ಬೆಂಗಳೂರು,ಜು.22- ಭಾರತದಲ್ಲಿ ಅಂಡಾಣು ಸಂರಕ್ಷಣೆ ಹೊಸ ಪದ್ಧತಿಯಾಗಿ ಪರಿಣಮಿಸಿದೆ. ಆದರೆ, ಮುಂಬೈ, ದೆಹಲಿ, ಬೆಂಗಳೂರು ಮತ್ತು ಹೈದ್ರಾಬಾದ್ ನಂತಹ ಮೆಟೋ ನಗರಗಳಲ್ಲಿ ಇದು ಕ್ರಮೇಣ ಜನಪ್ರಿಯತೆ ಪಡೆಯುತ್ತಿದೆ ಎಂದು ನಗರದ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಐವಿಎಫ್ ಸೆಂಟರ್‌ನ ವೈದ್ಯಕೀಯ ನಿರ್ದೇಶಕಿ ಡಾ.ವಿದ್ಯಾ ವಿ.ಭಟ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರು ತಮ ಸಂತಾನೋತ್ಪತ್ತಿ ಸಮಯದ ವಿಚಾರದಲ್ಲಿ ನಿಯಂತ್ರಣವನ್ನು ಸಾಧಿಸುವ ಆಯ್ಕೆಯಾಗಿ ಈ ಅಂಡಾಣು ಸಂರಕ್ಷಣೆ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಜೈವಿಕ ವಾಸ್ತವವು ಸಹ ಇಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅನೇಕ ಮಹಿಳೆಯರು ವಯಸ್ಸಿಗೆ ಸಂಬಂಧಿಸಿದ ಫಲವತ್ತತೆ ಕುಸಿತದಿಂದ ರಕ್ಷಣೆ ಪಡೆಯಲು ಈ ಪದ್ಧತಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಿಶ್ವ ಐವಿಎಫ್ ದಿನದ ಅಂಗವಾಗಿ ಮಾತನಾಡಿದ ಅವರು, ಅಂಡಾಣು ಸಂರಕ್ಷಣೆ (ಎಗ್ ಫ್ರೀಜಿಂಗ್) ಎಂಬುದು ಮಹಿಳೆಯ ಅಂಡಾಣುಗಳನ್ನು ಹೊರ ತೆಗೆದು ಸಂರಕ್ಷಿಸಿಡುವ ಪ್ರಕ್ರಿಯೆಯಾಗಿದೆ. ವಿಟ್ರಿಫಿಕೇಶನ್ ಎಂಬ ತಂತ್ರವನ್ನು ಬಳಸಿಕೊಂಡು ಅವುಗಳನ್ನು ಸಂರಕ್ಷಣೆ ಮಾಡುವುದು ಮತ್ತು ಭವಿಷ್ಯದ ಬಳಕೆಗಾಗಿ ಸಂಗ್ರಹ ಮಾಡುವುದಾಗಿದೆ. ಇದು ಮಹಿಳೆಯರು ತಡವಾಗಿ ಮಕ್ಕಳನ್ನು ಪಡೆಯುವುದಕ್ಕೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.
ಖ್ಯಾತ ಪ್ರಸೂತಿ ತಜ್ಞೆ, ಸ್ತ್ರೀರೋಗ ತಜ್ಞೆ, ಲ್ಯಾಪರೋಸ್ಕೋಪಿಕ್ ಸರ್ಜನ್ ಮತ್ತು ಐವಿಎಫ್ ತಜ್ಞೆಯಾಗಿರುವ ಡಾ.ವಿದ್ಯಾ ವಿ ಭಟ್ ಅವರು, ಕಳೆದ ಐದು ವರ್ಷಗಳಲ್ಲಿ ಅಂಡಾಣು ಸಂರಕ್ಷಣೆ ಬಗ್ಗೆ ವಿಚಾರಣೆ ಮಾಡುವ ಅಥವಾ ಈ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವ ಮಹಿಳೆಯರ ಸಂಖ್ಯೆಯಲ್ಲಿ ಶೇ.20-25 ರಷ್ಟು ಹೆಚ್ಚಳ ಕಂಡುಬಂದಿದೆ ಎಂದರು.
ಇದೇ ಅವಧಿಯಲ್ಲಿ ನಮಲ್ಲಿ ಇಂತಹ ಪ್ರಕರಣಗಳು ದ್ವಿಗುಣಗೊಂಡಿವೆ. ಮಹಿಳೆಯರು ತಮ ಅಂಡಾಣುಗಳನ್ನು ಸಂರಕ್ಷಣೆ ಮಾಡುವುದು ತಕ್ಷಣದ ವೈದ್ಯಕೀಯ ಅಗತ್ಯತೆಯಿಂದಲ್ಲ. ಇದರ ಬದಲಿಗೆ ಭವಿಷ್ಯಕ್ಕಾಗಿ ಅಂಡಾಣುಗಳನ್ನು ಸಂರಕ್ಷಣೆ ಮಾಡಿಟ್ಟುಕೊಳ್ಳುವ ಆಯ್ಕೆಗೆ ಮೊರೆ ಹೋಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದಕ್ಕೆ ಪ್ರಮುಖ ಕಾರಣ ಮಹಿಳೆಯರು ತಮ ವೃತ್ತಿಯ ಬೆಳವಣಿಗೆ ಮೇಲೆ ತಮ ಗಮನವನ್ನು ಕೇಂದ್ರೀಕರಿಸಿರುವುದು, ವಿಳಂಬವಾದ ಮದುವೆ ಅಥವಾ ಸರಿಯಾದ ಸಂಗಾತಿಗಾಗಿ ಕಾಯುವುದಾಗಿದೆ ಎಂದು ವಿವರಿಸಿದರು.
ಭಾರತದಲ್ಲಿ ಅಂಡಾಣು ಸಂರಕ್ಷಣೆಯು ಇನ್ನೂ ಒಂದು ಪ್ರೀಮಿಯಂ ವಿಧಾನವೆಂದು ಗ್ರಹಿಸಲಾಗುತ್ತಿದೆ. ತಂತ್ರಜ್ಞಾನವು ಹೆಚ್ಚು ಹೆಚ್ಚು ಮುಖ್ಯವಾಹಿನಿಗೆ ಬರುತ್ತಿದ್ದಂತೆ ವೆಚ್ಚಗಳು ಮತ್ತಷ್ಟು ಕಡಿಮೆಯಾಗುತ್ತವೆ. ಹೀಗಾಗಿ ಈ ಅಂಡಾಣು ಸಂರಕ್ಷಣೆಯು ಹೆಚ್ಚು ಹೆಚ್ಚು ಮಹಿಳೆಯರಿಗೆ ಒಂದು ಆಯ್ಕೆಯಾಗಿದೆ ಎಂದು ಡಾ.ವಿದ್ಯಾ ವಿ.ಭಟ್ ಅಭಿಪ್ರಾಯಪಟ್ಟರು.