ಬೆಂಗಳೂರು,ಆ.11- ತಾವು ಜನಪ್ರತಿನಿಧಿಯಾಗಿದ್ದು, ನಮಗೆ ನೋಟೀಸ್ ನೀಡಲು ಚುನಾವಣಾ ಆಯೋಗ ಯಾರು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರಶ್ನಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯೋಗಕ್ಕೆ ನಮಗೆ ನೋಟೀಸ್ ನೀಡುವ ಹಕ್ಕು ಮತ್ತು ಅಧಿಕಾರಗಳಿಲ್ಲ. ಬದಲಾಗಿ ನಾವು ಚುನಾವಣಾ ಆಯೋಗಕ್ಕೆ ನೋಟೀಸ್ ನೀಡುವ ಅಧಿಕಾರ ಹೊಂದಿದ್ದೇವೆ. ಅದರಂತೆ ನೋಟೀಸ್ ನೀಡಿದ್ದೇವೆ ಎಂದಿದ್ದಾರೆ.
ನಾವು ಪ್ರಜಾಪ್ರಭುತ್ವದಲ್ಲಿ ಚುನಾವಣೆಯಲ್ಲಿ ಗೆದ್ದಿದ್ದೇವೆ. ಆಯೋಗದವರು ನ್ಯಾಯಬದ್ಧವಾಗಿ ಚುನಾವಣೆ ನಡೆಸಬೇಕು. ಅದನ್ನು ಬಿಟ್ಟು ನಮಗೆ ನೋಟೀಸ್ ನೀಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣಾ ಆಯೋಗದ ನೋಟೀಸ್‌ಗೆ ಪ್ರತಿಕ್ರಿಯಿಸಿ, ದಾಖಲಾತಿಗಳನ್ನು ನೀಡುವಂತೆ ಆಯೋಗ ನೋಟೀಸ್ ನೀಡಿದೆ. ಅದನ್ನೇ ದೊಡ್ಡದು ಮಾಡುವ ಅಗತ್ಯ ಇಲ್ಲ ಎಂದು ಹೇಳಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ಅಕ್ರಮಗಳ ಬಗ್ಗೆ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೆಲ ದಾಖಲಾತಿಗಳನ್ನು ಬಿಡುಗಡೆ ಮಾಡಿ ಗಂಭೀರ ಆರೋಪ ಮಾಡಿದರು. ತದನಂತರ ಇದೇ 8 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆದಿತ್ತು.
ಆ ಬಳಿಕ ಡಿಕೆಶಿ, ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಮತ್ತಿತರರು ಸಹಿ ಮಾಡಿರುವ ದೂರನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಮೂಲಕ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ.
ದೂರಿನಲ್ಲಿ ಪ್ರಸ್ತಾಪಿಸಿರುವ ಮಾಹಿತಿಗಳು ಸತ್ಯಾಂಶದಿಂದ ಕೂಡಿವೆ ಎಂದು ದೃಢೀಕರಣ ಪತ್ರ ಹಾಗೂ ಪ್ರಮಾಣ ಮಾಡುವಂತೆ ಚುನಾವಣಾ ಆಯೋಗ ದೂರುದಾರರಿಗೆ ನಿರ್ದೇಶನ ನೀಡಿದೆ. ಇದಕ್ಕೆ ಡಿ.ಕೆ.ಶಿವಕುಮಾರ್ ಅವರು ಕೆಂಡಾಮಂಡಲವಾಗಿದ್ದು, ನಮಗೆ ನೋಟೀಸ್ ನೀಡಲು ಚುನಾವಣಾ ಆಯೋಗಕ್ಕೆ ಅಧಿಕಾರ ಇಲ್ಲ. ಬದಲಾಗಿ ನಮಗೆ ಚುನಾವಣಾ ಆಯೋಗಕ್ಕೆ ನೋಟೀಸ್ ನೀಡುವ ಅಧಿಕಾರ ಇದೆ ಎಂದು ಪ್ರತಿಕ್ರಿಯಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.