅವರ ಮನೆಗೆ ಗಣೇಶ ಹಬ್ಬದ ನಿಮಿತ್ತ ಊಟಕ್ಕೆಂದು ಸತೀಶ ಬಂದಿದ್ದರು. ರಾಮು, ರಘು ಅವರು ಮದ್ಯ ಸೇವನೆ ಮಾಡುತ್ತಾ ಕುಳಿತಿದ್ದಾಗ ಆಹ್ವಾನದ ಮೇರೆಗೆ ರಾಮಸ್ವಾಮಿ ಸಹ ಬಂದಿದ್ದರು.

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆ ವಿಚಾರವಾಗಿ ಅಧಿಕಾರಿಗಳಿಬ್ಬರ ನಡುವೆ ವೈಮನಸ್ಸು ಉಂಟಾಗಿ ಮಾತನಾಡುತ್ತಿರಲಿಲ್ಲ. ಮದ್ಯ ಸೇವನೆ ಮಾಡುತ್ತಾ ಕುಳಿತಿದ್ದಾಗ ರಾಮು, ಶಿವರಾಜ್‌ ಅವರು ಜಗಳ ಬಿಟ್ಟು ಇಬ್ಬರು ಮಾತನಾಡಿಕೊಂಡಿರಿ ಎಂದು ಸಲಹೆ ನೀಡಿದ್ದಾರೆ.

ಅದಕ್ಕೆ ಸತೀಶ್‌, ಅದರ ಬಗ್ಗೆ ಈಗ ಮಾತನಾಡುವುದು ಬೇಡ ಸುಮನಿರಿ ಎಂದಿದ್ದಾರೆ. ಅಷ್ಟಕ್ಕೆ ಆಕೋಶಗೊಂಡ ರಾಮಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಎದುರಿಗೆ ಇದ್ದ ಮದ್ಯದ ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ. ಗಾಜಿನ ಚೂರು ಮುಖಕ್ಕೆ ಬಿದ್ದು ಏಟಾಗಿದೆ. ಜೊತೆಗಿದ್ದವರೂ ಜಗಳ ಬಿಡಿಸಿ ಇಬ್ಬರನ್ನೂ ಅಲ್ಲಿಂದ ಕಳುಹಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.

RELATED ARTICLES

Latest News