ಬೆಂಗಳೂರು,ಸೆ.2- ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿರುವ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಲು ವಿದೇಶದಿಂದ ಸರ್ಕಾರೇತರ ಸಂಘಸಂಸ್ಥೆ(ಎನ್‌ಜಿಒ)ಗಳಿಗೆ ಹಣ ಬಂದಿದೆ ಎಂಬ ಶಂಕೆ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ) ರಂಗಪ್ರವೇಶ ಮಾಡಿದೆ.
ಕರ್ನಾಟಕ ಸೇರಿದಂತೆ ದೇಶದ ಕೆಲವು ಮುಂಚೂಣಿಯಲ್ಲಿರುವ ಎನ್‌ಜಿಒಗಳಿಗೆ ವಿದೇಶದಿಂದ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲು ಭಾರೀ ಪ್ರಮಾಣದ ಹಣ ಹರಿದುಬಂದಿದೆ ಎಂಬುದನ್ನು ಇ.ಡಿ ಪತ್ತೆ ಮಾಡಿದೆ.ಇದೀಗ ಮಾನವಹಕ್ಕುಗಳು, ಮಹಿಳಾಪರ ಹೋರಾಟ ನಡೆಸುವ ಸಂಘಸಂಸ್ಥೆಯವರು ಸೇರಿದಂತೆ ರಾಜ್ಯದ ಕೆಲವು ಎನ್‌ಜಿಒಗಳ ಹಣದ ವಹಿವಾಟು ನಡೆದಿರುವ ಕುರಿತು ಇಡಿ ನೋಟಿಸ್ ನೀಡಲು ಸಿದ್ದತೆ ನಡೆಸಿದೆ ಎಂದು ತಿಳಿದುಬಂದಿದೆ.
ಮೇಲ್ನೋಟಕ್ಕೆ ಧರ್ಮಸ್ಥಳದ ವಿರುದ್ಧ ಎನ್‌ಜಿಒಗಳಿಗೆ ಹಣ ಜಮೆಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಇದರ ಸತ್ಯಾಸತ್ಯತೆಯನ್ನು ಪತ್ತೆ ಮಾಡಲು ರಾಜ್ಯದ ನಾಲ್ಕಕ್ಕೂ ಹೆಚ್ಚು ಎನ್‌ಜಿಒಗಳಿಗೆ ನೋಟಿಸ್ ನೀಡಲು ಮುಂದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ(ಎಸ್‌ಬಿಐ), ಯೂನಿಯನ್ ಬ್ಯಾಂಕ್ ಆಫ್ ಇಂಡಿಯ(ಯುಬಿಐ), ಐಸಿಐಸಿಐ ಸೇರಿದಂತೆ ಕೆಲವು ಪ್ರತಿಷ್ಠಿತ ಬ್ಯಾಂಕ್‌ಗಳ ಖಾತೆಗಳಿಗೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮ) ಉಲ್ಲಂಘಿಸಿ ದೇಣಿಗೆ ರೂಪದಲ್ಲಿ ಹಣ ಪಡೆದಿರುವುದು ಕಂಡುಬಂದಿದೆ ಎನ್ನಲಾಗುತ್ತಿದೆ.
ಧರ್ಮಸ್ಥಳ ಪ್ರಕರಣ ಕುರಿತಂತೆ ಖಾಸಗಿ ಯೂಟ್ಯೂಬರ್ ಒಬ್ಬ ಅಲ್‌ಜಜೀರ ಹಾಗೂ ಬಿಬಿಸಿ ಉರ್ದು ಚಾನಲ್‌ಗೆ ದೊಡ್ಡ ಮಟ್ಟದಲ್ಲಿ ಹಣಕ್ಕೆ ಮಾರಾಟ ಮಾಡಿದ್ದ. ಈ ಎರಡೂ ಅಂತಾರಾಷ್ಟ್ರೀಯ ಚಾನಲ್‌ಗಳಲ್ಲಿ ಸುದ್ದಿಯಾಗಿದ್ದು, ಧರ್ಮಸ್ಥಳಕ್ಕೆ ಕಳಂಕ ಅಂಟಿಕೊಂಡಿತ್ತು. ಪ್ರಸ್ತುತ ವಿಶೇಷ ತನಿಖಾ ತಂಡ(ಎಸ್‌ಐಟಿ )ದ ವಶದಲ್ಲಿರುವ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯ ತನಿಖೆ ವೇಳೆ ಬಾಯ್ಬಿಟ್ಟಿರುವ ಮಾಹಿತಿಯಂತೆ ತನಗೆ ಯಾರೆಲ್ಲ ಹಣದ ಆಮಿಷವೊಡ್ಡಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾನೆ ಎಂದು ತಿಳಿದುಬಂದಿದೆ.
ಧರ್ಮಸ್ಥಳದ ಸುತ್ತಮುತ್ತ ಕಳೆದ ಹಲವಾರು ವರ್ಷಗಳಿಂದ ನೂರಾರು ಶವಗಳನ್ನು ಹೂತು ಹಾಕಿದ್ದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗಳೆಂದೇ ಬುರುಡೆ ಸಮೇತ ದೂರು ಕೊಟ್ಟಿದ್ದ. ದೂರು ಆಧರಿಸಿ ಧರ್ಮಸ್ಥಳದ ಸುತ್ತಮುತ್ತ ಹಲವು ದಿನಗಳಿಂದ ಉತ್ಖನನ ನಡೆಸಿದಾಗ ಯಾವುದೇ ಶವ ಪತ್ತೆಯಾಗಲಿಲ್ಲ. ಮೇಲ್ನೋಟಕ್ಕೆ ಇದು ಧಾರ್ಮಿಕ ಕ್ಷೇತ್ರದ ವಿರುದ್ಧ ನಡೆದಿರುವ ಷಡ್ಯಂತ್ರ ಎಂಬುದು ಕಂಡುಬಂದ ಹಿನ್ನೆಲೆಯಲ್ಲಿ ಎಸ್‌ಐಟಿ ಬಂಧಿಸಿತ್ತು.
ಬಂಧನದ ನಂತರ ಹಲವಾರು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿರುವುದರಿಂದ ಪ್ರಕರಣವನ್ನು ಬೇಧಿಸಲು ಇಡಿ ಅಖಾಡಕ್ಕಿಳಿದಿದೆ. ಫೆಮ ಕಾಯ್ದೆ ಉಲ್ಲಂಘಿಸಿ ದೇಣಿಗೆ ಪಡೆದಿರುವುದು ಕಂಡುಬಂದಲ್ಲಿ ಎನ್‌ಜಿಒಗಳಿಗೆ ಕಾನೂನಿನ ಸಂಕಷ್ಟ ಎದುರಾಗಲಿದೆ.ಅಲ್ಲದೆ ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಹೊರಟ್ಟಿದ್ದ ಕೆಲವರಿಗೆ ತನಿಖೆಯ ಬಿಸಿ ಎದುರಾಗುವುದು ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.