ಮಾಗಡಿ, ಮೇ 17- ಪಟ್ಟಣದ ಸೋಮೇಶ್ವರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮದ್ಯವ್ಯಸನಿ ಗಿರೀಶ್ ಎಂಬಾತ ತನ್ನ ಇಬ್ಬರು ಮಕ್ಕಳಿಗೆ ದೈಹಿಕವಾಗಿ ಮನಬಂದಂತೆ ಹೊಡೆದು, ಬೆಂಕಿಯಲ್ಲಿ ಕಾಯಿಸಿರುವ ಕಬ್ಬಿಣದ ರಾಡಿನಿಂದ ಸುಟ್ಟು ಬಿಕ್ಷೆ ಬೇಡಲು ಕಳುಹಿಸುವುದು, ಬಿಕ್ಷೆಬೇಡಿ ಬಂದ ಹಣದಲ್ಲಿ ಮದ್ಯಪಾನ ಮಾಡಿ ಮಕ್ಕಳಿಗೆ ಚಿತ್ರ ಹಿಂಸೆ ನೀಡುತ್ತಿದ್ದ ಅಮಾನವೀಯ ಘಟನೆ ಅಂಗನವಾಡಿ ಕಾರ್ಯಕರ್ತೆ ಮೀನಾ ಅವರಿಂದ ಬೆಳಕಿಗೆ ಬಂದಿದೆ.
ಅಮೂಲ್ಯ (10), ಹರೀಶ್ (7) ತಂದೆಯಿಂದ ಚಿತ್ರಹಿಂಸೆ ಅನುಭವಿಸಿದ್ದ ಮಕ್ಕಳು. ಮದ್ಯವಸನಿ ಗಿರೀಶ್‌ನ ತಾಯಿ, ಮೊಮಕ್ಕಳ ಸಂಕಟವನ್ನು ಕಂಡು ನೆರೆಹೊರೆಯವರಿಂದ ಬೇಡಿ ಬಂದ ಆಹಾರವನ್ನು ನೀಡುತ್ತಿದ್ದರು.
ಎರಡು ದಿನಗಳ ಹಿಂದೆ ಕುಡುಕ ಗಿರೀಶ್ ತನ್ನ ಮಗಳು ಅಮೂಲ್ಯ ಕೈಮೇಲೆ ಸುಟ್ಟು, ಬೆನ್ನಿನ ಮೇಲೆ ಬೊಬ್ಬೆ ಬರುವಂತೆ ಕಾಯಿಸಿದ್ದ ಕಬ್ಬಿಣದ ರಾಡಿನಿಂದ ಸುಟ್ಟಿದ್ದಾನೆ. ಮಕ್ಕಳ ಅಕ್ರಂದನವನ್ನು ಗಮನಿಸಿದ ನೆರೆಹೊರೆಯವರು ಅಂಗನವಾಡಿ ಕಾರ್ಯಕರ್ತೆಯ ಮೂಲಕ ಮಕ್ಕಳ ಸಹಾಯವಾಣಿಗೆ ತಿಳಿಸಿದ್ದಾರೆ.
ಸಿಡಿಪಿಒ ಸುರೇಂದ್ರ ತಂದೆಯಿಂದಲೇ ಚಿತ್ರಹಿಂಸೆ ಅನುಭವಿಸುತ್ತಿದ್ದ ಮಕ್ಕಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದು ತಂದು ಚಿಕಿತ್ಸೆ ಕೊಡಿಸಿ, ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೆ ಸೇರಿಸಿದ್ದಾರೆ. ಚೈಲ್‌್ಡ ಹೆಲ್ಪಲೈನ್ ಕೇಂದ್ರದ ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಮೀನಾ ಮಕ್ಕಳನ್ನು ಬಾಲಮಂದಿರಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.