Monday, January 27, 2025
Homeರಾಜ್ಯ34ನೇ ವಸಂತಕ್ಕೆ ಕಾಲಿಟ್ಟ 'ಈ ಸಂಜೆ' ಪತ್ರಿಕೆ

34ನೇ ವಸಂತಕ್ಕೆ ಕಾಲಿಟ್ಟ ‘ಈ ಸಂಜೆ’ ಪತ್ರಿಕೆ

Ee Sanje' newspaper enters its 34th year

ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ನಾಡಿನ ಅಭಿಮಾನದ ದ್ಯೋತಕವಾದ ಈ ಸಂಜೆ ಪತ್ರಿಕೆ ಯಶಸ್ವಿಯಾಗಿ 33 ವರ್ಷಗಳನ್ನು ಪೂರೈಸಿ 34ನೇ ವಸಂತಕ್ಕೆ ದಾಪುಗಾಲು ಇಟ್ಟಿದೆ.ಸದಾ ಸಂತ್ರಸ್ತರ ಪರವಾಗಿ ನಿಲ್ಲುವ, ನಾಡಿನ ಅಪರಿಮಿತ ಸಮಸ್ಯೆಗಳ ಪರಿಹಾರದ ಭಾಗವಾಗಿರುವ ಅಗಣಿತ ಪ್ರತಿಭೆಗಳನ್ನು ಹುಟ್ಟು ಹಾಕಿರುವ ಪತ್ರಿಕೋದ್ಯಮದಲ್ಲಿ ಮುಗಿಲೆತ್ತರಕ್ಕೆ ಬೆಳೆದು ಅಂತರ್ಜಾಲದಲ್ಲಿ ಕ್ರಾಂತಿ ಮಾಡಿ ರಾಜಧಾನಿ ಬೆಂಗಳೂರಿಗಷ್ಟೇ ಅಲ್ಲದೆ ಉತ್ತರ ಕರ್ನಾಟಕದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಈ ಸಂಜೆ 33 ವರ್ಷಗಳ ಸುದೀರ್ಘ ಅವಧಿ, ಸವೆಸಿದ ಹಾದಿ ಸುಲಭವೇನಲ್ಲ.

ಸಾಕಷ್ಟು ಏಳುಬೀಳುಗಳನ್ನು ಎದುರಾದ ಸವಾಲುಗಳನ್ನು ಅಡ್ಡಿ ಆತಂಕಗಳನ್ನು ಮೆಟ್ಟಿ ನಿಂತು ಹೊಗಳಿಕೆಗೆ ಹಿಗ್ಗದೆ ಯಾವುದೇ ಮರ್ಜಿಗೆ ಒಳಗಾಗದೆ ರಾಜೀಯಾಗದೆ ಮಾಧ್ಯಮ ಪಾವಿತ್ರ್ಯವನ್ನು ಎತ್ತಿ ಹಿಡಿದು ನಾಡಿನ ಉದ್ದಗಲಕ್ಕೂ ಈ ಸಂಜೆ ಹೆಮರವಾಗಿ ಬೆಳೆದು ನಿಂತಿರುವುದು ಹೆಮೆಯ ವಿಷಯ.

ಈ 33 ವರ್ಷಗಳಲ್ಲಿ ನಿಮ್ಮ ಈ ಸಂಜೆ ನೂರಾರು ಪ್ರತಿಭೆಗಳನ್ನು ಹುಟ್ಟುಹಾಕಿದೆ. ಇದೊಂದು ಮಾಧ್ಯಮದ ಕ್ಷೇತ್ರದ ಪ್ರಯೋಗಶಾಲೆ ಎಂದರೆ ತಪ್ಪಾಗಲಾರದು. ಈ ಸಂಸ್ಥೆಯಲ್ಲಿ ಕೆಲಸ ಮಾಡಿರುವ ಅದೆಷ್ಟೋ ಪತ್ರಕರ್ತರು ನಾಡಿನ ದೃಶ್ಯ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಪ್ರಸಿದ್ದರಾಗಿದ್ದಾರೆ. ಈ ಸಂಜೆ ನಮ ಭೂಮಿಕೆಯಾಗಿತ್ತೆಂದು ಅವರೆಲ್ಲ ಸರಿಸುವುದು ನಮ ಪತ್ರಿಕೆಯ ಹೆಮೆಯೂ ಹೌದು. ಗರ್ವವೂ ಹೌದು.

ಯಾವುದೇ ವದಂತಿಗಳನ್ನು ವೈಭವೀಕರಿಸದೆ ಜನಸಾಮಾನ್ಯರ ಭಾವನೆಗಳಿಗೆ ಧಕ್ಕೆ ತರದೆ ಸುದ್ದಿಗಳನ್ನು ಸಂಗ್ರಹಿಸಿ ಶೋಧಿಸಿ ನೈಜ ವರದಿಗಳನ್ನು ಸಮಾಜದ ಮುಂದಿಡುವ ಕೆಲಸವನ್ನು ಈ ಸಂಜೆ ಪತ್ರಿಕೆ ನಿರಂತರವಾಗಿ ಮಾಡುತ್ತಾ ಬರುತ್ತಿದೆ.ರಾಜಧಾನಿ ಬೆಂಗಳೂರಿಗೆ ಸೀಮಿತವಾಗಿದ್ದ ಈ ಸಂಜೆ ಪತ್ರಿಕೆ ಇದೀಗ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತನ್ನ ಪ್ರಸಾರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಹುಬ್ಬಳ್ಳಿ, ಬೆಳಗಾವಿಯಲ್ಲಿ ಆವೃತ್ತಿಯನ್ನು ಆರಂಭಿಸಿ ಗಡಿನಾಡಿನಲ್ಲೂ ಪತ್ರಿಕೆ ಸಂಚಲನ ಮೂಡಿಸಿದೆ.

ಈ ಸಂಜೆ ಪತ್ರಿಕೆ ಸಂಜೆ ದೈನಿಕವಾದರೂ ದಿನಪತ್ರಿಕೆಗಳಿಗೆ ಕಡಿಮೆ ಇಲ್ಲದಂತೆ ಸುದ್ದಿ ಪ್ರಸಾರ ಮಾಡುತ್ತಾ ಸೈ ಎನಿಸಿಕೊಂಡಿದೆ. ಈ ಸಂಜೆ ಪತ್ರಿಕೆಯಲ್ಲಿ ಬರುವ ವರದಿಗಳು ಇತರೆ ಮಾಧ್ಯಮಗಳಿಗೆ ಆಕರವೆಂದೇ ಬಿಂಬಿತವಾಗಿದೆ. ವಿದ್ಯುನಾನ ಮಾಧ್ಯಮಗಳ ಪ್ರಚಾರ, ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆಯೂ ಈ ಸಂಜೆ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿಕೊಂಡಿದೆ.

33 ವರ್ಷಗಳಲ್ಲಿ ಬೃಹದಾಕಾರದ ಆಲದ ಮರದಂತೆ ಬೆಳೆದು ಸಾವಿರಾರು ಜನರಿಗೆ ಉದ್ಯೋಗ ನೀಡಿ ಅವರ ಜೀವನಕ್ಕೆ ದಾರಿದೀಪವಾಗಿದೆ. ಸಂಜೆ ಪತ್ರಿಕೋದ್ಯಮ ಎಂಬುದು ತಂತಿ ಮೇಲಿನ ನಡಿಗೆ. ಅವಸರದ ಅಡುಗೆ. ಸ್ವಲ್ಪವೂ ಎಚ್ಚರ ತಪ್ಪದಂತೆ ಕಾರ್ಯ ನಿರ್ವಹಿಸುತ್ತಾ ಸಮಾಜದ ಸ್ವಾಸ್ಥ್ಯ , ಸುಸ್ಥಿರ ಬದುಕಿಗೆ ಯಾವುದು ಬೇಕೋ ಅದನ್ನು ಗ್ರಹಿಸಿ ಓದುಗರಿಗೆ ಪ್ರಾಮಾಣಿಕವಾಗಿ ಕೊಡುವ ಕೆಲಸವನ್ನು ಈ ಸಂಜೆ ಮಾಡುತ್ತಾ ಬರುತ್ತಿದೆ.

ರಾಷ್ಟ್ರ ಪ್ರೇಮ, ಐಕ್ಯತೆ, ಸ್ವಾಭಿಮಾನ, ಪರೋಪಕಾರದಂತಹ ಭಾವನೆಗಳನ್ನು ಮೂಡಿಸಿ ಸತ್ಪ್ರಜೆಗಳನ್ನು ರೂಪಿಸುವ ಕೆಲಸವನ್ನು ಈ ಸಂಜೆ ಮಾಡುತ್ತಿದೆ. ಹೊಗಳಿಕೆಗೆ ಹಿಗ್ಗದೆ, ಪ್ರಭುತ್ವದ ಮುಲಾಜಿಗೆ ಒಳಗಾಗದೆ ಜನ ನಾಯಕರ ಒಳ್ಳೆಯ ಕೆಲಸಗಳನ್ನು ಪ್ರಶಂಸಿಸಿ ಅಪ್ರಮಾಣಿಕ ಅದಕ್ಷತೆ, ಅನ್ಯಾಯ ಕೆಟ್ಟ ಕೆಲಸಗಳನ್ನು ಪ್ರಶ್ನಿಸುತ್ತಾ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸುತ್ತಾ ಬಂದಿದೆ.ಕನ್ನಡಿಗರ ರಕ್ಷಣೆಗೆ, ಕನ್ನಡತನಕ್ಕೆ ಅನ್ಯಾಯವಾದಾಗ ಮುಂಚೂಣಿಯಲ್ಲಿ ನಿಂತು ಹೋರಾಟಗಳನ್ನು ರೂಪಿಸಿದ ಪತ್ರಿಕೆ, ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಗರ ಹಾವಳಿಯಿಂದ ಕನ್ನಡಕ್ಕೆ ಧಕ್ಕೆಯಾದಾಗ ಈ ಸಂಜೆ ಮಹಾಶಕ್ತಿಯಾಗಿ ಬೆಂಬಲಿಸಿದೆ.

ಉತ್ತರ ಕರ್ನಾಟಕದ ನಿರ್ಲಕ್ಷ್ಯ, ಹಳೇ ಮೈಸೂರಿನ ಅಭಿವೃದ್ಧಿಗೆ ಮಾತ್ರ ಆದ್ಯತೆ ಎಂಬ ಆರೋಪಗಳ ನಡುವೆ ಪ್ರತ್ಯೇಕತೆಯ ಕೂಗು ಕೇಳಿ ಬರುತ್ತಿದ್ದ ಸಂದರ್ಭದಲ್ಲಿ ಸಮಗ್ರ ಕರ್ನಾಟಕದ ಕನಸನ್ನು ಹೊತ್ತು ಈ ಸಂಜೆ ಪತ್ರಿಕೆ ಗಡಿ ಜಿಲ್ಲೆಗಳಾದ ಬೆಳಗಾವಿ, ಹುಬ್ಬಳ್ಳಿಯಲ್ಲೂ ಆವೃತ್ತಿಯನ್ನು ಆರಂಭಿಸಿ ಅಲ್ಲಿನ ಸಮಸ್ಯೆಗಳಿಗೆ ಧ್ವನಿಯಾಗಿದ್ದು ಹೆಮೆಯ ವಿಷಯ.

ರಾಜಧಾನಿ ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ ನೆಪದಲ್ಲಿ ಅಮಾಯಕರ ಮನೆಗಳ ತೆರವಾಗಿ ಜನರು ಬೀದಿಪಾಲಾದಾಗ ಮಡಿಕೇರಿ, ಪಶ್ಚಿಮಘಟ್ಟ ಕರಾವಳಿಯಲ್ಲಿ ಭೂಕುಸಿತ ಉಂಟಾಗಿ ಅಪಾರ ಜನ ಅತಂತ್ರರಾದಾಗ ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದಾಗಿ ಜನ ಸಂತ್ರಸ್ತರಾದಾಗ, ನೋಟು ನಿಷೇಧ, ಬೆಲೆ ಏರಿಕೆ, ಕರೋನ ಆತಂಕ ಮುಂತಾದ ಸಂದರ್ಭದಲ್ಲಿ ಜನ ಕಂಗಾಲಾದಾಗ ಅವರ ಧ್ವನಿಯಾಗಿ ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರವಾಗಿದೆ.ಈ ಸಂಜೆ ಪತ್ರಿಕೆಯ ಯಶಸ್ಸಿನಲ್ಲಿ ದಿನನಿತ್ಯ ಸಕಾಲಕ್ಕೆ ತಲುಪಿಸುವ ವಿತರಕರ ಪರಿಶ್ರಮವೂ ಇದೆ. ಆರಂಭದಿಂದಲೂ ಪತ್ರಿಕೆ ಬಗ್ಗೆ ಕಾಳಜಿ, ಕಳಕಳಿ ಹೊಂದಿರುವ ಜಾಹೀರಾತುದಾರರ ಪ್ರೀತಿಯ ಸಿಂಚನವೂ ಇದೆ.

ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಸಮಾಜದ ಸಂಕಷ್ಟಕ್ಕೆ ದನಿಯಾಗಬೇಕು. ಧಮನಿತರ ಪರವಾಗಿ ನಿಲ್ಲಬೇಕು. ಈ ಹಿನ್ನೆಲೆಯಲ್ಲಿ ಈ ಸಂಜೆ ಪತ್ರಿಕೆಯನ್ನು ಪ್ರಾರಂಭಿಸಿದ್ದೇವೆ. ಯಾರ ಮರ್ಜಿಗೂ ಒಳಗಾಗದಂತೆ ಕೆಲಸ ಮಾಡಬೇಕು. 3 ರೂ. ಕೊಟ್ಟು ಓದುವ ಓದುಗರೇ ನಮ ಮಾಲೀಕರು. ಅವರಿಗೆ ಅನ್ಯಾಯವಾಗದಂತೆ ಸಕಾಲದಲ್ಲಿ ತಲುಪಿಸಿಕೊಡಬೇಕು ಎಂಬುದು ಈ ಸಂಜೆ ಸಂಪಾದಕರ ಅಭಿಮತ.

ಮುದ್ರಣ ಮಾಧ್ಯಮದೊಂದಿಗೆ ಆಧುನಿಕತೆಗೆ ಅನುಗುಣವಾಗಿ ಡಿಜಿಟಲ್‌ ಮಾಧ್ಯಮದಲ್ಲೂ ಈ ಸಂಜೆ ಮುಂಚೂಣಿಯಲ್ಲಿದೆ. ಈ ಸಂಜೆ ನ್ಯೂಸ್‌‍ ಕನ್ನಡ ಸುದ್ದಿ ಸಂಸ್ಥೆಗಳ ಮೊದಲ 5ರ ವೆಬ್‌ಸೈಟ್‌ಗಳಲ್ಲಿ ಸ್ಥಾನ ಪಡೆದಿದೆ. ದೃಶ್ಯ ಮಾಧ್ಯಮ ರೂಪದಲ್ಲಿರುವ ಯುಟ್ಯೂಬ್‌ ಚಾನಲ್‌ 2 ಲಕ್ಷ ಚಂದಾದಾರನ್ನು ಪಡೆಯುವತ್ತ ದಾಪುಗಾಲಿಟ್ಟಿದೆ.

2019ರಲ್ಲಿ ಆರಂಭಗೊಂಡು ಅತ್ಯಲ್ಪ ಅವಧಿಯಲ್ಲೇ ದೈನಂದಿನ ವೀಕ್ಷಣೆ ಗರಿಷ್ಠ 90 ಸಾವಿರದವರೆಗೆ ದಾಟಿದೆ. ಅಂತರ್ಜಾಲದಲ್ಲಿ ಈ ಸಂಜೆ ಪತ್ರಿಕೆ ಸಂಚಲನ ಮೂಡಿಸಿ ದೇಶ-ವಿದೇಶಗಳಲ್ಲಿ ಓದುಗ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದೆ. ಜಾಹೀರಾತು ಪ್ರಸಾರ, ಸುದ್ದಿ ಸಂಗ್ರಹ ಎಲ್ಲಾ ವಿಭಾಗಗಳಲ್ಲೂ ಪತ್ರಿಕೆ ಜೊತೆ ನಿಂತು ಸಹಕರಿಸಿದ ಸಮಸ್ತರನ್ನು ಈ ಸಂಜೆ ಪತ್ರಿಕೆ ಕೃತಜ್ಞತೆಯಿಂದ ಸರಿಸುತ್ತದೆ.

RELATED ARTICLES

Latest News