ಬೆಂಗಳೂರು,ಜೂ.25- ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ನಿಗದಿತ ಅವಽಯಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲು ಅಂತಿಮಗೊಳಿಸದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಿದೆ.
ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ನಿನ್ನೆ ವಿಚಾರಣೆ ನಡೆಸಿದ್ದು, ಸರ್ಕಾರ ತನ್ನ ವಾದ ಮಂಡಿಸಲು ಕಾಲಾವಕಾಶ ಕೋರಿದೆ. ಅದರಂತೆ ಹೈಕೋರ್ಟ್ ಅರ್ಜಿ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ.
ಅರ್ಜಿ ವಿಚಾರಣೆ ವೇಳೆ ರಾಜ್ಯ ಚುನಾವಣಾ ಆಯೋಗದ ಪರವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್.ಣೀಂದ್ರ, ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯಂತೆ ಸರ್ಕಾರ ನಡೆದುಕೊಂಡಿಲ್ಲ. ಆದ್ದರಿಂದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವಕೇಟ್ ಜನರಲ್ ಪ್ರತಿಮಾ ಹೊನ್ನಾಪುರ, ಈ ವಿಚಾರವಾಗಿ ಅಡ್ವಕೇಟ್ ಜನರಲ್ ವಾದ ಮಂಡಿಸಲಿದ್ದಾರೆ. ಹಾಗಾಗಿ, ಕಾಲಾವಕಾಶ ನೀಡಬೇಕು ಎಂದು ಕೋರಿದರು. ಮನವಿ ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಜು.11ಕ್ಕೆ ಮುಂದೂಡಿತು.
ಭರವಸೆ ನೀಡಿದ್ದ ಸರ್ಕಾರ:
ಈ ಹಿಂದೆ ಶೀಘ್ರವಾಗಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದ 30 ಜಿಲ್ಲೆಗಳ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆಯನ್ನು ಡಿಸೆಂಬರ್ 19ರಂದು ಪ್ರಕಟಿಸಲಾಗುವುದು. ಮುಂದಿನ ಏಳು ದಿನಗಳಲ್ಲಿ ಕೊಡಗು ಜಿಲ್ಲೆಯ ಕ್ಷೇತ್ರ ಪುನರ್ ವಿಂಗಡಣೆ ಅಧಿಸೂಚನೆ ಪ್ರಕಟಿಸಲಾಗುವುದು. ಅದಾದ ಏಳು ದಿನಗಳಲ್ಲಿ ಮೀಸಲಾತಿ ಕರಡು ಅಽಸೂಚನೆ ಹೊರಡಿಸಲಾಗುವುದು ಎಂದು ಹೈಕೋರ್ಟ್‌ಗೆ ಭರವಸೆ ನೀಡಿತ್ತು.
ಅಲ್ಲದೇ, ಮೀಸಲು ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶ ನೀಡಲಾಗುವುದು. ಅದಾದ ಎರಡು ವಾರಗಳಲ್ಲಿ ಮೀಸಲಾತಿ ಅಂತಿಮಗೊಳಿಸಲಾಗುವುದು ಎಂದು ರಾಜ್ಯಸರ್ಕಾರ 2023 ರ ಡಿ.19 ರಂದು ಉಚ್ಛ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು. ಭರವಸೆಯಂತೆ ನಡೆದುಕೊಳ್ಳದಿದ್ದರೆ ಚುನಾವಣಾ ಆಯೋಗ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಹೇಳಿತ್ತು.