Saturday, July 26, 2025
Homeರಾಜ್ಯಚುನಾವಣಾ ಅಕ್ರಮ : ಕಾಂಗ್ರೆಸ್‌‍ ನಾಯಕರ ಆರೋಪಗಳಿಗೆ ಡಿ.ಕೆ.ಸುರೇಶ್‌ ಸಹಮತಿ

ಚುನಾವಣಾ ಅಕ್ರಮ : ಕಾಂಗ್ರೆಸ್‌‍ ನಾಯಕರ ಆರೋಪಗಳಿಗೆ ಡಿ.ಕೆ.ಸುರೇಶ್‌ ಸಹಮತಿ

Election irregularities: D.K. Suresh agrees with Congress leaders' allegations

ಬೆಂಗಳೂರು,ಜು.26– ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಏರುಪೇರುಗಳಾಗಿರುವುದು ಕಂಡುಬರುತ್ತಲೇ ಇದೆ ಎಂದು ಹೇಳುವ ಮೂಲಕ ಮಾಜಿ ಸಂಸದ ಡಿ.ಕೆ.ಸುರೇಶ್‌ ಕಾಂಗ್ರೆಸ್‌‍ನ ನಾಯಕರ ಟೀಕೆಗಳಿಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಗರ ಪ್ರದೇಶಗಳಲ್ಲಿ ಮತದಾರರ ಪಟ್ಟಿಯಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಮಾಡಲಾಗಿದೆ. ಮೊದಲಿನಿಂದಲೂ ಇದು ಕಂಡುಬರುತ್ತಲೇ ಇದೆ ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳಾಗಿದ್ದವು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಹೇಳಿಕೆ ಸೇರಿದಂತೆ ರಾಹುಲ್‌ಗಾಂಧಿ, ಸಿದ್ದರಾಮಯ್ಯ ಎಲ್ಲಾ ನಾಯಕರೂ ಈಗಾಗಲೇ ಆಯೋಗದ ಕಾರ್ಯ ನಿರ್ವಹಣೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ನನ್ನ ಸಹಮತ ಇದೆ. ಅದರ ಹೊರತಾಗಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದರು.

ಯಾವ ಪುರುಷಾರ್ಥಕ್ಕೆ ಕೇಂದ್ರ ಸಚಿವ :
ಪ್ರಹ್ಲಾದ್‌ ಜೋಷಿ ಕೇಂದ್ರ ಸರ್ಕಾರದಲ್ಲಿ ಕಳೆದ 10 ವರ್ಷಗಳಿಂದ ಸಚಿವರಾಗಿದ್ದಾರೆ. ಅವರದೇ ಲೋಕಸಭಾ ಕ್ಷೇತ್ರ ಹುಬ್ಬಳ್ಳಿ-ಧಾರವಾಡಕ್ಕೆ ನೀರು ಕೊಡಲು ಕಳಸಾಬಂಡೂರಿ ಯೋಜನೆಯನ್ನು ರೂಪಿಸಲಾಗಿದೆ. ನಾನು ಪ್ರಹ್ಲಾದ್‌ ಜೋಷಿಯವರನ್ನು ಬಹಳ ಹತ್ತಿರದಿಂದ ಗಮನಿಸಿದ್ದೇನೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌.ಪಾಟೀಲರಿಗೆ ಬಹಳ ಹತ್ತಿರದವರು. ಜೋಷಿ ಮನಸ್ಸು ಮಾಡಿದರೆ ಕಳಸಾ ಬಂಡೂರಿ ಅಣೆಕಟ್ಟಿಗೆ ಅನುಮತಿ ಕೊಡಿಸುವುದು ದೊಡ್ಡ ವಿಷಯವಲ್ಲ. ಆದರೆ ಜೋಷಿಯವರಿಗೆ ಇದು ಬೇಕಾಗಿಲ್ಲ. ಆದರೂ ಜನ ಜೋಷಿಯವರನ್ನೇ ಗೆಲ್ಲಿಸಿಕೊಳ್ಳುತ್ತಾರೆ. ಇದಕ್ಕೆ ನಾವೇನೂ ಮಾಡಲಾಗುವುದಿಲ್ಲ ಎಂದರು.

ಪ್ರಹ್ಲಾದ್‌ ಜೋಷಿಗೆ ರಾಜ್ಯದ ಹಿತ ಬೇಕಾಗಿಲ್ಲ. ಅವರೇ ಅವರ ಕ್ಷೇತ್ರಕ್ಕೆ ಒಂದು ನೀರಾವರಿ ಯೋಜನೆಗೆ ಅನುಮತಿ ಕೊಡಿಸಲಾಗಲಿಲ್ಲ ಎಂದ ಮೇಲೆ ಯಾವ ಕಾರಣಕ್ಕೆ ಸಚಿವರಾಗಿದ್ದಾರೆ ಎಂದು ಪ್ರಶ್ನಿಸಿದರು.

ಗೋವಾ ಸರ್ಕಾರ ಇಲ್ಲಸಲ್ಲದ ನೆಪಗಳನ್ನು ಹುಡುಕಿ ತೊಂದರೆ ನೀಡುತ್ತಲೇ ಇದೆ. ಉತ್ತರ ಕರ್ನಾಟಕ ಭಾಗದ ಜನರಿಗೂ ಕುಡಿಯುವ ನೀರಿನ ಈ ಮಹತ್ವದ ಯೋಜನೆಗೆ ಪೂರಕವಾಗಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಆದರೆ ಗೋವಾದಲ್ಲಿರುವ ಬಿಜೆಪಿ ಸರ್ಕಾರ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವನ್ನು ದುರುಪಯೋಗಪಡಿಸಿಕೊಂಡು ಯೋಜನೆಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕಕ್ಕೆ ನೀರಾವರಿ ಯೋಜನೆಗಳಲ್ಲಿ ಕೇಂದ್ರದಿಂದ ಅನ್ಯಾಯವಾಗುತ್ತಿದೆ. ಕುಡಿಯುವ ನೀರಿನ ಯೋಜನೆಗಳಾದ ಮೇಕೆದಾಟು, ಕಳಸಾ ಬಂಡೂರಿಗೆ ಅನುಮತಿ ನೀಡುವುದು ಹಾಗೂ ಕೃಷ್ಣಾ ನದಿನೀರಿನ ನ್ಯಾಯಾಧಿಕರಣ ತೀರ್ಪಿನ ಅಧಿಸೂಚನೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ರಾಜ್ಯದ ಜನ ಬಿಜೆಪಿ ಹಾಗೂ ಜೆಡಿಎಸ್‌‍ ಪಕ್ಷಕ್ಕೆ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ 3ನೇ ಬಾರಿಗೆ ಅಧಿಕಾರಕ್ಕೆ ಬರಲು ಕರ್ನಾಟಕದ ಕೊಡುಗೆ ಮಹತ್ವದ್ದಾಗಿದೆ. ಆದಾಗ್ಯೂ ಬಿಜೆಪಿ ಸಂಸದರು ರಾಜ್ಯದ ಪರವಾಗಿ ದನಿ ಎತ್ತುತ್ತಿಲ್ಲ ಎಂದು ಆಕ್ಷೇಪಿಸಿದರು.

ಎಲ್ಲಾ ಸಂಸದರು ಒಟ್ಟಾಗಿ ನೀರಾವರಿ ಯೋಜನೆ ಪರವಾಗಿ ದನಿಯೆತ್ತಿ ಅನುಮತಿ ಕೊಡಿಸಿದರೆ ರೈತರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವರು, ಸಂಸದರು, ರಾಜ್ಯ ಸರ್ಕಾರ ಒಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲ ಬೆಂಗಳೂರಿನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹೇಳಿದ್ದಾರೆ ಎಂದರೆ ಅವರಿಗೆ ಮಾಹಿತಿ ಇರಬಹುದು. ಅವರು ಬಹಳ ಹಿರಿಯರು. ಅಷ್ಟು ದೊಡ್ಡ ಮಂತ್ರಿಯಾದ ಮೇಲೆ ಎಲ್ಲಾ ರೀತಿಯ ಮಾಹಿತಿಗಳೂ ಅವರಿಗೆ ಇರುತ್ತದೆ. ನಾನು ಸಣ್ಣ ಕಾರ್ಯಕರ್ತ. ನನಗೆ ಮಾಹಿತಿ ಇಲ್ಲ ಎಂದು ಲೇವಡಿ ಮಾಡಿದರು.

RELATED ARTICLES

Latest News