Friday, November 22, 2024
Homeರಾಜ್ಯಹಾಲಿನ ಪ್ರೋತ್ಸಾಹ ಧನ ಶೀಘ್ರ ಬಿಡುಗಡೆ : ಸಚಿವ ಕೆ.ವೆಂಕಟೇಶ್

ಹಾಲಿನ ಪ್ರೋತ್ಸಾಹ ಧನ ಶೀಘ್ರ ಬಿಡುಗಡೆ : ಸಚಿವ ಕೆ.ವೆಂಕಟೇಶ್

ಬೆಂಗಳೂರು,ಜು.16- ಬಾಕಿ ಇರುವ ಹಾಲಿನ ಪ್ರೋತ್ಸಾಹಧನವನ್ನು ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಪಶು ಸಂಗೋಪನಾ ಖಾತೆ ಸಚಿವ ಕೆ.ವೆಂಕಟೇಶ್ ಆಶ್ವಾಸನೆ ನೀಡಿದರು.

ವಿಧಾನಪರಿಷತ್ನಲ್ಲಿ ಸದಸ್ಯ ಹನುಮಂತ ನಿರಾಣಿಯವರು ಬಾಗಲಕೋಟೆ , ವಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸುಮಾರು 31 ಕೋಟಿ ಹಾಲಿನ ಪ್ರೋತ್ಸಾಹ ಧನವನ್ನು ನೀಡಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಗಮನಸೆಳೆದರು.

ಈ ವೇಳೆ ಸಚಿವ ರಾಜಣ್ಣ ಉತ್ತರಿಸಲು ಮುಂದಾದಾಗ ಮಧ್ಯಪ್ರವೇಶಿಸಿದ ವೆಂಕಟೇಶ್ ಅವರು, ಬಾಕಿ ಇರುವ ಹಾಲಿನ ಪ್ರೋತ್ಸಾಹಧನ ನಮ್ಮ ಸರ್ಕಾರದ ಅವಧಿಯಲ್ಲಿ ಬಾಕಿ ಉಳಿಸಿಕೊಳ್ಳಲಾಗಿತ್ತು. ಸುಮಾರು 700 ಕೋಟಿ ಬಾಕಿ ಇತ್ತು. ನಮ್ಮ ಸರ್ಕಾರ 200 ಕೋಟಿ ಸಹಾಯಧನವನ್ನು ಬಿಡುಗಡೆ ಮಾಡಿದೆ ಎಂದರು.

ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯರು, ಇಲ್ಲಿ ಯಾವ ಪಕ್ಷದ ಸರ್ಕಾರ ಇದೆ ಎಂಬುದು ಮುಖ್ಯವಲ್ಲ. ಮೊದಲು ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಿ. ಹಿಂದೆ ನಿಮ ಸರ್ಕಾರದ ಅವಧಿಯಲ್ಲಿ ಬಾಕಿ ಇರಲಿಲ್ಲವೇ? ರೈತರಿಗೇಕೆ ಇಂತಹ ಪಕ್ಷಪಾತ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಆಗ ಸಚಿವ ರಾಜಣ್ಣ ಇದು ನಿರಂತರವಾದ ಪ್ರಕ್ರಿಯೆ. ಎಲ್ಲಾ ಸರ್ಕಾರಗಳು ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಬೇಕು. ಇದರಲ್ಲಿ ಯಾವ ಸರ್ಕಾರ ಎಂಬುದು ಮುಖ್ಯವಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಬಾಕಿ ಇದ್ದ ಕಾರಣ ವಿಳಂಬವಾಗಿದೆ. ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಆದಷ್ಟು ಬೇಗ ಕ್ರಮ:
ಕಾಂಗ್ರೆಸ್ ಸದಸ್ಯ ಎಸ್.ರವಿ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಹಕಾರ ಸಚಿವ ರಾಜಣ್ಣ, ಸಾಲ ಮನ್ನಾ ಯೋಜನೆಯಡಿ ಸಹಕಾರಿ ಬ್ಯಾಂಕ್ಗಳಿಗೆ ಆದಷ್ಟು ಬೇಗ ಹಣವನ್ನು ಪಾವತಿ ಮಾಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 50 ಸಾವಿರ ರೂ.ವರೆಗೆ ರೈತರ ಸಾಲ ಮನ್ನ ಮಾಡಲಾಗಿತ್ತು. ಇದರಿಂದ ಸಹಕಾರಿ ಬ್ಯಾಂಕ್ಗಳಿಗೆ ಹಣವನ್ನು ಕೆಲವು ಗೊಂದಲಗಳಿಂದ ಪಾವತಿಯಾಗಿಲ್ಲ. ಆದಷ್ಟು ಶೀಘ್ರ ಹಣ ಪಾವತಿಸುವುದಾಗಿ ತಿಳಿಸಿದರು.

RELATED ARTICLES

Latest News