Thursday, November 14, 2024
Homeರಾಜ್ಯಸಿಎಂ ಆಪ್ತರಿಗೆ ಇ.ಡಿ. ಗ್ರಿಲ್

ಸಿಎಂ ಆಪ್ತರಿಗೆ ಇ.ಡಿ. ಗ್ರಿಲ್

ED Grill in Muda Scam

ಬೆಂಗಳೂರು,ನ.13- ಮುಡಾ ಪ್ರಕರಣದ ವಿಚಾರಣೆಯನ್ನು ಹಂತಹಂತವಾಗಿ ತೀವ್ರಗೊಳಿಸುತ್ತಿರುವ ಜಾರಿ ನಿರ್ದೇಶನಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮತ್ತು ಕಾಂಗ್ರೆಸ್ನ ಸಂಸದನನ್ನು ವಿಚಾರಣೆ ನಡೆಸಿದೆ.

ಮುಡಾ ಪ್ರಕರಣದಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಅವರ ದೂರು ಆಧರಿಸಿ ವಿಚಾರಣೆ ಆರಂಭಿಸಿರುವ ಇ.ಡಿ. ಅಧಿಕಾರಿಗಳು ಸಿ.ಟಿ.ಕುಮಾರ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ರಾಯಚೂರಿನ ಕಾಂಗ್ರೆಸ್ ಸಂಸದ ಕುಮಾರ ನಾಯ್ಕ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಕುಮಾರ್ ಪಾರ್ವತಿ ಅವರ ಪರವಾಗಿ ದಾಖಲೆಗಳಲ್ಲಿ ಸಹಿ ಮಾಡಿದ್ದಾರೆ ಎಂಬ ಆರೋಪವು ಕೇಳಿಬಂದಿದೆ. ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಂಬಂಧಪಟ್ಟಂತ ಎಲ್ಲಾ ವಹಿವಾಟು ಹಾಗೂ ವ್ಯವಹಾರಗಳನ್ನು ಸಿ.ಟಿ.ಕುಮಾರ್ ಹಾಗೂ ಎಸ್.ಜಿ.ದಿನೇಶ್ಕುಮಾರ್ ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ನೋಟೀಸ್ ನೀಡಿ ಕರೆಸಿಕೊಂಡ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ 13 ನಿವೇಶನಗಳಿಗೆ ಮನವಿ ಸಲ್ಲಿಸಿತ್ತು. ಆದರೆ 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಆರೋಪವೂ ಇದೆ. ಬಹುತೇಕ ಮನವಿ ಪತ್ರಗಳು ಹಾಗೂ ದಸ್ತಾವೇಜುಗಳಲ್ಲಿ ಗಿರೀಶ್ಕುಮಾರ್ ಅವರೇ ಸಹಿ ಮಾಡುತ್ತಿದ್ದರು. ಕೆಲ ಸಂದರ್ಭದಲ್ಲಿ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರ ಗಮನಕ್ಕೆ ಹೋಗುತ್ತಿರಲಿಲ್ಲ ಎಂದು ಹೇಳಲಾಗಿದೆ.

ಇತ್ತ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಡಾ ಹಗರಣದಲ್ಲಿ ಒಬ್ಬರ ನಂತರ ಒಬ್ಬರನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ. ಈ ಮೊದಲು ಮುಡಾ ಕಚೇರಿ ಹಾಗೂ ಕೆಸರೆ ಗ್ರಾಮದ ಜಮೀನಿನ ಮಾಲೀಕ ದೇವರಾಜಯ್ಯ ಅವರ ಮನೆಯ ಮೇಲೆ ದಾಳಿ ನಡೆಸಿ ಕೆಲ ದಾಖಲೆಗಳನ್ನು ಪರಿಶೀಲಿಸಿತ್ತು. ಜೊತೆಗೆ ಹಲವು ಮಂದಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

ಕುಮಾರ ನಾಯ್ಕ್ ಅವರು ಇಂದು ಬೆಳಿಗ್ಗೆ 11 ಗಂಟೆಗೆ ಇ.ಡಿ. ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದರು. ನಿವೇಶನ ಮಂಜೂರಾತಿಗೆ ಸಂಬಂಧಪಟ್ಟಂತೆ ಇ.ಡಿ. ಅಧಿಕಾರಿಗಳು ಕುಮಾರ ನಾಯ್ಕ್ ಅವರನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.ಮುಂದುವರೆದ ವಿಚಾರಣೆಯಲ್ಲಿ ಸಿದ್ದರಾಮಯ್ಯನವರ ಆಪ್ತನನ್ನು ಡ್ರಿಲ್ಗೆ ಒಳಪಡಿಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಇ.ಡಿ. ತನಿಖೆಯ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅದರ ನಡುವೆಯೂ ವಿಚಾರಣೆ ಮುಂದುವರೆದಿರುವುದು ರಾಜಕೀಯವಾಗಿ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿದೆ. ಉಪಚುನಾವಣೆ ಮುಗಿದ ಬೆನ್ನಲ್ಲೇ ವಿಚಾರಣೆಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ.

RELATED ARTICLES

Latest News