Monday, October 21, 2024
Homeಬೆಂಗಳೂರುಮುಡಾ ಸೈಟು ಹಗರಣ : ಸಿಎಂ ಕುಟುಂಬದವರಿಗೆ ಇಡಿ ನೋಟೀಸ್

ಮುಡಾ ಸೈಟು ಹಗರಣ : ಸಿಎಂ ಕುಟುಂಬದವರಿಗೆ ಇಡಿ ನೋಟೀಸ್

E D notice for the family of cm.

ಬೆಂಗಳೂರು,ಅ.20- ಈಗಾಗಲೇ ಮುಡಾ ಸೈಟು ಹಗರಣ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಸಿದ್ದರಾಮಯ್ಯನವರನ್ನು ಕಾಡಲಾರಂಭಿಸಿದೆ. ಅ.18ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಚೇರಿಯ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದಾಗಿನಿಂದ ಪ್ರಕರಣದಲ್ಲಿ ಆರೋಪಿತರಾಗಿರುವ ಸಿಎಂ ಸಿದ್ದರಾಮಯ್ಯನವರ ಕುಟುಂಬದ ಸದಸ್ಯರಿಗೆ ಹೊಸ ಆತಂಕ ಶುರುವಾಗಿದೆ.

ಜಾರಿ ನಿರ್ದೇಶನಾಲಯ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಹಾಗೂ ಪುತ್ರ ಯತೀಂದ್ರ ಸಿದ್ದರಾಮಯ್ಯರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದ್ದು, ಯಾವುದೇ ಕ್ಷಣದಲ್ಲೂ ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿ ಮಾಡುವ ಸಾಧ್ಯತೆ ನಿಚ್ಚಳವಾಗಿದೆ.
ಈ ಪ್ರಕರಣದಲ್ಲಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ ಕ್ರಮವಾಗಿ ಮೊದಲ ಮತ್ತು 2ನೇ ಆರೋಪಿಗಳಾಗಿದ್ದು,

3ನೇ ಮತ್ತು 4ನೇ ಆರೋಪಿಗಳಾದ ಸಿಎಂ ಭಾವಮೈದುನ ಮಲ್ಲಿಕಾರ್ಜುನಸ್ವಾಮಿ, ಜಮೀನಿನ ಮಾಲೀಕ ದೇವರಾಜು ವಿಚಾರಣೆಯನ್ನು ಈಗಾಗಲೇ ಲೋಕಾಯುಕ್ತ ಪೊಲೀಸರು ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಸಂಗ್ರಹವೇ ಲೋಕಾಯುಕ್ತ ಪೊಲೀಸರಿಗೆ ದೊಡ್ಡ ತಲೆನೋವು ಆಗಿದೆ. 2010ರವರೆಗೆ ಸಿಕ್ಕ ದಾಖಲೆಗಳ ತಾಳೆ ಹಾಕಿರುವ ತನಿಖಾಧಿಕಾರಿಗಳು, ಕಡತಗಲ್ಲಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಅವರ ಪಾತ್ರದ ಬಗ್ಗೆ ಇ.ಡಿ ಅಧಿಕಾರಿಗಳಿಗೆ ಮಹತ್ವದ ದಾಖಲೆ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.

ಎ3, ಎ4 ಬಳಿಯ ದಾಖಲೆಗಳನ್ನು ಸಂಗ್ರಹಿಸಿರುವ ಲೋಕಾಯುಕ್ತ ಪೊಲೀಸರು, 2010ರ ಬಳಿಕ ಸಿಎಂ ಭಾವಮೈದುನನಿಂದ ಸಿಎಂ ಪತ್ನಿಗೆ ಆಸ್ತಿದಾನ ಕಡತಗಳನ್ನು ಪರಿಶೀಲಿಸಿದ್ದಾರೆ. ಭೂ ದಾಖಲೆಯ ಸಹಾಯಕ ನಿರ್ದೇಶಕ(ಎಡಿಎಲ್ಆರ್), ಭೂ ಮಾಪನಾಧಿಕಾರಿ, ಮುಡಾ, ಕಂದಾಯ ಇಲಾಖೆ, ಉಪನೋಂದಣಿ ಅಧಿಕಾರಿಗಳಿಂದಲೂ ಲೋಕಾಯುಕ್ತ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

14 ನಿವೇಶಗಳನ್ನು ಸಿಎಂ ಪತ್ನಿ ಮುಡಾಗೆ ಹಿಂದಿರುಗಿಸಿದ್ದರೂ ವಿಚಾರಣೆ ಅನಿವಾರ್ಯ ಎನ್ನಲಾಗಿದೆ. ಇ.ಡಿ ಇಕ್ಕಳದಲ್ಲಿ ಸಿಎಂ ಸಿದ್ದು ಪುತ್ರ ಯತೀಂದ್ರ ಸಿದ್ದರಾಮಯ್ಯ ಸಿಲುಕುವ ಸಾಧ್ಯತೆಗಳಿದೆ. ಇದಕ್ಕೆ ಯತೀಂದ್ರ ಸಿದ್ದರಾಮಯ್ಯ ಮುಡಾ ಸಭೆಯಲ್ಲಿ ಭಾಗಿಯಾಗಿದ್ದಾಗಿ ಆರೋಪವಿರುವುದೇ ಮುಖ್ಯ ಕಾರಣ.

ಕೆಸೆರೆ ಗ್ರಾಮದ ಸರ್ವೆ ನಂ. 464 ರ 3 ಎಕರೆ16 ಗುಂಟೆ ಜಮೀನು ಅನ್ನು ಮುಡಾ ಡಿನೋಟಿಫಿಕೇಷನ್ ಮಾಡಿತ್ತು. ಬದಲಿ ನಿವೇಶನಕ್ಕೆ ಪತ್ರ ಬರೆದಿದ್ದ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ, ತಮ ಅರಿಶಿಣ ಕುಂಕುಮಕ್ಕೆಂದು ತವರು ಮನೆಯಿಂದ ಸಹೋದರ ಮಲ್ಲಿಕಾರ್ಜುನ ಸ್ವಾಮಿ ನೀಡಿದ್ದ ಕೆಸೆರೆ ಗ್ರಾಮದ ಸರ್ವೆ ನಂ.464 ರ 3 ಎಕರೆ 16 ಗುಂಟೆ ಜಮೀನ ಡಿನೋಟಿಫಿಕೇಷನ್ ಮಾಡಿದ್ದಕ್ಕೆ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದರು. ಈ ಪತ್ರದ ಬಳಿಕ ಬದಲಿ 14 ನಿವೇಶನಗಳನ್ನು ಪಾರ್ವತಿ ಸಿದ್ದರಾಮಯ್ಯಗೆ ನೀಡುವಂತೆ ಮುಡಾ ಸಭೆ ತೀರ್ಮಾನ ಮಾಡಿತ್ತು. ಇದೇ ಮುಡಾ ಸಭೆಯಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದರು ಎನ್ನಲಾಗಿದೆ. ಬದಲಿ ನಿವೇಶನ ನೀಡಿದ್ದ ಯಾವುದೇ ದಾಖಲೆಗಳಲ್ಲೂ ಸಿಎಂ ಸಿದ್ದರಾಮಯ್ಯ ಅಥವಾ ಯತೀಂದ್ರ ಸಿದ್ದರಾಮಯ್ಯ ಸಹಿ ಇಲ್ಲ. ಆದಾಗ್ಯೂ ಸಿಎಂ ಸಿದ್ದರಾಮಯ್ಯ ಪ್ರಭಾವ ಬಳಸಿ ಬದಲಿ ನಿವೇಶನ ಪಡೆದಿರುವ ಗಂಭೀರ ಆರೋಪವಿದೆ.

50-50 ನಿಯಮದಡಿ ಬದಲಿ 14 ನಿವೇಶನಗಳನ್ನು ಪರಿಹಾರವಾಗಿ ಪಾರ್ವತಿ ಸಿದ್ದರಾಮಯ್ಯಗೆ ನೀಡುವಂತೆ ಕೈಗೊಂಡಿದ್ದ ತೀರ್ಮಾನವಾದ ಸಭೆಯಲ್ಲಿ ಭಾಗಿಯಾಗಿದ್ದ ಕಾರಣ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಇ.ಡಿ ವಿಚಾರಣೆ ಎದುರಿಸಬೇಕಾಗಬಹುದು.
ಮೈಸೂರಿನ ಸರಸ್ವತಿ ನಗರದಲ್ಲಿ 14 ನಿವೇಶನ ನೀಡುವುದಕ್ಕೆ ಸಂಬಂಧಿಸಿ ಮುಡಾ ಸಭೆ ನಡೆಸಿತ್ತು. ಮುಡಾ ಹಗರಣ ಸಂಬಂಧ ಇ.ಡಿ ಅಧಿಕಾರಿಗಳು ಮೂಲ ಮಾಲೀಕ ಎನ್ನಲಾಗಿರುವ ದೇವರಾಜ್ ಮನೆಯಲ್ಲಿ ಕೆಲ ದಾಖಲೆಗಳು ವಶಕ್ಕೆ ಪಡೆದಿದ್ದಾರೆ. ಮೈಸೂರು ಹೊರವಲಯದ ಕೆಸೆರೆ ಗ್ರಾಮದ ಸರ್ವೆ ನಂ. 464 ರ ದಾಖಲೆ, ಭೂ ದಾಖಲೆಗಳನ್ನು ವಶಕ್ಕೆ ಪಡೆದು ತೆರಳಿರುವ ಇ.ಡಿ ಅಧಿಕಾರಿಗಳು, ಶುಕ್ರವಾರ ಇಡೀ ದಿನ 12 ಗಂಟೆಗಳ ನಿರಂತರ ಪರಿಶೀಲನೆ ನಡೆಸಿದ್ದಾರೆ.

ದೇವರಾಜ್ ಬಳಿ ದಾಖಲೆಗಳನ್ನು ಮುಂದಿಟ್ಟುಕೊಂಡು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಜಮೀನು ಪರಭಾರೆ, ಮಾಲೀಕತ್ವ ಸೇರಿದಂತೆ ಹಲವು ವಿಚಾರಗಳ ಸಂಬಂಧ ವಿಚಾರಣೆ ನಡೆಸಿದ್ದು, ಪ್ರಾಥಮಿಕ ವಿಚಾರಣೆ ನಡೆಸಿ ಹೊರಟಿರುವ ನಾಲ್ವರು ಇ.ಡಿ ಅಧಿಕಾರಿಗಳು, ಅಗತ್ಯವಿದ್ದಲ್ಲಿ ನೋಟಿಸ್ ಜಾರಿ ಮಾಡಿದಾಗ ವಿಚಾರಣೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಅಗತ್ಯ ದಾಖಲೆಗಳೊಂದಿಗೆ ದೇವರಾಜ್ಗೆ ಹಾಜರಾಗುವಂತೆ ಸೂಚಿಸಿರುವ ಇ.ಡಿ ಅಧಿಕಾರಿಗಳು, ಪ್ರಕರಣ ಗಂಭೀರವಾಗಿದ್ದು ಸಹಕರಿಸುವಂತೆ ತಾಕೀತು ಮಾಡಿದ್ದಾರೆ.

RELATED ARTICLES

Latest News