ನವದೆಹಲಿ,ಫೆ.24- ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿ ಒಂದೇ ಕಡೆ ಕೆಲಸ ಮಾಡುತ್ತಿರುವ ಹಾಗೂ ತವರು ಜಿಲ್ಲೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ನಿಯಮವನ್ನು ಗಂಭೀವಾಗಿ ಪರಿಗಣಿಸುವಂತೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ.
ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಸರ್ಕಾರಗಳಿಗೆ ಪತ್ರ ಬರೆದಿರುವ ಕೇಂದ್ರ ಚುನಾವಣಾ ಆಯೋಗ ವರ್ಗಾವಣೆ ನೀತಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಸರ್ಕಾರಿ ಅಧಿಕಾರಿಗಳು ಅದರಲ್ಲೂ ಚುನಾವಣೆಯ ಉಸ್ತುವಾರಿ ಮತ್ತು ಕರ್ತವ್ಯ ನಿರ್ವಹಿಸುತ್ತಿರುವವರು ತವರು ಜಿಲ್ಲೆ ಮತ್ತು ನೆರೆಹೊರೆಯ ಕ್ಷೇತ್ರಗಳಲ್ಲಿ ಕರ್ತವ್ಯದಲ್ಲಿ ಇಲ್ಲದಂತೆ ಎಚ್ಚರಿಕೆ ವಹಿಸಬೇಕು. ಚುನಾವಣಾ ಕ್ಷೇತ್ರ ಮಟ್ಟದ ನಿರ್ವಹಣೆಯಲ್ಲಿ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಂತೆ ತವರು ಅಥವಾ ಅಕ್ಕಪಕ್ಕದ ಜಿಲ್ಲೆಗೆ ಸೇರಿದ ಅಧಿಕಾರಿಗಳ ಪಾತ್ರ ಇಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.
ಮಂಡ್ಯಗೆ ಸುಮಲತಾ, ಬೆಂ.ಗ್ರಾಮಾಂತರಕ್ಕೆ ಡಾ.ಮಂಜುನಾಥ್‌ಗೆ ಬಿಜೆಪಿ ಟಿಕೆಟ್..!
ಎರಡೂ ಕ್ಷೇತ್ರಗಳನ್ನು ಸಂಯುಕ್ತಗೊಳಿಸಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಯಾವುದೇ ಲೋಪಗಳಾಗದಂತೆ ವರ್ಗಾವಣೆ ನೀತಿಯನ್ನು ಅನುಷ್ಠಾನಗೊಳಿಸಬೇಕು. ಅದೇ ಜಿಲ್ಲೆಯ ಅಥವಾ ಅದೇ ಕ್ಷೇತ್ರದ ಅಧಿಕಾರಿಗಳನ್ನು ಕಡ್ಡಾಯವಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬಾರದು. ಲಿಖಿತವಾಗಿ ಮತ್ತು ಕಾರ್ಯಾನುಷ್ಠಾನಾಧರಿತವಾಗಿ ಆಯೋಗದ ವರ್ಗಾವಣೆ ನೀತಿಯನ್ನು ಅನುಸರಿಸಬೇಕು.
ಈ ಹಿಂದೆ ಆಯೋಗದ ಸೂಚನೆಯನ್ನು ಅನುಸರಿಸಿ ನಡೆಸಲಾಗಿರುವ ವರ್ಗಾವಣೆಗೂ ಅನ್ವಯಗೊಳಿಸಲಾಗುತ್ತದೆ. ಕೇಂದ್ರ ಚುನಾವಣಾ ಆಯೋಗ ವರ್ಗಾವಣೆ ನೀತಿಯಲ್ಲಿ ಲೋಪಗಳನ್ನು ಸಹಿಸುವುದಿಲ್ಲ. ರಾಜ್ಯಸರ್ಕಾರಗಳ ಧೋರಣೆಯಿಂದ ಚುನಾವಣೆ ನಿರ್ವಹಣೆಯಲ್ಲಿ ಅಡಚಣೆಯಾಗುವುದನ್ನು ಒಪ್ಪುವುದಿಲ್ಲ. ಇತ್ತೀಚೆಗೆ ನಡೆದ 5 ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಸ್ಮರಿಸುತ್ತದೆ ಎಂದು ಆಯೋಗದ ಜಂಟಿ ನಿರ್ದೇಶಕ ಅಂಜು ಚಂದಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.