ಬೆಂಗಳೂರು,ಮಾ.11- ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಗಂಭೀರ ಚರ್ಚೆಗೆ ಎಡೆಮಾಡಿಕೊಟ್ಟಿತು.ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಮಾನಪ್ಪ ಡಿ.ವಜ್ಜಲ್ ಅವರ ಪ್ರಶ್ನೆಗೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ರಾಜ್ಯದಲ್ಲಿ ಕಳೆದ 20 ವರ್ಷಗಳಲ್ಲಿ 556 ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಗುರುತಿಸಲಾಗಿದೆ. ಅಕ್ರಮವಾಗಿ ಕೆಲಸ ಮಾಡಿಕೊಂಡಿರುವ ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲು ಕ್ರಮ ಕೈಗೊಂಡಿದೆ ಎಂದರು.
ಬೆಂಗಳೂರು ನಗರ-223, ಕೆಜಿಎಫ್-7, ಮಂಗಳೂರು ನಗರ-41, ರಾಮನಗರ-11, ಧಾರವಾಡ-2, ವಿಜಯಪುರ-33, ದ.ಕನ್ನಡ-15, ಮೈಸೂರು-27, ಉತ್ತರಕನ್ನಡ, ರಾಯಚೂರು-ತಲಾ ಒಬ್ಬರು, ಉಡುಪಿ-10, ಶಿವಮೊಗ್ಗ-12, ಹಾಸನ-3, ಚಿತ್ರದುರ್ಗ-10, ಬೆಂಗಳೂರು ಜಿಲ್ಲೆ-60 ಅಕ್ರಮವಾಗಿ ವಿದೇಶೀಯರು ನೆಲೆಸಿರುವುದನ್ನು ಗುರುತಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಅಕ್ರಮವಾಗಿ ನೆಲೆಸಿರುವ ವಿದೇಶೀಯರನ್ನು ಪತ್ತೆ ಹಚ್ಚಲು ಪೊಲೀಸ್ ಠಾಣಾ ಮಟ್ಟದಲ್ಲಿ ಗುಪ್ತಚರ ಸಿಬ್ಬಂದಿ ಹಾಗೂ ಕ್ರೈ ಸಿಬ್ಬಂದಿಗಳು ವಿದೇಶಿಯರ ಚಲನವಲನಗಳ ಮೇಲೆ ನಿಗಾ ವಹಿಸುವಂತೆ ಸೂಕ್ತ ತಿಳಿವಳಿಕೆ ನೀಡಲಾಗಿದೆ. ಚಿಂದಿ ಆಯುವ ಕೆಲಸ ಮಾಡುವ ವ್ಯಕ್ತಿಗಳ ಮೇಲೆ ಹಾಗೂ ಅಂಥವರು ನೆಲೆಸಿರುವ ಸ್ಥಳಗಳ ಬಳಿ ಹೆಚ್ಚಿನ ನಿಗಾ ವಹಿಸುವಂತೆ ಎಲ್ಲಾ ವಿಭಾಗೀಯ ಉಪ ಆಯುಕ್ತರಿಗೆ ಸೂಕ್ತ ತಿಳಿವಳಿಕೆ ನೀಡಲಾಗಿದೆ.
ವಿದೇಶಿ ಪ್ರಜೆಗಳು ವಾಸಿಸುವ ಸ್ಥಳಗಳ ಬಳಿ ಸತತ ನಿಗಾಗ ವಹಿಸಲು ಮೀಸಲು ಪಡೆ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿ ಕ್ರಮ ಜರುಗಿಸಲು ಎಲ್ಲಾ ವಿಭಾಗೀಯ ಉಪ ಆಯುಕ್ತರಿಗೆ ಸೂಚಿಸಲಾಗಿದೆ. ವಿದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿರುವುದು ಪತ್ತೆಯಾದಲ್ಲಿ ಆರೋಪಿಗಳನ್ನು ಅವರ ದೇಶದ ವಿದೇಶಿ ಮಂತ್ರಾಲಯದ ಮೂಲಕ ಆಯಾ ದೇಶಗಳ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ನೀಡಲಾಗುತ್ತದೆ.
ಅಂಥವರುಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದ ನಂತರ ಸಂಬಂಧಪಟ್ಟ ಇಲಾಖೆಯಿಂದ ನಿರ್ಗಮನ ಪರವಾನಗಿಯನ್ನು ಪಡೆಯುವವರಿಗೂ ಅಂತಹ ಆರೋಪಿಗಳನ್ನು ಕಾರಿನರ್ ಡಿಟನ್ಷನ್ (ಎಫ್‌ಡಿಸಿ) ಇರಿಸಲಾಗುತ್ತಿದೆ.
ವಿದೇಶಿ ಪ್ರಜೆಯ ಗಡಿಪಾರು ನಿಯವನ್ನು ಜರುಗಿಸಿ ಅವರ ದೇಶಗಳಿಗೆ ವಾಪಸ್ ಕಳುಹಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 193 ಅಕ್ರಮ ವಿದೇಶಿ ವಲಸಿಗರನ್ನು ಗಡಿಡೀಪಾರು ಮಾಡಲಾಗಿದೆ. 212 ವಿದೇಶೀಯರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 121 ವಿದೇಶೀಯರು ನ್ಯಾಯಾಂಗ ಬಂಧನದಲ್ಲಿದ್ದಾರೆ. 4 ವಿದೇಶೀಯರು ಜಾಮೀನಿನ ಮೇಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳಿಂದ ಬೆಂಗಳೂರಿನಲ್ಲಿ 323 ಸೇರಿದಂತೆ ಅಕ್ರಮ ಎಸಗಿರುವ ಒಟ್ಟು 141 ಪ್ರಕರಣಗಳು ದಾಖಲಾಗಿದ್ದು, 530 ಮಂದಿ ಆರೋಪಿತರಾಗಿದ್ದಾರೆ.
ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ಮಾದಕ ದ್ರವ್ಯ, ಗಾಂಜಾ, ಅಫೀಮು, ಚರಸ್, ಎರಸ್ಸ್‌ಮಸ್‌ಗಳ ಕಳ್ಳತನ ಸಾಗಾಣಿಕೆ ಕೃತ್ಯಗಳನ್ನು ನಡೆಸಿದ್ದು, 3 ಪ್ರಕರಣಗಳು ದಾಖಲಾಗಿದ್ದು, 6 ಆರೋಪಿಗಳಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಉತ್ತರದಿಂದ ಅಸಮಾಧಾನಗೊಂಡ ಮಾನಪ್ಪ ವಜ್ಜಲ್, ಬಿಜಾಪುರ ಜಿಲ್ಲೆಯಲ್ಲಿ 15 ಸಾವಿರ ವಿದೇಶೀಯರು ನೆಲೆಸಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದನ್ನು ನೋಡಿದರೆ ಲಕ್ಷಾಂತರ ಜನ ರಾಜ್ಯದಲ್ಲಿರಬಹುದು. ಅಂಥವರಿಗೆ ಆಧಾರ್‌ಕಾರ್ಡ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ನೀಡಲಾಗಿದೆ. ಗಾಂಜಾ, ಆಫೀಮು ಸೇರಿದಂತೆ ಮಾದಕದ್ರವ್ಯಗಳನ್ನು ನೀಡಿ ಯುವಕರನ್ನು ಹಾದಿ ತಪ್ಪಿತಸುತ್ತಿದ್ದಾರೆ.
ಇಂತಹವರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ಮಾಡಿಕೊಟ್ಟವರು ಯಾರು, ಅಂತವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.ಇದಕ್ಕೆ ದನಿಗೂಡಿಸಿದ ಬಿಜೆಪಿ ಶಾಸಕ ಸುನೀಲ್‌ಕುಮಾರ್, ಅಕ್ರಮ ವಲಸಿಗರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ. ಬಾಂಗ್ಲಾದವರು ಸಾಕಷ್ಟು ಅಕ್ರಮವಾಗಿ ನೆಲೆಸಿದ್ದಾರೆ. ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಕಾಫಿ ಎಸ್ಟೇಟ್‌ಗಳು, ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಮಂದಿ ರಾಜ್ಯದಲ್ಲಿ ನೆಲೆಸಿರುವ ಸಾಧ್ಯತೆಯಿದೆ. ಇದು ಗಂಭೀರವಾದ ವಿಚಾರವಾಗಿದ್ದು ನಿಮ ಉತ್ತರವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ಅಕ್ರಮ ವಲಸಿಗರಿಂದ ದೊಡ್ಡ ಸಮಸ್ಯೆಯಾಗಿದೆ. ಬೆಂಗಳೂರಿನಲ್ಲೂ ಸಾಕಷ್ಟು ತೊಂದರೆಯಾಗಿದೆ. ಆಫ್ರಿಕಾ ಮೂಲದವರು ಪೊಲೀಸರ ಮೇಲೆ ಹಲ್ಲೆ ಮಾಡುತ್ತಾರೆ. ಬಾಂಗ್ಲಾದವರ ದೊಡ್ಡ ಜಾಲವೇ ಇದೆ. ಇದು ಗಂಭೀರವಾದ ವಿಚಾರವಾಗಿದ್ದು, ಅರ್ಧ ಗಂಟೆ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.ಆಗ ಸಭಾಧ್ಯಕ್ಷ ಯು.ಟಿ.ಖಾದರ್ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು.