ಬೆಂಗಳೂರು,ಮೇ 9- ವಿಧಾನಪರಿಷತ್‌ನ ಆರು ಸದಸ್ಯ ಸ್ಥಾನಗಳ ಆಯ್ಕೆಗಾಗಿ ಇಂದು ಚುನಾವಣಾ ಅಧಿಸೂಚನೆ ಪ್ರಕಟವಾಗಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆಯೂ ಆರಂಭವಾಗಿದೆ. ಶಿಕ್ಷಕರ ಕ್ಷೇತ್ರದಿಂದ ಮೂರು ಹಾಗೂ ಪದವೀಧರ ಕ್ಷೇತ್ರದಿಂದ ಮೂರು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು, ಸ್ಪರ್ಧಿಸಿದ್ದ ಬಿಜೆಪಿ-ಜೆಡಿಎಸ್ ಪಕ್ಷಗಳು ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಮುಂದುವರಿಸುವ ಅಥವಾ ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧಾರ ಪ್ರಕಟಿಸಿಲ್ಲ. ಹೀಗಾಗಿ ಉಭಯ ಪಕ್ಷಗಳ ಸ್ಪರ್ಧಾಕಾಂಕ್ಷಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ಬಿಜೆಪಿಯೊಂದಿಗೆ ದೀರ್ಘ ಕಾಲದವರೆಗೆ ಮೈತ್ರಿ ಮಾಡಿಕೊಂಡಿರುವುದಾಗಿ ಜೆಡಿಎಸ್ ಪ್ರಕಟಿಸಿದೆ. ಆದರೆ, ಬಿಜೆಪಿಯು ಹಾಸನದ ಪೆನ್‌ಡ್ರೈವ್ ಪ್ರಕರಣದ ನಂತರ ಯಾವ ನಿಲುವು ತಳೆಯಲಿದೆ ಎಂಬುದನ್ನು ಕಾದುನೋಡಬೇಕಿದೆ.
ಆಡಳಿತಾರೂಢ ಕಾಂಗ್ರೆಸ್ ಚುನಾವಣಾ ವೇಳಾಪಟ್ಟಿ ಪ್ರಕಟಣೆಗೂ ಮುನ್ನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪ್ರಕಟಿಸಿತ್ತು. ಮೈತ್ರಿ ವಿಚಾರ ನಿರ್ಧಾರವಾಗದ ಹಿನ್ನೆಯಲ್ಲಿ ಇನ್ನೂ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ.ವಿಧಾನ ಪರಿಷತ್ ಸದಸ್ಯರಾಗಿದ್ದ ಆಯನೂರು ಮಂಜುನಾಥ್ ಮತ್ತು ಮರಿತಿಬ್ಬೇಗೌಡ ಅವರು ರಾಜೀನಾಮೆ ನೀಡಿರುವುದರಿಂದ ತೆರವಾಗಿರುವ ಎರಡು ಸ್ಥಾನ ಹಾಗೂ ಡಾ.ಚಂದ್ರಶೇಖರ ಬಿ.ಪಾಟೀಲ, ಎ.ದೇವೇಗೌಡ, ಡಾ.ವೈ.ಎ.ನಾರಾಯಣಸ್ವಾಮಿ, ಎಸ್.ಎಲ್.ಬೋಜೇಗೌಡ ಅವರು ಜೂ.21ರಂದು ನಿವೃತ್ತಿ ಹೊಂದುವುದರಿಂದ ತೆರವಾಗುವ ನಾಲ್ಕು ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ, ಕರ್ನಾಟಕ ನೈರುತ್ಯ ಪದವೀಧರ, ಬೆಂಗಳೂರು ಪದವೀಧರ ಹಾಗೂ ಕರ್ನಾಟಕ ಆಗ್ನೇಯ ಶಿಕ್ಷಕರ, ಕರ್ನಾಟಕ ನೈರುತ್ಯ ಶಿಕ್ಷಕರ ಮತ್ತು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಭಾರತದ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.
ಇಂದಿನಿಂದ ಮೇ 16ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಮೇ 17ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ 20ರಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ. ಜೂ.3ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಜೂ.6ರಂದು ಮತ ಎಣಿಕೆ ನಡೆಯಲಿದೆ.
ವಿಧಾನಪರಿಷತ್‌ನ ಚುನಾವಣಾ ವೇಳಾಪಟ್ಟಿ ಮೇ 2ರಂದು ಪ್ರಕಟವಾಗಿದ್ದು, ಅಂದಿನಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಈಶಾನ್ಯ, ನೈರುತ್ಯ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರಗಳಲ್ಲಿ 3,24,502 ಮತದಾರರು ಇದ್ದು, 1,81,391 ಪುರುಷರು 1,43,075 ಮಹಿಳೆಯರು ಹಾಗೂ 36 ಇತರೆ ಮತದಾರರು ಇದ್ದಾರೆ. ಆಗ್ನೇಯ, ನೈರುತ್ಯ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರಗಳಲ್ಲಿ 61,273 ಮತದಾರರು ಇದ್ದು ಈ ಪೈಕಿ 33,977 ಪುರುಷರು 27,294 ಮಹಿಳೆ ಹಾಗೂ ಇತರೆ 2 ಮತದಾರರು ಇದ್ದಾರೆ.