ಬೆಂಗಳೂರು, ಡಿ.26- ಪಂಚ ಗ್ಯಾರಂಟಿ ಯೋಜನೆಯಿಂದ ಜನರ ಹಣ ಉಳಿತಾಯವಾಗಿದೆ. ಆರ್ಥಿಕ ಚಟುವಟಿಕೆಗಳು ಸುಧಾರಿಸಿವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು. ವಿಧಾನಸೌಧ ಮುಂಭಾಗ ಇಂದು ಬಿಎಂಟಿಸಿ ವತಿಯಿಂದ 100 ಎಲೆಕ್ಟ್ರಿಕ್ ಬಸ್‍ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರು ನಗರದಲ್ಲಿ ಜನರ ಪ್ರಯಾಣಕ್ಕೆ ಅನೂಕೂಲ ಮಾಡಿಕೊಳ್ಳಲು ಹೊಸದಾಗಿ ನೂರು ಎಲೆಕ್ಟ್ರಾನಿಕ್ ಬಸ್ ಗಳ ಸಂಚಾರ ಆರಂಭಿಸಲಾಗುತ್ತಿದೆ. ಮುಂದಿನ ವರ್ಷದ ಏಪ್ರಿಲ್ ವೇಳೆಗೆ 1600 ಬಸ್ ಗಳು ಸಂಚರಿಸಲಿವೆ, ಈ ಎಲ್ಲ ಬಸ್‍ಗಳು ಹುಬ್ಬಳಿಯ ಕೈಗಾರಿಕಾ ಘಟಕದಲ್ಲಿ ತಯಾರುಗೊಳ್ಳುತ್ತವೆ ಎಂದರು.
ಪ್ರತಿದಿನ ಬೆಂಗಳೂರಿನಲ್ಲಿ ನಲವತ್ತು ಲಕ್ಷಕ್ಕೂ ಹೆಚ್ಚು ಮಂದಿ ಬಿಎಂಟಿಸಿ ಬಸ್‍ಗಳಲ್ಲಿ ಸಂಚರಿಸುತ್ತಿದ್ದಾರೆ. ನಮ್ಮ ಸರ್ಕಾರ ಜಾರಿಗೆ ತಂದ ಶಕ್ತಿ ಯೋಜನೆಯಲ್ಲಿ ಯಾವ ಜಾತಿ, ಧರ್ಮ ಬೇಧವಿಲ್ಲದೆ ಜನರು ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಶಕ್ತಿ ಯೋಜನೆಯನ್ನು ವಿರೋಧ ಪಕ್ಷಗಳು ಟೀಕೆ ಮಾಡುತ್ತಾರೆ, ಟೀಕೆ ಮಾಡುವುದು ಸುಲಭ, ಅದಕ್ಕೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ನೀಡಬೇಕು ಎಂದು ಜನತೆಗೆ ಕರೆ ನೀಡಿದರು.
ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳಿಗೆ ಲಾಭವಾಗಿದೆ, ಈ ಸಂಸ್ಥೆಗಳ ಉದ್ದೇಶ ಲಾಭ ಮಾಡುವುದಲ್ಲ, ಹಾಗೆಂದು ನಷ್ಟವಾಗಬಾರದು ಎಂದರು. ಶಕ್ತಿ ಯೋಜನೆಯಿಂದ ಪ್ರತಿ ತಿಂಗಳು ನಾಲ್ಕರಿಂದ ಐದು ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ. ರಾಜ್ಯದ ಏಳುಕೋಟಿ ಜನರಲ್ಲಿ ನಾಲ್ಕು ಕೋಟಿ, ಮೂವತ್ತು ಲಕ್ಷ ಜನ ಪಂಚಖಾತ್ರಿ ಸೌಲಭ್ಯ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದವರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಸಮಾಜದಲ್ಲಿ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 148 ಬಸ್ ಗಳು ಸಂಚರಿಸುತ್ತಿವೆ. ಬೆಂಗಳೂರಿನ ಎಲ್ಲಾ ಭಾಗಕ್ಕೂ ಬಸ್ ಗಳನ್ನು ಸಂಚರಿಸುವುದು ನಮ್ಮ ಆದ್ಯತೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಎಲೆಕ್ಟ್ರಿಕ್ ನೀತಿ ರೂಪಿಸಿದ ಮೊದಲ ರಾಜ್ಯ ನಮ್ಮದಾಗಿದೆ, ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ದೇಶದಲ್ಲೆ ಜಾರಿಯಾಗಬೇಕು ಎಂದರು. ದುಡ್ಡು ಬ್ಲಡ್ ಸಂಚರಿಸಬೇಕು, ಹಣ ಒಂದು ಕಡೆ ಇದ್ದರೆ ಐಟಿ, ಇಡಿ, ಕಳ್ಳರು ಕಣ್ಣು ಹಾಕುತ್ತಾರೆ, ರಕ್ತವೂ ಹರಿಯದಿದ್ದರೆ ಆರೋಗ್ಯ ಕೆಡುತ್ತದೆ ಎಂದರು. ಕಾಂಗ್ರೆಸ್ ಗ್ಯಾರಂಟಿ ದೇಶಕ್ಕೆ ಮಾದರಿಯಾಗಿವೆ. ನಮ್ಮ ಗ್ಯಾರಂಟಿ ಟೀಕೆ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ ಈಗ ಮೋದಿ ಗ್ಯಾರಂಟಿ ಆರಂಭಿಸಿದ್ದಾರೆ. ನಮ್ಮನ್ನು ಅನುಸರಿಸಿದ್ದಕ್ಕೆ ಪ್ರಧಾನಿಯವರಿಗೆ ಅಭಿನಂದನೆ ಎಂದರು.
ರಾಜ್ಯ ಬಿಜೆಪಿಯಲ್ಲಿ ಮತ್ತೆ ಪಾರುಪತ್ಯ ಸಾಧಿಸಿದ ಬಿಎಸ್‍ವೈ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಜಿಜಿಸಿ ಮಾದರಿಯಲ್ಲಿ ಪ್ರತಿ ಕಿಲೋಮಿಟರ್ ಗೆ 41 ದರದಲ್ಲಿ ದಿನಕ್ಕೆ ಗರಿಷ್ಠ 200 ಕಿಲೋ ಮೀಟರ್ ದೂರ ಸಂಚಾರಕ್ಕೆ ಬಸ್ ಗಳನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಮಾರ್ಚ್ ಕೊನೆಗೆ 925 ಬಸ್‍ಗಳು ಬರಲಿವೆ. ಈಗಾಗಲೇ ಹನ್ನೆರಡು ಮೀಟರ್ ನ ಮೂನ್ನೂರು ಬಸ್ ಓಡುತ್ತಿವೆ. ಮಾರ್ಚ್, ಏಪ್ರಿಲ್ ವೇಳೆಗೆ ವಿವಿಧ ಮಾದರಿಯ ಒಟ್ಟು 1751 ಬಸ್ ಗಳು ಸಾರಿಗೆ ಸಂಸ್ಥೆಗೆ ಸೇರ್ಪಡೆಯಾಗಲಿವೆ. ಎಲೆಕ್ಟ್ರಿಕಲ್ ಬಸ್‍ಗಳು ನವಯುಗದ ಸಾರಿಗೆ ಮಾಧ್ಯಮಗಳಾಗಲಿವೆ, ಹೈಡ್ರೋ ಬಸ್‍ಗಳ ಇಂಜಿನ್ ತಯಾರಾಗುತ್ತಿದೆ. ಮುಂದಿನ ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಡಿಸೇಲ್ ಬಸ್‍ಗಳು ಇರುವುದಿಲ್ಲ. ಸದ್ಯಕ್ಕೆ 800 ಡಿಸೇಲ್ ಬಸ್ ಗಳನ್ನು ಖರೀದಿಸಲಾಗುತ್ತಿದೆ ಎಂದರು.
ಜನಸಂಖ್ಯೆಗೆ ಅನುಗುಣವಾಗಿ ಹತ್ತು ಸಾವಿರ ಬಸ್‍ಗಳ ಅಗತ್ಯವಿದೆ. ಪ್ರತಿ ದಿನ ಬಿಎಂಟಿಸಿಯಲ್ಲಿ ನಲವತ್ತು ಲಕ್ಷ ಜನ ಸಂಚರಿಸುತ್ತಾರೆ, ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿರುವ ಮೆಟ್ರೋದಲ್ಲಿ ಆರು ಲಕ್ಷ ಜನ ಮಾತ್ರ ಸಂಚರಿಸುತ್ತಾರೆ ಎಂದರು. ಈವರೆಗೆ ಶಕ್ತಿ ಯೋಜನೆಯಡಿ 120.80 ಕೋಟಿ ಜನ ಪ್ರಯಾಣಿಸಿದ್ದು, 2860 ಕೋಟಿ ರೂಪಾಯಿ ಆಗಿದೆ. ಜೊತೆಗೆ ಒಂಬತ್ತು ಸಾವಿರ ಹುದ್ದೆಗಳ ನೇಮಕಾತಿಗೆ ಮುಖ್ಯಮಂತ್ರಿ ಅನುಮತಿ ನೀಡಿದ್ದಾರೆ, ಫೆಬ್ರವರಿ ಮಾರ್ಚ್ ವೇಳೆಗೆ ಸಾರಿಗೆ ಸೇವೆ ಉತ್ತಮಗೊಳ್ಳಲಿದೆ. ಕೋವಿಡ್ ಗೂ ಮೊದಲೆ ರದ್ದಾಗಿದ್ದ 3900 ಷ್ಯಡ್ಯೂಲ್ ಗಳನ್ನು ಪುನರ್ ಆರಂಭಿಸಲಾಗುವುದು ಎಂದರು.
ಯುಪಿಯಲ್ಲಿ ಹಸಿರು ಹೈಡ್ರೋಜನ್ ನೀತಿ ಜಾರಿಗೆ ಯೋಗಿ ಸೂಚನೆ
ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಪ್ರಿಯಾಂಕ್ ಖರ್ಗೆ, ಯುವಜನಸೇವೆ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ, ಉನ್ನತಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ವಿನಯ್ ಕುಲಕರ್ಣಿ, ಮಧುಮಾದೆಗೌಡ, ಯು.ಬಿ.ವೆಂಕಟೇಶ್, ಟಿ.ಎ.ಶರವಣ, ಗೋವಿಂದರಾಜು, ನಸೀರ್ ಅಹಮದ್, ಯೋಜನಾ ಆಯೋಗದ ಉಪಾಧ್ಯಕ್ಷ ರಾಜೀವ್ ಗೌಡ, ಟಾಟಾ ಸಂಸ್ಥೆ ಸಿಇಒ ಆಖೀಲ್ ಮುಖ್ಯೋಪಾದ್ಯಾಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.