ಮುಂಬೈ,ನ.26- ಮಹಾರಾಷ್ಟ್ರ ವಿಧಾನಸಭೆಯ ಅವಧಿ ಇಂದಿಗೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮುಂಬೈನಲ್ಲಿರುವ ರಾಜಭವನಕ್ಕೆ ತೆರಳಿದ ಏಕ್‌ನಾಥ್ ಶಿಂಧೆ ಅವರು ತಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದು, ಈ ವೇಳೆ ಡಿಸಿಎಂಗಳಾದ ದೇವೇಂದ್ರ ಫಡ್ನವೀಸ್ ಹಾಗೂ ಅಜಿತ್ ಪವಾರ್ ಮತ್ತಿರರು ಹಾಜರಿದ್ದರು.
ರಾಜ್ಯಪಾಲರು ಏಕ್‌ನಾಥ್ ಶಿಂಧೆ ಅವರ ರಾಜೀನಾಮೆಯನು ಅಂಗೀಕಾರ ಮಾಡಿದ್ದಾರೆ. ಸದ್ಯ ಅವರನ್ನು ಮುಂದಿನ ಸರ್ಕಾರ ರಚನೆಯಾಗುವವರೆಗೂ ಹಂಗಾಮಿ ಸಿಎಂ ಆಗಿ ಮುಂದುವರೆಯಲು ಸೂಚಿಸಲಾಗಿದೆ. 2022ರಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ ಮಹಾಯತಿ ಮೈತ್ರಿಕೂಟದ ಸರ್ಕಾರ ರಚನೆಯಾಗಿತ್ತು. ಆಗ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದರು.
ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಏಕನಾಥ್ ಶಿಂಧೆ ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಅವರ ಬೆಂಬಲಿಗರು, ಅಭಿಮಾನಿಗಳು ದೇವರ ಮೊರೆ ಹೋಗಿದ್ದು, ರಾಜ್ಯಾದ್ಯಂತ ಇಂದು ಏಕನಾಥ್ ಶಿಂಧೆ ಪರವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದ್ದಾರೆ.2022ರಲ್ಲಿ ಬಿಜೆಪಿ ನೇತೃತ್ವದಲ್ಲಿ ಮಹಾಯುತಿ ಮೈತ್ರಿಕೂಟದ ಸರ್ಕಾರ ರಚನೆಗೊಂಡಿತು.
ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು ಏಕನಾಥ್ ಶಿಂಧೆಗೆ ಬಿಟ್ಟುಕೊಟ್ಟಿತ್ತು. ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್, ಎನ್‌ಸಿಪಿ ನಾಯಕ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೊಪ್ರಿ-ಪಂಚಖಾಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. 1,59,060 ಮತಗಳನ್ನು ಪಡೆದು, 1,20,717 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಎದುರಾಳಿಯಾಗಿದ್ದ ಶಿವಸೇನೆ (ಉದ್ಧವ್ ಠಾಕ್ರೆ ಬಣ)ಯ ಕೇದಾರ್ ದಿಘೆ 38,343 ಮತಗಳನ್ನು ಪಡೆದು ಸೋತಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದ ಮನೋಜ್ ಶಿಂಧೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಅವರು ಕೇವಲ 1,653 ಮತ ಪಡೆದು ಸೋಲು ಕಂಡರು.
2024ರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದೇ ಮಹಾಯುತಿ ಮೈತ್ರಿಕೂಟ ಚುನಾವಣೆ ಎದುರಿಸಿತ್ತು. ಮೈತ್ರಿಕೂಟದಲ್ಲಿ ಹೆಚ್ಚು ಸೀಟು ಗೆದ್ದ ಪಕ್ಷಕ್ಕೆ ಮುಖ್ಯಮಂತ್ರಿ ಹುದ್ದೆ ಎಂಬ ತೀರ್ಮಾನವಾಗಿತ್ತು. ಚುನಾವಣೆಯಲ್ಲಿ ಬಿಜೆಪಿ 132 ಸೀಟುಗಳಲ್ಲಿ ಗೆದ್ದಿದ್ದು, ಮುಖ್ಯಮಂತ್ರಿ ಹುದ್ದೆ ಈ ಬಾರಿ ಬಿಜೆಪಿ ಪಾಲಾಗುವುದು ಖಚಿತವಾಗಿದೆ.
ಈಗಾಗಲೇ ಹೊಸದಾಗಿ ಆಯ್ಕೆಯಾದ ಶಾಸಕರ ಜೊತೆ ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸಭೆಯನ್ನು ನಡೆಸಿದೆ. ಮಹಾಯುತಿ ಸರ್ಕಾರ ರಚನೆ ಬಗ್ಗೆ ಮಾತುಕತೆ ನಡೆಸಿದೆ. ಆದರೆ ಪ್ರಮುಖ ಪಕ್ಷವಾದ ಬಿಜೆಪಿ ಮುಖ್ಯಮಂತ್ರಿ ಹುದ್ದೆಯ ಕುತೂಹಲವನ್ನು ಇನ್ನೂ ಸಹ ಹಾಗೆಯೇ ಉಳಿಸಿದೆ. ದೇವೇಂದ್ರ ಫಡ್ನವೀಸ್ ಮತ್ತೊಮೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ಅಧಿಕೃತವಾಗಿ ಘೋಷಣೆಯಾಗಿಲ್ಲ.
ರಾಜ್ಯದಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭಗೊಂಡಿದೆ. ಚುನಾವಣೆಯಲ್ಲಿ ಬಿಜೆಪಿ 132 ಸೀಟುಗಳಲ್ಲಿ ಗೆದ್ದು ಅತಿ ದೊಡ್ಡ ಪಕ್ಷವಾಗಿದೆ. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145. ಬಿಜೆಪಿ ಮಹಾಯುತಿ ಮೈತ್ರಿಕೂಟದ ನೆರವಿನಿಂದ ಮತ್ತೊಮೆ ಸರ್ಕಾರ ರಚಿಸಲಿದೆ. ಮಹಾಯತಿ ಮೈತ್ರಿಕೂಟದ ಶಾಸಕರ ಬಲ 230. ಆದರೆ ಮುಖ್ಯಮಂತ್ರಿ ಯಾರು ಎಂಬ ಗುಟ್ಟನ್ನು ಬಿಜೆಪಿ ಇನ್ನೂ ಬಿಟ್ಟುಕೊಟ್ಟಿಲ್ಲ. ಸರ್ಕಾರದ ರಚನೆ ಯಾವಾಗ ಎಂಬುದನ್ನು ಸ್ಪಷ್ಟವಾಗಿ ಹೇಳಲು ಯಾರು ತಯಾರಿಲ್ಲ. ಇದಕ್ಕೆ ಕಾರಣ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಈ ವಿಚಾರದಲ್ಲಿ ಒಮತಾಭಿಪ್ರಾಯಕ್ಕೆ ಬರಲು ಬಿಜೆಪಿ-ಶಿಂಧೆ ಸೇನೆ-ಅಜಿತ್ ಪವಾರ್ ಎನ್‌ಸಿಪಿ ಇನ್ನಿಲ್ಲದ ಕಸರತ್ತು ನಡೆಸಿವೆ. ಮಹಾಯುತಿ ಭರ್ಜರಿ ಗೆಲುವಿನಲ್ಲಿ ಫಡ್ನವೀಸ್ ಪಾತ್ರ ಪ್ರಧಾನವಾದುದು ಎನ್ನುತ್ತಿರುವ ಬಿಜೆಪಿ ಅವರನ್ನೇ ಸಿಎಂ ಮಾಡಬೇಕು ಎಂದು ಪಟ್ಟು ಹಿಡಿದು ಕುಳಿತಿದೆ. ಆರೆಸ್‌ಎಸ್ ಸಹ ಫಡ್ನವೀಸ್ ಅವರ ಪರವಾಗಿ ಬ್ಯಾಟ್ ಬೀಸಿದೆ. ಆದರೆ ಹಾಲಿ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ.
ಲಾಡ್ಲಿ ಬೆಹನ್ ಯೋಜನೆ ತಂದಿದ್ದು ಶಿಂಧೆ, ಸರ್ಕಾರದ ಯೋಜನೆಗಳು ಈ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿವೆ. ಹೀಗಾಗಿ ಮೈತ್ರಿ ಧರ್ಮದ ಅನುಸಾರ ಶಿಂಧೆ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು ಎನ್ನುತ್ತಿದೆ.
ಇನ್ನೊಂದು ಕಡೆ ಸಿಎಂ ರೇಸ್‌ನಲ್ಲಿ ಕಾಣಿಸಿಕೊಳ್ಳದ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಫಡ್ನವೀಸ್ ಸಿಎಂ ಆಗುವುದರ ಪರವಾಗಿದೆ. ಹೀಗಾಗಿ ಮಹಾಯುತಿಯಲ್ಲಿ ಚೌಕಾಶಿ ವ್ಯವಹಾರ ಈಗ ದೆಹಲಿಗೆ ಶಿಫ್‌್ಟ ಆಗಿದೆ. ಸಿಎಂ ಆಯ್ಕೆಗೆ ಇನ್ನೂ ಎರಡು ದಿನದ ನಂತರವೇ ಪ್ರಮಾಣ ವಚನ ಸ್ವೀಕಾರ ದಿನಾಂಕ ನಿಗದಿ ಆಗಲಿದೆ ಎನ್ನಲಾಗುತ್ತಿದೆ.