ಬೆಂಗಳೂರು, ಫೆ.26- ಹಣ್ಣು ಕೊಡುವ ನೆಪದಲ್ಲಿ ವೃದ್ಧ ದಂಪತಿಯ ಮನೆಗೆ ನುಗ್ಗಿದ ದರೋಡೆಕೋರರು ದಂಪತಿಯ ಕೈಕಾಲು ಕಟ್ಟಿ ಶೌಚಾಲಯದಲ್ಲಿ ಕೂಡಿ ಹಾಕಿ ಹಣ, ಆಭರಣ ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಿಂಡ್ಲು ರಸ್ತೆಯ ಬಿ.ಕೆ.ಲೇಔಟ್‌ನಲ್ಲಿ ಚಂದ್ರಶೇಖರ್(67) ದಂಪತಿ ವಾಸವಿದ್ದಾರೆ. ಇವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿದೆ. ಮನೆಯಲ್ಲಿ ದಂಪತಿ ಮಾತ್ರ ವಾಸವಿದ್ದಾರೆ. ಕಳೆದ 15ರಂದು ಸಂಜೆ ಮೂವರು ದರೋಡೆಕೋರರು ಇವರ ಮನೆ ಬಳಿ ಬಂದು ನಾವು ವಯಸ್ಸಾದವರಿಗೆ ಹಣ್ಣು ಕೊಡುತ್ತಿದ್ದೇವೆ ಎಂದು ಹೇಳಿ ಬಾಗಿಲು ತೆರೆಸಿದ್ದಾರೆ.
ಚಂದ್ರಶೇಖರ್ ಅವರು ಬಾಗಿಲು ತೆರೆಯುತ್ತಿದ್ದಂತೆ ಈ ಮೂವರು ದರೋಡೆಕೋರರು ಏಕಾಏಕಿ ಒಳನುಗ್ಗಿ ವೃದ್ಧ ದಂಪತಿಯ ಕೈಕಾಲು ಕಟ್ಟಿ ಶೌಚಾಲಯದಲ್ಲಿ ಕೂಡಿ ಹಾಕಿ ಕೈಗೆ ಸಿಕ್ಕಿದ ಹಣ, ಆಭರಣಗಳನ್ನು ದರೋಡೆ ಮಾಡಿ ಕೊಂಡು ಪರಾರಿಯಾಗಿದ್ದಾರೆ.
ಕೆಲ ಸಮಯದ ಬಳಿಕ ಕಟ್ಟಿದ್ದ ಹಗ್ಗ ಬಿಡಿಸಿಕೊಂಡು ದಂಪತಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.