ಬೆಂಗಳೂರು,ಜು.9- ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯಡಿ ಜಾರಿನಿರ್ದೇಶನಾಲಯ(ಇ.ಡಿ)ಮತ್ತಷ್ಟು ನಿವೇಶನಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಇ.ಡಿ ಬಿಡುಗಡೆ ಮಾಡಿದ ಮೂರನೇ ಪಟ್ಟಿ ಪ್ರಕಾರ ಒಬ್ಬನೇ ವ್ಯಕ್ತಿಗೆ ಅಕ್ರಮವಾಗಿ 30ರಿಂದ 40 ನಿವೇಶನಗಳನ್ನು ಕೊಟ್ಟಿರುವುದು ಪತ್ತೆಯಾಗಿದೆ. ಮೈಸೂರಿನ ಹೆಸರಾಂತ ಚರ್ಚ್ ಕ್ಯಾಥೆಡ್ರಲ್ ಪರೀಷ್ ಸೊಸೈಟಿಯೊಂದಕ್ಕೆ ನೀಡಿದ್ದ 40 ನಿವೇಶನಗಳನ್ನು ಮುಟ್ಟುಗೋಲು ಹಾಕಲಾಗಿದೆ.
ಭೂಮಿ ಕಳೆದುಕೊಂಡಿದ್ದೇನೆ ಎಂದು ಅರ್ಜಿ ಹಾಕಿದ್ದ ಅಬ್ದುಲ್ ವಾಹಿದ್ ಎಂಬಾತನಿಗೆ ನೀಡಿದ್ದ 41 ನಿವೇಶನಗಳನ್ನು ಇ.ಡಿ ವಶಕ್ಕೆ ಪಡೆದುಕೊಂಡಿದೆ. ಅಲ್ಲದೆ ಕುವೆಂಪು ನಗರದ ರವಿಕುಮಾರ್, ಸುಜಾತ, ಮಹೇಶ್ ಹಾಗೂ ರಾಜು ಕುಟುಂಬಕ್ಕೆ ನೀಡಿದ್ದ 31 ನಿವೇಶನಗಳು ಮತ್ತು ಪ್ರತಿಷ್ಠಿತ ಆಂದೋಲನ ವೃತ್ತದ ಬಳಿ ಹಲವರಿಗೆ ನೀಡಿದ್ದ 48 ಬೇನಾಮಿ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇದೇ ರೀತಿ ನಗರ ಹೃದಯ ಭಾಗದಲ್ಲೇ ಮುಡಾದ ಕೈತಪ್ಪಿ ಹೋಗುತ್ತಿದ್ದ ಜಾಗವನ್ನು ಇ.ಡಿ ಜಪ್ತಿ ಮಾಡಿದೆ. ಕುವೆಂಪುನಗರ, ದಟ್ಟಗಳ್ಳಿ, ಆಂದೋಲನ ವೃತ್ತ, ವಿಜಯನಗರ, ಜೆ.ಪಿ.ನಗರ, ದೇವನೂರು ಬಡಾವಣೆ, ಆರ್.ಟಿ.ನಗರಗಳಲ್ಲಿ ಬೇನಾಮಿಯಾಗಿ ನಿವೇಶನಗಳನ್ನು ನೀಡಲಾಗಿತ್ತು. ಇವುಗಳಿಂದಲೇ ಮುಡಾಗೆ ಸುಮಾರು 500 ಕೋಟಿ ರೂ. ನಷ್ಟ ಸಾಧ್ಯತೆ ಇತ್ತು ಎನ್ನಲಾಗಿದೆ.
ಸದ್ಯ ಪಟ್ಟಿಯಲ್ಲಿರುವ ಯಾವುದೇ ನಿವೇಶನದ ಪರಭಾರೆ ಮಾಡದಂತೆ ತಡೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಅಧಿಕಾರಿಗಳಿಗೆ ಸೇರಿದ 300 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಈವರೆಗೂ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿ ಮೌಲ್ಯ ಸುಮಾರು 400 ಕೋಟಿ ರೂ. ಎಂದು ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ಇಡಿ ತಿಳಿಸಿತ್ತು. ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ವಸತಿ ಸಹಕಾರಿ ಸಂಘ ಮತ್ತು ಮುಡಾ ಅಧಿಕಾರಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳಿಗೆ ಹತ್ತಿರದ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಹೇಳಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಮೈಸೂರಿನ ಲೋಕಾಯುಕ್ತ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆಯನ್ನು ಪ್ರಾರಂಭಿಸಿದೆ ಎಂದು ತಿಳಿಸಿದೆ.
ಮುಡಾ ನಿವೇಶನಗಳ ಹಂಚಿಕೆಯಲ್ಲಿ ವಿವಿಧ ಕಾನೂನುಗಳು ಮತ್ತು ಸರ್ಕಾರಿ ಆದೇಶಗಳು/ಮಾರ್ಗಸೂಚಿಗಳನ್ನು ಉಲ್ಲಂಘಿಸಿ ದೊಡ್ಡ ಪ್ರಮಾಣದ ಹಗರಣ ನಡೆದಿರುವುದು ಇಡಿ ತನಿಖೆಯಿಂದ ಬಹಿರಂಗವಾಗಿದೆ. ಜಿ.ಟಿ.ದಿನೇಶ್‌ಕುಮಾರ್ ಸೇರಿದಂತೆ ಮುಡಾದ ಮಾಜಿ ಆಯುಕ್ತರು ನಿವೇಶನಗಳ ಅಕ್ರಮ ಹಂಚಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ತನಿಖೆಯ ಸಮಯದಲ್ಲಿ ನಗದು, ಬ್ಯಾಂಕ್ ವರ್ಗಾವಣೆ, ಚರ/ಸ್ಥಿರ ಆಸ್ತಿಗಳ ರೂಪದಲ್ಲಿ ಅಕ್ರಮ ಹಂಚಿಕೆ ಮಾಡಲು ಲಂಚ ಪಡೆದಿರುವ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಇ.ಡಿ ಹೇಳಿದೆ.
ಜಿ.ಟಿ. ದಿನೇಶ್ ಕುಮಾರ್ ಪ್ರಮುಖ ಪಾತ್ರ :
ಪರಿಹಾರದ ನಿವೇಶನಗಳನ್ನು ಅರ್ಹರಲ್ಲದ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವುದರಲ್ಲಿ ಮುಡಾದ ಮಾಜಿ ಆಯುಕ್ತ ಸೇರಿದಂತೆ ಇತರರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿತ್ತು.
ವಿವಿಧ ಕಾನೂನು, ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮೋಸದ ವಿಧಾನಗಳ ಮೂಲಕ ಮುಡಾ ನಿವೇಶನಗಳ ಹಂಚಿಕೆಯಲ್ಲಿ ದೊಡ್ಡ ಪ್ರಮಾಣದ ಹಗರಣ ನಡೆದಿರುವುದನ್ನು ಇ.ಡಿ ತನಿಖೆ ಬಹಿರಂಗಪಡಿಸಿದೆ. ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲು ನಗದು, ಬ್ಯಾಂಕ್ ವರ್ಗಾವಣೆ, ಚರಾಸ್ತಿ ಮತ್ತು ಸ್ಥಿರಾಸ್ತಿಗಳ ರೂಪದಲ್ಲಿ ಲಂಚ ಪಡೆದಿರುವುದಕ್ಕೆ ಸಂಬಂಧಿಸಿದ ಪುರಾವೆಗಳನ್ನು ತನಿಖೆ ಸಮಯದಲ್ಲಿ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
ಅನರ್ಹ ಫಲಾನುಭವಿಗಳನ್ನು ಗುರುತಿಸಿ, ಸರಕಾರಿ ಆದೇಶಗಳನ್ನು ನೇರವಾಗಿ ಉಲ್ಲಂಘಿಸಿ, ನಕಲಿ ಮತ್ತು ಅಪೂರ್ಣ ದಾಖಲೆಗಳನ್ನು ಬಳಸಿ ಮುಡಾ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಕೆಲ ಸಂದರ್ಭಗಳಲ್ಲಿ ಹಿಂದಿನ ದಿನಾಂಕಗಳನ್ನು ನಮೂದಿಸಿ ನಿವೇಶನ ಹಂಚಿಕೆ ಪತ್ರ ನೀಡಲಾಗಿದೆ. ಈ ಅಕ್ರಮ ಹಂಚಿಕೆಗಳಿಗೆ ಪ್ರತಿಯಾಗಿ ಸಹಕಾರಿ ಸಂಘ ಮತ್ತು ಹಂಚಿಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಧಿಕಾರಿಗಳ ಸಂಬಂಧಿಕರು ಹಾಗೂ ಸಹವರ್ತಿಗಳ ಬ್ಯಾಂಕ್ ಖಾತೆಗಳಿಗೆ ಹಣ ರವಾನಿಸಲಾಗಿದೆ ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದರು.
800 ಸೈಟ್ ಮುಟ್ಟುಗೋಲು?
ಇ.ಡಿ ಅಧಿಕಾರಿಗಳು ವಸತಿ ಸಹಕಾರಿ ಸಂಘ, ಮುಡಾ ಅಧಿಕಾರಿಗಳು ಸೇರಿದಂತೆ ಪ್ರಭಾವಿಗಳ ಹೆಸರಿನಲ್ಲಿ ನೋಂದಣಿಯಾಗಿದ್ದ ಸುಮಾರು 100 ಕೋಟಿ ರೂ. ಮೌಲ್ಯದ 92 ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ಅಕ್ರಮ ವರ್ಗಾವಣೆ ತಡೆ ಕಾಯಿದೆ-2002ರ ನಿಬಂಧನೆಗಳಡಿ ಮುಡಾದ 92 ಸೈಟುಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಆಸ್ತಿಗಳು ವಸತಿ ಸಹಕಾರಿ ಸಂಘ, ಮುಡಾ ಅಧಿಕಾರಿಗಳೂ ಸೇರಿದಂತೆ ಪ್ರಭಾವಿ ವ್ಯಕ್ತಿಗಳ ಹೆಸರಿನಲ್ಲಿ ನೋಂದಣಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಐಪಿಸಿ ವಿವಿಧ ಸೆಕ್ಷನ್‌ಗಳು ಹಾಗೂ ಭ್ರಷ್ಟಾಚಾರ ತಡೆ ಕಾಯಿದೆಯಡಿ ಲೋಕಾಯುಕ್ತ ಪೊಲೀಸರು ಮೈಸೂರಿನಲ್ಲಿ ದಾಖಲಿಸಿದ್ದ ಪ್ರಕರಣದ ಆಧಾರದ ಮೇಲೆ ಇ.ಡಿ ತನಿಖೆ ಆರಂಭಿಸಿತ್ತು.
ಮುಡಾ ಅಕ್ರಮದ ಸಂಬಂಧ ಇ.ಡಿ ಅಧಿಕಾರಿಗಳು ಈ ಹಿಂದೆ ಸುಮಾರು 300 ಕೋಟಿ ರೂ. ಮೌಲ್ಯದ 160 ಮುಡಾ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಇದೀಗ 92 ಸ್ಥಿರಾಸ್ತಿಗಳ ಜಪ್ತಿಯೊಂದಿಗೆ ಒಟ್ಟು ಸುಮಾರು 400 ಕೋಟಿ ರೂ.ಗಳಷ್ಟು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಂತಾಗಿದೆ. ಇನ್ನೂ 800 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ.
- ಬುರುಡೆ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಮಹೇಶ್ಶೆಟ್ಟಿ ತಿಮರೋಡಿ ನಿವಾಸದ ಮೇಲೆ ಎಸ್ಐಟಿ ದಾಳಿ
- ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಶಿವರಾಜ್ಸಿಂಗ್ ಚೌಹಾಣ್ ಆಯ್ಕೆ ಬಹುತೇಕ ಫಿಕ್ಸ್..?
- ದೆಹಲಿ ಮಾಜಿ ಸಚಿವ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ಇಡಿ ದಾಳಿ
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-08-2025)
- ಬೆಂಗಳೂರಲ್ಲಿ ಅನಧಿಕೃತ ಪಾರ್ಕಿಂಗ್ ಮಾಡಿದ 12 ಸಾವಿರ ವಾಹನ ಸವಾರರ ವಿರುದ್ಧ ಎಫ್‌ಐಆರ್