Saturday, August 9, 2025
Homeರಾಜ್ಯಚುನಾವಣಾ ಆಯೋಗ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ : ಎಚ್‌.ಕೆ. ಪಾಟೀಲ್‌

ಚುನಾವಣಾ ಆಯೋಗ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ : ಎಚ್‌.ಕೆ. ಪಾಟೀಲ್‌

Election Commission is trying to evade responsibility: H.K. Patil

ಬೆಂಗಳೂರು, ಆ.9- ಚುನಾವಣೆಯಲ್ಲಿ ಬಳಕೆ ಮಾಡುವ ಮತ ಯಂತ್ರಗಳು ಮತ್ತು ಮತದಾರರ ಪಟ್ಟಿಯಲ್ಲಿನ ಲೋಪಗಳ ಬಗ್ಗೆ ಕಳೆದ ಮೂರು ವರ್ಷಗಳ ಹಿಂದೆ ಪ್ರಸ್ತಾಪಿಸಲಾಗಿತ್ತು. ಆಯೋಗ ಅಂದಿನಿಂದಲೂ ತನಿಖೆ ನಡೆಸುವ ಬದಲಾಗಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಆಕ್ಷೇಪಿಸಿದ್ದಾರೆ.

ಈ ಹಿಂದೆ 2022ರಲ್ಲಿ ಆಗಿನ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಅವರಿಗೆ ತಾವು ಬರೆದಿದ್ದ ಪತ್ರ ಹಾಗೂ ಅದರ ನಂತರದ ಬೆಳವಣಿಗೆಗಳನ್ನು ವಿವರಿಸಿರುವ ಎಚ್‌.ಕೆ. ಪಾಟೀಲ್‌ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

1998ರಿಂದ 2017ರ ವರೆಗೂ ಕೇಂದ್ರ ಚುನಾವಣಾ ಆಯೋಗ ಎಲೆಕ್ಟ್ರಾನಿಕ್‌ ಮತಯಂತ್ರಗಳ ಖರೀದಿಗೆ ಸಲ್ಲಿಸಿದ್ದ ಪ್ರಸ್ತಾವನೆಗಳು, ಭಾರತೀಯ ಎಲೆಕ್ಟ್ರಾನಿಕ್‌ ಲಿಮಿಟೆಡ್‌ನಿಂದ ಪೂರೈಕೆಯಾಗಿರುವ ಮತ ಯಂತ್ರಗಳ ವಿವರಗಳನ್ನು ಮುಂಬೈನ ಆರ್‌ಟಿಐ ಕಾರ್ಯಕರ್ತ ಮನೋರಂಜನ್‌ ಸಂತೋಷ್‌ ರಾಯ್‌ ಬಹಿರಂಗಪಡಿಸಿದರು. ಅದರ ಆಧಾರದ ಮೇಲೆ 15 ವರ್ಷಗಳಲ್ಲಿ 9 ಲಕ್ಷಕ್ಕೂ ಅಧಿಕ ಮತಯಂತ್ರಗಳ ಪೂರೈಕೆಯಲ್ಲಿ ವ್ಯತ್ಯಾಸಗಳಾಗಿವೆ. ಈ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ತಾವು ಆಗಿನ ವಿಧಾನಸಭಾ ಅಧ್ಯಕ್ಷ ಕಾಗೇರಿ ಅವರಿಗೆ ಪತ್ರ ಬರೆದಿರುವುದನ್ನು ಸರಿಸಿಕೊಂಡಿದ್ದಾರೆ.

ಆ ಪತ್ರವನ್ನು ಉಲ್ಲೇಖಿಸಿ ಚರ್ಚೆಗೆ ಅವಕಾಶ ನೀಡುವ ಕುರಿತಂತೆ ಅಭಿಪ್ರಾಯ ತಿಳಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಸಭಾಧ್ಯಕ್ಷರು ಪತ್ರ ಬರೆದಿದ್ದರು. ಪ್ರತ್ಯುತ್ತರಿಸಿದ ಆಯೋಗ ಚರ್ಚೆಗೆ ಅವಕಾಶ ನಿರಾಕರಿಸಿತ್ತು ಎಂದು ಎಚ್‌.ಕೆ. ಪಾಟೀಲ್‌ ವಿವರಿಸಿದ್ದಾರೆ.

2022ರಲ್ಲಿ ಕಾಗೇರಿಯವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಾಗ, ಪ್ರಮಾಣ ಪತ್ರ ಸಲ್ಲಿಸುವಂತೆ ಕೇಳಿರಲಿಲ್ಲ. ಈಗ ರಾಹುಲ್‌ ಗಾಂಧಿ ಅವರು ದಾಖಲೆಗಳನ್ನು ಬಿಡುಗಡೆ ಮಾಡಿದರೇ ಪ್ರಮಾಣ ಪತ್ರ ಸಲ್ಲಿಸುವಂತೆ ಚುನಾವಣೆ ಆಯೋಗ ಕೇಳುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

ಮುಂದುವರೆದ ಸಚಿವರು, ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಬಗ್ಗೆ ಯಾವುದೇ ನೆಪ ಹೇಳದೆ ಚುನಾವಣಾ ಆಯೋಗ ತಕ್ಷಣವೇ ತನಿಖೆ ನಡೆಸಬೇಕು. ರಾಹುಲ್‌ ಗಾಂಧಿ ಅವರು ಬಿಡುಗಡೆ ಮಾಡಿರುವ ದಾಖಲಾತಿಗಳು ಹಾಗೂ ವೈಜ್ಞಾನಿಕ ವಿಶ್ಲೇಷಣೆಯನ್ನು ಆಧರಿಸಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.

ಸಾಂವಿಧಾನಿಕ ಸಂಸ್ಥೆಯಾದ ಆಯೋಗ ಪಾರದರ್ಶಕ ಹಾಗೂ ತ್ವರಿತವಾಗಿ ಸ್ಪಂದಿಸುವ ಜವಾಬ್ದರಿಯನ್ನು ಹೊಂದಿದೆ. ಅದನ್ನು ಬಿಟ್ಟು ಪ್ರಮಾಣ ಪತ್ರ ಸಲ್ಲಿಸಿ ಎಂದು ರಾಹುಲ್‌ಗಾಂಧಿ ಅವರನ್ನು ಕೇಳುತ್ತಿರುವುದು ರೆಡ್‌ ಟೇಪಿಸಂನ ಜಡತ್ವದ ಸಂಕೇತವಾಗಿದೆ. ಇಂತಹ ನಡವಳಿಕೆಗಳ ಮೂಲಕ ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಪಾವಿತ್ರತೆಯ ರಕ್ಷಣೆಗಾಗಿ ಹೋರಾಟ ಮಾಡುವ ರಾಹುಲ್‌ ಗಾಂಧಿ ಅವರ ಮೂಲಭೂತ ಜವಾಬ್ದಾರಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದಿದ್ದಾರೆ.

ರಾಹುಲ್‌ಗಾಂಧಿ ಅವರು ಬಿಡುಗಡೆ ಮಾಡಿರುವ ದಾಖಲಾತಿಗಳು ಸಾರ್ವಜನಿಕ ವೇದಿಕೆಯಲ್ಲಿವೆ. ವಿಡಿಯೋ ದೃಶ್ಯಾವಳಿಗಳನ್ನು ಸಾರ್ವಜನಿಕಗೊಳಿಸುವುದು ಅಯೋಗದ ಜವಬ್ದಾರಿ. ಲೋಕಸಭೆಯ ವಿರೋಧ ಪಕ್ಷದ ನಾಯಕರಿಂದ ಪ್ರಮಾಣ ಪತ್ರ ಕೇಳುವುದನ್ನು ಬಿಟ್ಟು ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.

2022ರ ಮಾರ್ಚ್‌ 29ರಂದು ತಾವು ಬರೆದಿರುವ ಪತ್ರ ಹಾಗೂ ದಾಖಲಾತಿಗಳನ್ನು ಮರು ಪ್ರಕಟಿಸುವ ಮೂಲಕ ಎಚ್‌.ಕೆ. ಪಾಟೀಲ್‌ ಆರೋಪವನ್ನು ಪುನರುಚ್ಚರಿಸಿದ್ದಾರೆ. ಆಯೋಗದ ಬೇಜವಬ್ದಾರಿ ಪ್ರತಿಕ್ರಿಯೆಗಳು ಪ್ರಜಾಪ್ರಭುತ್ವದ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಅವರು ಟೀಕಿಸಿದ್ದಾರೆ.

RELATED ARTICLES

Latest News