Friday, November 22, 2024
Homeರಾಜ್ಯಎಲೆಕ್ಟ್ರೋ ಬಾಂಡ್ ಹಗರಣ : ಪೊಲೀಸ್ ತನಿಖೆ ಚುರುಕು

ಎಲೆಕ್ಟ್ರೋ ಬಾಂಡ್ ಹಗರಣ : ಪೊಲೀಸ್ ತನಿಖೆ ಚುರುಕು

Electoral Bond Scam

ಬೆಂಗಳೂರು,ಸೆ.29- ಎಲೆಕ್ಟ್ರೋಲ್ ಬಾಂಡ್ ಹಗರಣ ದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿರುವ ತಿಲಕ್ನಗರ ಠಾಣೆಯ ಪೊಲೀಸರು ಪ್ರಾಥಮಿಕ ಮಾಹಿತಿ ಹಾಗೂ ದಾಖಲಾತಿಗಳನ್ನು ಕಲೆ ಹಾಕಲಾರಂಭಿಸಿದ್ದು, ದೂರು ದಾರರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಪ್ರಕಾರ, ಜನಾಧಿಕಾರ ಸಂಘರ್ಷ ಪರಿಷತ್ನ ಸಹ ಅಧ್ಯಕ್ಷ ಆದರ್ಶ ಅಯ್ಯರ್ ಅವರ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.ಆದರ್ಶ ಅಯ್ಯರ್ ಅವರಿಂದ ಹೇಳಿಕೆಗಳನ್ನು ಪಡೆದುಕೊಳ್ಳಲಾಗಿದ್ದು, ಅವರ ಬಳಿಯಿರುವ ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದೆ.

ದೂರುದಾರರ ಆರೋಪಗಳು ಹಾಗೂ ಅದಕ್ಕೆ ಪೂರಕವಾದ ದಾಖಲೆಗಳನ್ನು ವಿಶ್ಲೇಷಣೆ ನಡೆಸಲಾಗುತ್ತಿದೆ. ಎಲೆಕ್ಟ್ರೋಲ್ ಬಾಂಡ್ ರಾಷ್ಟ್ರಮಟ್ಟದ ಹಗರಣವಾಗಿದ್ದು, ಸುಪ್ರೀಂಕೋರ್ಟ್ನಲ್ಲಿ ಈಗಾಗಲೇ ವಿಚಾರಣೆಯ ಹಂತದಲ್ಲಿದೆ. ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಬಳಕೆ ಮಾಡಿಕೊಂಡು ದಾಳಿ ನಡೆಸಿ, ಬೆದರಿಸಿ ಎಲೆಕ್ಟ್ರೋಲ್ ಬಾಂಡ್ಗಳನ್ನು ಖರೀದಿಸುವಂತೆ ಮಾಡಲಾಗಿದೆ ಎಂಬ ಆರೋಪವನ್ನು ವಿರೋಧಪಕ್ಷಗಳು ಮಾಡಿವೆ.

ಇದಕ್ಕೆ ತಕ್ಕ ಹಾಗೆ ಎಲೆಕ್ಟ್ರೋಲ್ ಬಾಂಡ್ನಲ್ಲಿ ಅಧಿಕಾರರೂಢ ಬಿಜೆಪಿ ಹೆಚ್ಚು ಪಾಲು ಹೊಂದಿರುವುದು ಚರ್ಚೆಗೆ ಗ್ರಾಸವಾಗಿತ್ತು. ದೂರುದಾರರಾದ ಆದರ್ಶ ಅಯ್ಯರ್ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ದಾಳಿ ಹಾಗೂ ಅದೇ ಟೈಮ್ಲೈನ್ನಲ್ಲಿ ಎಲೆಕ್ಟ್ರೋಲ್ ಬಾಂಡ್ ಖರೀದಿ ಆಗಿರುವುದರಿಂದ ಹಗರಣಗಳು ಆಗಿವೆ ಎಂದು ಆರೋಪಿಸಿದ್ದರು.ಕಳೆದ ಮಾರ್ಚ್ನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ರಾಜ್ಯ ಬಿಜೆಪಿಯ ನಳಿನ್ಕುಮಾರ್ ಕಟೀಲ್, ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವರ ವಿರುದ್ಧ ದೂರುಗಳನ್ನು ನೀಡಿದ್ದರು. ಆದರೆ ಅದು ದಾಖಲಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದರು. ಎರಡು ದಿನಗಳ ಹಿಂದೆ ನ್ಯಾಯಾಲಯ ಆದೇಶ ನೀಡಿದ್ದು, ಅದರಂತೆ ಪ್ರಕರಣ ದಾಖಲಾಗಿದೆ. ತನಿಖೆಗೆ ಒಬ್ಬರು ಎಸಿಪಿ ಹಾಗೂ ಇಬ್ಬರು ಇನ್ಸ್ ಪೆಕ್ಟರ್ಗಳ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ದೂರುದಾರರು ಹೇಳಿದಂತೆ ಆರ್ಥಿಕ ವಹಿವಾಟು ಹಾಗೂ ಎಲೆಕ್ಟ್ರೋಲ್ ಬಾಂಡ್ ಖರೀದಿಯ ಟೈಮ್ಲೈನ್ ಹೊಂದಾಣಿಕೆಯಾಗಲಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಪ್ರಾಥಮಿಕ ತನಿಖೆ ಪೂರ್ಣಗೊಂಡ ಬಳಿಕ ಪ್ರತಿವಾದಿಗಳಿಗೆ ನೋಟಿಸ್ ನೀಡುವ ಬಗ್ಗೆಯೂ ಅಧಿಕಾರಿಗಳು ಕಾನೂನು ತಜ್ಞರ ಸಲಹೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.ಎಸ್ಐಟಿ ರಚನೆ : ರಾಷ್ಟ್ರಮಟ್ಟದ ಈ ಹಗರಣದ ತನಿಖೆಗೆ ವಿಶೇಷ ತನಿಖಾ ದಳ ರಚಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಸ್ಥಳೀಯ ಪೊಲೀಸರು ತನಿಖೆ ನಡೆಸಲು ಕಷ್ಟಸಾಧ್ಯವಾಗುವುದರಿಂದ ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು ರಚಿಸಿ ತನಿಖೆ ನಡೆಸುವ ಮೂಲಕ ಕೇಂದ್ರ ಬಿಜೆಪಿಗೆ ಸೆಡ್ಡು ಹೊಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಈ ಬಗ್ಗೆ ಸೋಮವಾರ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News