ಬೆಂಗಳೂರು, ಸೆ.19- ಕಲಬುರಗಿ ಜಿಲ್ಲೆಯ ಅಳಂದ ಕ್ಷೇತ್ರ ಮತಗಳ್ಳತನದ ಬಗ್ಗೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗದಿಂದ ಸಮರ್ಪಕ ಸ್ಪಷ್ಟನೆ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಆಕ್ಷೇಪಿಸಿದ್ದು, ಸಿಐಡಿ ತನಿಖೆಗೆ ಅಗತ್ಯವಾದ ಮಾಹಿತಿ ನೀಡದೆ ಸುಳ್ಳು ಹೇಳಲಾಗುತ್ತಿದೆ ಎಂದು ಕಿಡಿಕಾರಿದೆ.
ಕಾಂಗ್ರೆಸ್ ಕಚೇರಿಯಲ್ಲಿಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್‌ಖರ್ಗೆ, ಅಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ಜಂಟಿ ಸುದ್ದಿಗೋಷ್ಠಿಯಲ್ಲಿ ರಾಹುಲ್‌ಗಾಂಧಿ ಆರೋಪಕ್ಕೆ ಪೂರಕ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಆರಂಭದಲ್ಲಿ ಮಾತನಾಡಿದ ಬಿ.ಆರ್. ಪಾಟೀಲ್ ಅವರು, 2023ರ ವಿಧಾನಸಭೆ ಚುನಾವಣೆಗೂ ಮುನ್ನ ತಮ ಪಕ್ಷದ ಕಾರ್ಯಕರ್ತ ವಿಜಯ್‌ಕುಮಾರ್ ಕರೆ ಮಾಡಿ, ನನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಡಿಲಿಟ್ ಮಾಡಲಾಗಿದೆ ಎಂದು ಬಿಎಲ್‌ಓ ಹೇಳಿರುವುದಾಗಿ ತಿಳಿಸಿದರು. ಆತಂಕಗೊಂಡ ತಾವು ಪರಿಶೀಲಿಸಿದಾಗ 6018 ಹೆಸರುಗಳ ಡಿಲಿಟ್‌ಗೆ ಅರ್ಜಿ ಬಂದಿರುವುದು ಪತ್ತೆಯಾಯಿತು.
ಈ ಬಗ್ಗೆ ಕಲಬುರಗಿ ಜಿಲ್ಲಾಧಿಕಾರಿ, ಅಳಂದ ತಹಶೀಲ್ದಾರ್, ರಾಜ್ಯ ಮುಖ್ಯಚುನಾವಣಾಧಿಕಾರಿ, ಕೇಂದ್ರ ಮುಖ್ಯ ಚುನಾವಣಾಧಿಕಾರಿಗಳಿಗೆ ಹಂತಹಂತವಾಗಿ ದೂರು ನೀಡಲಾಯಿತು. ಆಗ ಹೆಸರು ಡಿಲಿಟ್ ಮಾಡುವ ಪ್ರಕ್ರಿಯೆ ನಿಲ್ಲಿಸಿದ್ದರು. ಇಲ್ಲದೇ ಹೋದರೆ ಹೆಸರುಗಳು ಡಿಲಿಟ್ ಆಗಿ ನಾನು ಸೋಲುತ್ತಿದ್ದೆ ಎಂದು ಹೇಳಿದರು.
ನಿವೃತ ಶಿಕ್ಷಕ ಸೂರ್ಯಕಾಂತ್ ಗೋವಿಂದ್ ಮತ್ತು ಗೋದಬಾಯಿ ಎಂಬ ಅನಕ್ಷರಸ್ತ ಮಹಿಳೆ ಹೆರಿನಲ್ಲಿ ತಲಾ 12 ಜನರ ಹೆಸರು ಡಿಲಿಟ್ ಮಾಡಲು ಫಾರಂ ನಂ-7 ಸಲ್ಲಿಕೆಯಾಗಿವೆ. ಇದು ಅರ್ಜಿ ಸಲ್ಲಿಸಿದವರಿಗೂ ಗೊತ್ತಿಲ್ಲ, ಹೆಸರು ಡಿಲಿಟ್ ಆಗಬೇಕಾದವರಿಗೂ ಮಾಹಿತಿ ಇಲ್ಲ ಎಂದು ವಿವರಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಮತದಾರರ ಹೆಸರು ಡಿಲಿಟ್ ಮಾಡಿರುವುದನ್ನು ತಾನೇ ಪತ್ತೆ ಹಚ್ಚಿದ್ದಾಗಿ ಚುನಾವಣಾ ಆಯೋಗ ಹೇಳಿಕೊಳ್ಳುತ್ತಿದೆ, ಇದು ಸುಳ್ಳು. ಬಿ.ಆರ್. ಪಾಟೀಲ್ ಮತ್ತು ನಾವು ದೂರು ನೀಡಿದ್ದನ್ನು ಆಧರಿಸಿ ಅಳಂದ ಕ್ಷೇತ್ರದ ಚುನಾವಣಾ ಆಧಿಕಾರಿಯಾಗಿದ್ದ ಕಲಬುರಗಿ ಉಪವಿಭಾಗಾಧಿಕಾರಿ ಮಮತಾ ಅವರು ಪೊಲೀಸರಿಗೆ ದೂರು ನೀಡಿದ್ದರು.
ಎಫ್‌ಐಆರ್‌ನಲ್ಲಿ ಮಮತಾ ಅವರು ಬಿ.ಆರ್.ಪಾಟೀಲ್ ಅವರ ಮಾಹಿತಿ ಅನುಸಾರ ದೂರು ನೀಡಿದ್ದಾರೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಸಚಿವರು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಮತದಾರರ ಹೆಸರುಗಳನ್ನು ಡಿಲಿಟ್ ಮಾಡಲು 6118 ಸಲ್ಲಿಕೆಯಾಗಿದ್ದವು. ಅದರ ತನಿಖೆಗೆ ಆಯೋಗ ಸಹಕರಿಸಿಲ್ಲ. ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದಾಗ ಫಾರಂ ನಂ-7 ಜೊತೆಯಲ್ಲಿ ನೀಡಲಾಗಿರುವ ಮೊಬೈಲ್ ನಂಬರ್‌ಗಳು ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಗೆ ಸೇರಿದ್ದಾಗಿವೆ ಎಂದು ವಿವರಿಸಿದರು.
2023ರ ಫೆ. 21ರಂದೇ ಪೊಲೀಸರ ತನಿಖೆಗೆ ಎಲ್ಲಾ ರೀತಿಯ ದಾಖಲೆಗಳ್ನು ಒದಗಿಸಿರುವುದಾಗಿ ಆಯೋಗ ನಿನ್ನೆ ಹೇಳಿಕೆ ನೀಡಿದೆ ಇದು ಸಂಪೂರ್ಣ ಸುಳ್ಳು. ಮಾಹಿತಿ ನೀಡಿದ್ದೇ ಆಗಿದ್ದರೆ ಇತ್ತೀಚೆಗೆ 2025ರ ಫೆ.4 ರಂದು ರಾಜ್ಯ ಚುನಾವಣಾ ಮುಖ್ಯಾಧಿಕಾರಿಗಳ ಕಚೇರಿಯ ಜಂಟಿ ಆಯುಕ್ತರು, ಕೇಂದ್ರ ಮುಖ್ಯಚುನಾವಣಾ ಆಯುಕ್ತರಿಗೆ ಪತ್ರ ಬರೆದು, ಅಳಂದ ಕ್ಷೇತ್ರದ ಪ್ರಕರಣದಲ್ಲಿ ತನಿಖಾಧಿಕಾರಿ ಕೇಳಿರುವ ಮಾಹಿತಿ ಒದಗಿಸುವಂತೆ ಮನವಿ ಮಾಡಿದ್ದಾರೆ. ಅದರ ಜೊತೆಗೆ ಈವರೆಗೂ ನಡೆದಿರುವ ಎಲ್ಲಾ ಪತ್ರವ್ಯವಹಾರಗಳ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ ಎಂದು ಸಚಿವರು ತಿಳಿಸಿದ್ದು, ಈ ಪತ್ರವನ್ನು ಬಿಡುಗಡೆ ಮಾಡಿದರು.
ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಓಟಿಪಿ ಮೂಲ, ಬಳಕೆ ಮಾಡಲಾಗಿರುವ ಐಪಿ ವಿಳಾಸ ಮತ್ತು ಸಲಕರಣೆಗಳ ವಿಳಾಸ ಸೇರಿದಂತೆ 5 ಪ್ರಮುಖ ಅಂಶಗಳ ಮಾಹಿತಿಯನ್ನು ಕೇಳಿದ್ದಾರೆ. ಇದ್ಯಾವುದನ್ನು ಒದಗಿಸದೆ ಆಯೋಗ ತಪ್ಪು ಮಾಡಿದರವರನ್ನು ರಕ್ಷಿಸುವ ಯತ್ನ ನಡೆಸುತ್ತಿದೆ ಎಂದು ದೂರಿದರು.
ರಾಹುಲ್‌ಗಾಂಧಿ ಆನ್‌ಲೈನ್‌ನಲ್ಲಿ ಹೆಸರುಗಳು ಡಿಲಿಟ್ ಆಗಿವೆ ಎಂದು ಎಲ್ಲಿಯೂ ಹೇಳಲಿಲ್ಲ. ಆಯೋಗ ಈ ರೀತಿ ದಾರಿ ತಪ್ಪಿಸುವುದನ್ನು ಏಕೆ ಮಾಡುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಆಯೋಗವನ್ನು ಪ್ರಶ್ನೆ ಮಾಡಿದರೆ ಬಿಜೆಪಿಯ ಕೇಂದ್ರ ಸಚಿವರು, ಸಂಸದರು ಏಕೆ ಉತ್ತರ ನೀಡುತ್ತಿದ್ದಾರೆ. ಇವರೆಲ್ಲಾ ಚುನಾವಣಾ ಆಯೋಗದ ವಕ್ತಾರಿಕೆಯ ಹೊರ ಗುತ್ತಿಗೆ ಕೆಲಸ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಅಕ್ರಮ ನಡೆದಾಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳಿದ್ದವು. ಆಯೋಗ ಮತ್ತು ಜಿಲ್ಲಾಡಳಿತದಲ್ಲಿ ಬಿಜೆಪಿ ಸರ್ಕಾರ ನಿಯೋಜಿಸಿದ್ದ ಅಧಿಕಾರಿಗಳೇ ಕೆಲಸಮಾಡುತ್ತಿದ್ದರು. ಅವರದೇ ಅಧಿಕಾರಿ ಪ್ರಾಥಮಿಕ ವಿಚಾರ ನಡೆಸಿ, ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಾಗಿದೆ. ಈ ಕನಿಷ್ಠ ಜ್ಞಾನವೂ ಇಲ್ಲದ್ದಂತೆ ಬಿಜೆಪಿಯವರು ರಾಹುಲ್‌ಗಾಂಧಿಯವರ ಸಾಮಾನ್ಯ ಪ್ರಜ್ಞೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.