Friday, November 22, 2024
Homeರಾಜ್ಯವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣಗಳಲ್ಲಿ ಸಿಎಂ ಪಾತ್ರದ ಕುರಿತು ಸಮಗ್ರ ತನಿಖೆಯಾಗಬೇಕು : ಜೋಷಿ

ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣಗಳಲ್ಲಿ ಸಿಎಂ ಪಾತ್ರದ ಕುರಿತು ಸಮಗ್ರ ತನಿಖೆಯಾಗಬೇಕು : ಜೋಷಿ

ಬೆಂಗಳೂರು, ಜು.13- ರಾಜ್ಯದಲ್ಲಿ ವಾಲ್ಮೀಕಿ ಹಗರಣ, ಮುಡಾ ಹಗರಣಗಳಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಅವರಿಗೂ ಎಸ್‌‍ಐಟಿ ನೋಟಿಸ್‌‍ ನೀಡಿ ತನಿಖೆ ನಡೆಸಬೇಕು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ಆಗ್ರಹಿಸಿದರು.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಲೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇರ ಪಾತ್ರ ಇದ್ದೇ ಇದೆ ಎಂದು ಗಂಭೀರ ಆರೋಪ ಮಾಡಿದರು.

ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ಬಾರದೆ 187 ಕೋಟಿ ರೂ.ನಷ್ಟು ದೊಡ್ಡಮೊತ್ತದ ಹಣ ವಾಲೀಕಿ ಅಭಿವೃದ್ಧಿ ನಿಗಮದಿಂದ ವರ್ಗಾವಣೆಯಾಗಲು ಸಾಧ್ಯವೇ ಇಲ್ಲ. ಈ ಭ್ರಷ್ಟಾಚಾರದ ಬಗ್ಗೆ ಸಿಎಂ ಅವರಿಗೂ ಎಸ್‌‍ಐಟಿ ನೋಟಿಸ್‌‍ ನೀಡಿ ತನಿಖೆ ನಡೆಸಬೇಕು. ಇನ್ನು ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರ ಪಾತ್ರವಿದೆ. ಅವರ ಹಸ್ತಕ್ಷೇಪವಿಲ್ಲದೆ ನಡೆಯಲು ಸಾಧ್ಯವಿಲ್ಲ. ಈ ಬಗ್ಗೆಯೂ ಕೂಡ ಅವರ ವಿರುದ್ಧ ನೇರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಮೈಸೂರು ಮುಖ್ಯಮಂತ್ರಿಯವರ ತವರು ಜಿಲ್ಲೆ. ಅವರಿಗೆ ಗೊತ್ತಿದ್ದೇ ಈ ಭ್ರಷ್ಟಾಚಾರ ನಡೆದಿದೆ. ಅವರು ಈ ಹಗರಣದ ನೈತಿಕ ಹೊಣೆ ಹೊರಬೇಕು. ಈ ಎರಡು ಬಹುದೊಡ್ಡ ಹಗರಣಗಳ ಬಗ್ಗೆ ಸಿಎಂ ವಿರುದ್ಧ ತನಿಖೆ ನಡೆಸಬೇಕು ಎಂದು ಜೋಷಿ ಆಗ್ರಹಿಸಿದರು.

RELATED ARTICLES

Latest News