ನವದೆಹಲಿ,ಆ.7– ಕಳೆದ 6 ವರ್ಷಗಳಲ್ಲಿ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಮತ್ತು ರಾಜಕೀಯ ಮುಖಂಡರ ವಿರುದ್ಧ ಒಟ್ಟು 132 ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ದಾಖಲಾಗಿವೆ ಎಂದು ಸಂಸತ್ತಿನಲ್ಲಿ ಸರ್ಕಾರದ ಹೇಳಿಕೆ ತಿಳಿಸಿದೆ.
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ಒದಗಿಸಿದ್ದಾರೆ. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಜಾರಿ ಪ್ರಕರಣದ ಮಾಹಿತಿ ವರದಿಗಳನ್ನು (ಇಸಿಐರ್) ಅವರು ವಿವರಿಸಿದ್ದಾರೆ.
ಹಾಲಿ ಮತ್ತು ಮಾಜಿ ಸಂಸದರು, ಶಾಸಕರು, ಎಮ್‌ಎಲ್ಸಿಗಳು, ರಾಜಕೀಯ ಮುಖಂಡರು ಮತ್ತು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳ ವಿರುದ್ಧ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾದ ಜಾರಿ ಪ್ರಕರಣದ ಮಾಹಿತಿ ವರದಿಗಳ (ಇಸಿಐಆರ್) 2019ರ ಜನವರಿ 1 ರಿಂದ ಈ ವರ್ಷ ಜುಲೈ 31 ರವರೆಗಿನ ವಿವರವನ್ನು ಅವರು ಒದಗಿಸಿದ್ದಾರೆ.
ಸಚಿವರು ನೀಡಿರುವ ಉತ್ತರದ ಪ್ರಕಾರ, 2019ರಲ್ಲಿ 15, 2020ರಲ್ಲಿ 28, 2021ರಲ್ಲಿ 26, 2022ರಲ್ಲಿ 34, 2023ರಲ್ಲಿ 26 ಮತ್ತು 2024ರಲ್ಲಿ 3 (ಜುಲೈ 31 ರವರೆಗೆ) ಪ್ರಕರಣಗಳನ್ನು ದಾಖಲಿಸಲಾಗಿದೆ. ಇವುಗಳಲ್ಲಿ, ಮೂರು ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗಳು ಮುಕ್ತಾಯಗೊಂಡಿವೆ.
ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದ ಭಾಗವಾಗಿ ಜಾರಿ ನಿರ್ದೇಶನಾಲಯದ ಜಾರಿ ಪ್ರಕರಣದ ಮಾಹಿತಿ ವರದಿಗಳು, ವಿಚಾರಣೆಯಲ್ಲಿರುವ ಪ್ರಕರಣಗಳು ಮತ್ತು ಶಿಕ್ಷೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ.ಸರ್ಕಾರದ ದಾಖಲೆಯ ಪ್ರಕಾರ, ಈ ಪ್ರಕರಣಗಳಲ್ಲಿ ಕೇವಲ ಒಬ್ಬರಿಗೆ 2020ರಲ್ಲಿ ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ವರದಿಯಾಗಿದೆ.