ಬೆಂಗಳೂರು, ಸೆ.10- ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಶೈಲ್ ಅವರನ್ನು ಇಡಿ ಬಂಧಿಸುವ ಅಗತ್ಯ ಇರಲಿಲ್ಲ. ಕಾಂಗ್ರೆಸ್ಸಿಗರನ್ನು ಮಾತ್ರ ಆಯ್ದು ತೊಂದರೆ ಕೊಡುವ ಕೆಲಸಗಳಾಗುತ್ತಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ಷೇಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದರಿ ಶಾಸಕರ ವಿರುದ್ಧ 2010ರಿಂದಲೂ ಪ್ರಕರಣ ನಡೆಯುತ್ತಿದೆ. ರಾಜಕೀಯ ಕಾರಣಕ್ಕಾಗಿ ಈಗ ಬಂಧಿಸಲಾಗಿದೆ. ಕಾಂಗ್ರೆಸಿಗರ ವಿರುದ್ಧ ದುರುದ್ದೇಶ ಪೂರ್ವಕವಾಗಿ ಇಂತಹ ಕಾರ್ಯಚರಣೆಗಳಾಗುತ್ತಿವೆ ಎಂದು ಆರೋಪಿಸಿದರು.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವ ವೇಳೆ ನಡೆದಿರುವ ಗಲಾಟೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪ್ರತಿಕ್ರಿಯಿಸಿರುವುದನ್ನು ನೋಡಿದ್ದೇನೆ. ನಾನು ಊರಿನಲ್ಲಿ ಇರಲಿಲ್ಲ, ಹೆಚ್ಚಿನ ಮಾಹಿತಿ ತಿಳಿದುಕೊಂಡ ಬಳಿಕ ಹೇಳಿಕೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಮದ್ದೂರಿಗೆ ಭೇಟಿ ನೀಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿಯವರು, ಅವರಿಗೆ ರಾಜಕೀಯ ಮಾಡುವುದು ಬಿಟ್ಟು ಬೇರೆ ಕೆಲಸ ಇಲ್ಲ. ಜನರನ್ನು ವಿಭಜಿಸುವುದು, ಬೆಂಕಿ ಹಚ್ಚುವುದೇ ಉದ್ಯೋಗವಾಗಿದೆ. ಬಿಜೆಪಿಯವರಿಗೆ ಜನಪರ ಕಾಳಜಿ ಇದ್ದರೆ, ದೆಹಲಿಗೆ ಹೋಗಿ ಕೇಂದ್ರ ಸರ್ಕಾರದಿಂದ ಅನುದಾನ ತರಲಿ, ನರೇಗಾ ಯೋಜನೆಯ ಬಾಕಿ ಬಿಡುಗಡೆ ಮಾಡಿಸಲಿ, ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯವನ್ನು ಸರಿಪಡಿಸಲಿ, ಮೇಕೆದಾಟು, ಮಹದಾಯಿ ಯೋಜನೆಗಳಿಗೆ ಅನುಮೋದನೆ ಕೊಡಿಸಲಿ ಎಂದು ತಿರುಗೇಟು ನೀಡಿದ್ದರು.
ಬೆಂಗಳೂರು ಅಭಿವೃದ್ಧಿಗೆ ಸಂಬಂಧಪಟ್ಟಂತೆ ಜಿಲ್ಲೆಯ ಶಾಸಕರ ಜೊತೆ ಚರ್ಚೆ ನಡೆಸಲು ಸಂಜೆ ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಈ ವೇಳೆ ನೀರಾವರಿ ಕುರಿತಂತೆಯೂ ಚರ್ಚೆ ನಡೆಸಲಾಗುವುದು. ವಿಶೇಷ ಅನುದಾನದ ಬಗ್ಗೆ ಸಭೆಯಲ್ಲಿ ಸಮಾಲೋಚನೆಯಾಗಲಿದೆ ಎಂದರು. ಸಚಿವರು ಕೇವಲ ತಮ ಕ್ಷೇತ್ರವನ್ನು ನೋಡಿಕೊಂಡರೆ ಸಾಲದು. ಇಡೀ ಜಿಲ್ಲೆಯನ್ನು ಅವರು ಗಮನಿಸಬೇಕು. ಬೆಂಗಳೂರಿನಲ್ಲಿ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಆ ಕ್ಷೇತ್ರಗಳನ್ನು ಮತ್ತೆ ಗೆಲ್ಲಬೇಕು. ಅದಕ್ಕಾಗಿ ಸಚಿವರಿಗೆ ಜವಾಬ್ದಾರಿ ಹಂಚಲಾಗಿದೆ ಎಂದು ಹೇಳಿದರು.
ದೇಶದ ಯುವಕರಿಗೆ ರಾಜಕೀಯ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಜವಹಾರ್ ಲಾಲ್‌ಮಂಚ್ ಉತ್ತಮ ಕೆಲಸ ಮಾಡುತ್ತಿದೆ. ಬೆಂಗಳೂರಿನಿಂದ 24ಮಂದಿ ಯುವ ನಾಯಕರನ್ನು ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಾಗಾರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅವರು ಪ್ರಸ್ತುತ ಬೆಳವಣಿಗೆಗಳ ಬಗ್ಗೆ ತರಬೇತಿ ಪಡೆದುಕೊಂಡು ಬರಲಿದ್ದಾರೆ ಎಂದು ಹೇಳಿದರು.