ಬೆಂಗಳೂರು, ಡಿ.21- ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಅಣ್ಣತಮಂದಿರಂತೆ ಕೆಲಸ ಮಾಡುತ್ತಿದ್ದೇವೆ. ನಮಲ್ಲಿ ಯಾವುದೇ ಸಂಘರ್ಷಗಳಿಲ್ಲ. ಮಾಜಿ ಸಚಿವ ಕೆ.ಎನ್.ರಾಜಣ್ಣ ಮುಖ್ಯಮಂತ್ರಿಯವರಿಗಿಂತಲೂ ನನಗೆ ಹೆಚ್ಚು ಆಪ್ತ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ತಮ್ಮ ಮನೆಯಲ್ಲಿಂದು ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎನ್.ರಾಜಣ್ಣ ನಮ ಪಕ್ಷದ ಶಾಸಕರು. ನಮೊಂದಿಗೆ ಸಚಿವರಾಗಿದ್ದವರು, ಸೌಹಾರ್ದಯುತವಾಗಿ ಅವರನ್ನು ಭೇಟಿ ಮಾಡಿದ್ದೇನೆ. ಇಂದು ಕೂಡ ಅವರ ಜೊತೆ ಮತ್ತೆ ಭೇಟಿ ಮಾಡುತ್ತೇನೆ. ನಿನ್ನೆ ಹೆಚ್ಚಿನ ಚರ್ಚೆ ಮಾಡಲಾಗಿರಲಿಲ್ಲ ಹೀಗಾಗಿ ಇಂದು ಮತ್ತೊಮೆ ಭೇಟಿ ಮಾಡುತ್ತೇನೆ ಎಂದು ಹೇಳಿದರು.
ನಾವೆಲ್ಲ ಒಂದೇ ಪಕ್ಷದವರು ಸಹೋದ್ಯೋಗಿಗಳು, ಪಕ್ಷ ಮತ್ತು ಸರ್ಕಾರದಲ್ಲಿ ಒಟ್ಟಿಗೆ ಕೆಲಸ ಮಾಡಿದವರು. ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯ ಇಲ್ಲ. ಕೆಲವು ಸಂದರ್ಭಗಳಲ್ಲಿ ಅವರು ಹೇಳಿಕೆಗಳನ್ನು ನೀಡಿರಬಹುದು. ಅದಕ್ಕೆಲ್ಲ ನಾನು ಬೇಜಾರು ಮಾಡಿಕೊಳ್ಳಲು ಸಾಧ್ಯವಿಲ್ಲ. ಅಣ್ಣ ತಮಂದಿರೇ ಜಗಳವಾಡುತ್ತಾರೆ. ನಾನು ಯಾರ ಜೊತೆಯೂ ಜಗಳ ಆಡಲು ಹೋಗಿಲ್ಲ. ಯಾರ ಹೇಳಿಕೆಗೂ ಪ್ರತಿ ಹೇಳಿಕೆ ನೀಡಿಲ್ಲ. ವಿರೋಧ ಪಕ್ಷಗಳ ಹೇಳಿಕೆಗೆ ಉತ್ತರ ನೀಡುತ್ತೇನೆಯೇ ಹೊರತು ನಮ ಪಕ್ಷದವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಉದಾಹರಣೆ ಇಲ್ಲ . ನಾನಾಗಿ ಯಾರೊಬ್ಬರ ವಿರುದ್ಧವೂ ಹೇಳಿಕೆಗಳನ್ನು ನೀಡಲು ಹೋಗುವುದಿಲ್ಲ ಎಂದರು.
ಕೆ.ಎನ್.ರಾಜಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತಲೂ ನನಗೆ ಹೆಚ್ಚಿನ ಆಪ್ತ. ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ರಾಜಣ್ಣ ಜನತಾ ದಳದಲ್ಲಿದ್ದರು. ನಾನು ಆಗ ಸಹಕಾರ ಸಚಿವನಾಗಿದ್ದೆ ಕಾಂಗ್ರೆಸ್ ಪಕ್ಷದಿಂದ ರಾಜಣ್ಣನನ್ನು ಅಫೆಕ್ಸ್ ಬ್ಯಾಂಕ್ ಅಧ್ಯಕ್ಷನನ್ನಾಗಿ ಮಾಡಲಾಗಿತ್ತು. ನನಗೆ ರಾಜಣ್ಣ ಎಷ್ಟು ಆಪ್ತ ಎಂದು ಯಾರಿಗೂ ಗೊತ್ತಿಲ್ಲ. ಸಿದ್ದರಾಮಯ್ಯರಿಗೂ ರಾಜಣ್ಣನಿಗೂ ಸಂಬಂಧವೇ ಇಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ರಾಜಣ್ಣನನ್ನು ಈಗ ಮುಖ್ಯಮಂತ್ರಿಯವರ ಅವರ ಆಪ್ತ ಎಂದು ಹೇಳಲಾಗುತ್ತಿದೆ. ರಾಜಣ್ಣ ನನಗೂ ಆಪ್ತನೇ. ನಾನು ಮುಖ್ಯಮಂತ್ರಿಯವರು ಆಪ್ತರಲ್ಲವೇ? ನಾವಿಬ್ಬರು ಅಣ್ಣ ತಮಂದಿರಂತೆ ಕೆಲಸ ಮಾಡುತ್ತಿಲ್ಲವೇ? ಸರ್ಕಾರದಲ್ಲಿ ಯಾವುದೇ ವಿಚಾರದಲ್ಲೂ ಭಿನ್ನಾಭಿಪ್ರಾಯಗಳಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದ 16 ವರ್ಷಗಳಾಗಿದೆ. ಅಂದಿನಿಂದಲೂ ಅವರೊಂದಿಗೆ ಯಾವುದೇ ವಿಚಾರದಲ್ಲೂ ಭಿನ್ನಾಭಿಪ್ರಾಯಗಳಾಗಿಲ್ಲ. ಮಾಧ್ಯಮದವರಿಗೆ ಆಹಾರ ಬೇಕು, ಬಿಜೆಪಿಯವರು ರಾಜಕೀಯಕ್ಕಾಗಿ ಗೊಂದಲಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕ ವಿ.ಆರ್.ಸುದರ್ಶನ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು, ಅಧಿಕಾರ ಹಂಚಿಕೆಯ ಗೊಂದಲಗಳನ್ನು ಬಗೆ ಹರಿಸುವಂತೆ ಮನವಿ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ಸಿನಲ್ಲಿ ಯಾವುದೇ ಗೊಂದಲಗಳಿಲ್ಲ ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಗೊಂದಲಗಳನ್ನು ಬಗೆ ಹರಿಸಬೇಕು ಎಂಬ ರೀತಿ ಹೇಳಿಕೆಗಳನ್ನು ನೀಡಿರುವುದು ನನಗೆ ಗೊತ್ತಿಲ್ಲ. ಅವರು ಬಹಳ ದೊಡ್ಡ ನಾಯಕರು, ಮಾತನಾಡಿದ್ದರೆ, ಅದಕ್ಕೆ ಅವರೇ ಉತ್ತರ ಕೊಟ್ಟುಕೊಳ್ಳುತ್ತಾರೆ. ನಾನು ಯಾರಿಗೂ ಉತ್ತರ ನೀಡುವುದಿಲ್ಲ. ನಾವು ಯಾವುದೇ ಗೊಂದಲ ಮಾಡಿಕೊಳ್ಳುವುದಿಲ್ಲ. ಗೊಂದಲ ಎಲ್ಲಿದೆ. ಬಿಜೆಪಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಅದನ್ನು ಮರೆಮಾಚಲು ದಿನ ಬೆಳಗಾದರೆ ನಮನ್ನು ತೋರಿಸಲಾಗುತ್ತಿದೆ ಎಂದು ತಿರುಗೇಟು ನೀಡಿದರು.
ಹೈಕಮಾಂಡ್ ನಿಂದ ಭರವಸೆ ದೊರೆತಿದೆಯೇ? ಬಹಳ ಆತವಿಶ್ವಾಸದಲ್ಲಿ ಇದ್ದೀರಾ? ಎಂಬ ಪ್ರಶ್ನೆ ಎದುರಾದಾಗ, ನಮಗೆ ಜನರ ವಿಶ್ವಾಸ ಇದೆ. ಅವರು ಆಶೀರ್ವಾದ ಮಾಡಿರುವುದಕ್ಕೆ ನಾವು ಇಲ್ಲಿದ್ದೇವೆ. ಹೈಕಮಾಂಡ್ ನಾಯಕರ ಜೊತೆ ಪ್ರತಿದಿನ ಮಾತನಾಡುತ್ತಿರುತ್ತೇನೆ. ಈಗ ಎರಡು ನಿಮಿಷದ ಹಿಂದೆ ಕೂಡ ವರಿಷ್ಠರ ಜೊತೆ ಮಾತನಾಡಿ ವಿಧಾನ ಪರಿಷತ್ ನಾಲ್ಕು ಸ್ಥಾನಗಳ ಆಯ್ಕೆಗೆ ಬಿ-ಫಾರಂ ನೀಡುವ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು.
ಮಾಧ್ಯಮದವರು ಎತ್ತ ಹೋದರೂ ರಾಜಕೀಯ ವಿಚಾರದ ಚರ್ಚೆಗೆ ಬರುತ್ತಾರೆ. ಬಡವರು ತಮ ಮಕ್ಕಳಿಗೆ ಪಲ್‌್ಸ ಪೋಲಿಯೋ ಹಾಕಿಸಬೇಕು. ಅದರ ಬಗ್ಗೆ ಮಾತನಾಡುತ್ತಿಲ್ಲ. ಈ ಮೊದಲು ರಸ್ತೆ ಗುಂಡಿಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈಗ ಎಲ್ಲಾ ಕಡೆ ಗುಂಡಿ ಮುಚ್ಚಲಾಗಿದೆ ನಮ್ಮ ಪಾಲಿಕೆಗಳ ಆಯುಕ್ತರು ಹಗಲು ರಾತ್ರಿ ಕೆಲಸ ಮಾಡಿ ರಸ್ತೆ ಸರಿಪಡಿಸಿದ್ದಾರೆ. ಅದರ ಬಗ್ಗೆ ಪ್ರಚಾರ ನೀಡುತ್ತಿಲ್ಲ. ವಿರೋಧ ಪಕ್ಷಗಳ ನಾಯಕರು ಪ್ರಚಾರಕ್ಕಾಗಿ ಮಾತನಾಡುತ್ತಾರೆ ಎಂದು ಅಸಮಧಾನ ವ್ಯಕ್ತ ಪಡಿಸಿದರು.
